ADVERTISEMENT

ದಶಕದ ಬಳಿಕ ಸಂಗೇನಹಳ್ಳಿಗೆ ಶುದ್ಧ ನೀರು

₹ 10 ಲಕ್ಷ ವೆಚ್ಚದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 4:51 IST
Last Updated 12 ಆಗಸ್ಟ್ 2021, 4:51 IST
ಹಿರಿಯೂರು ತಾಲ್ಲೂಕಿನ ಸಂಗೇನಹಳ್ಳಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು
ಹಿರಿಯೂರು ತಾಲ್ಲೂಕಿನ ಸಂಗೇನಹಳ್ಳಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು   

ಸಂಗೇನಹಳ್ಳಿ (ಹಿರಿಯೂರು): ಸ್ವಾತಂತ್ರ್ಯಾನಂತರ ತಾಲ್ಲೂಕಿನ ಸಂಗೇನಹಳ್ಳಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ದೊರೆತಿದ್ದು, ಇದಕ್ಕೆ ಕಾರಣರಾದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಗ್ರಾಮದ ಮಹಿಳೆಯರು ಅಭಿನಂದಿಸಿದರು.

ಮಂಗಳವಾರ ಸಂಗೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೂರ್ಣಿಮಾ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು.

‘ನಮ್ಮೂರಿನ ಜನ ಹಲವು ದಶಕಗಳಿಂದ ತೋಟದ ಬಾವಿಗಳಿಂದ ನೀರು ತರುತ್ತಿದ್ದರು. ನಂತರ ಕೊಳವೆಬಾವಿ ಬಂತು. ಅದೂ ಸರಿಯಾಗಿ ಕೆಲಸ ನಿರ್ವಹಿಸಲಿಲ್ಲ. ಗ್ರಾಮದ ಸಮೀಪ ಹರಿಯುವ ವೇದಾವತಿ ನದಿಯಿಂದ ಪೈಪ್‌ಲೈನ್ ಮಾಡಿದ್ದರು. ಬೇಸಿಗೆಯಲ್ಲಿ ನೀರಿಗೆ ತೊಂದರೆ ಆಗುತ್ತಿತ್ತು. ಜನರ ಒತ್ತಾಯಕ್ಕೆ ಮಣಿದ ಗ್ರಾಮ ಪಂಚಾಯಿತಿಯವರು ಕೊಳವೆಬಾವಿ ಕೊರೆಸಿದ್ದರು. ಅದರಲ್ಲಿ ಫ್ಲೋರೈಡ್ ಯಥೇಚ್ಛವಾಗಿತ್ತು. ನಾಲ್ಕು ಕಿ.ಮೀ. ದೂರದಲ್ಲಿನ ಅಬ್ಬಿನಹೊಳೆ ಅಥವಾ ಶಿಡ್ಲಯ್ಯನಕೋಟೆ ಗ್ರಾಮಗಳಿಂದ ನೀರು ತರುತ್ತಿದ್ದೆವು. ಪೂರ್ಣಿಮಾ ಶ್ರೀನಿವಾಸ್ ಅವರು ನಮ್ಮ ಮನವಿಗೆ ಸ್ಪಂದಿಸಿ ₹ 10 ಲಕ್ಷ ವೆಚ್ಚದಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿರುವುದು ಶ್ಲಾಘನೀಯ’ ಎಂದು ಸಂಗೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಇಂದಿರಾ ಹೇಳಿದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್, ‘ಶಿಡ್ಲಯ್ಯನಕೋಟೆ–ಸಂಗೇನಹಳ್ಳಿಗೆ ಸಂಪರ್ಕ ಕಲ್ಪಿಸಲು ವೇದಾವತಿ ನದಿಗೆ ಸೇತುವೆ ನಿರ್ಮಿಸಿದರೆ 3 ಕಿ.ಮೀ ದೂರ ಕಡಿಮೆ ಆಗುತ್ತದೆ. ಜನರುಚಿಕ್ಕ ಸೇತುವೆಯಾದರೂ ಮಾಡಿಸಿಕೊಡಿ’ ಎಂದು ಮನವಿ ಮಾಡಿದರು.

‘ಶುದ್ಧ ಕುಡಿಯುವ ನೀರಿಗೆ ಗ್ರಾಮಸ್ಥರು ದಶಕಗಳಿಂದ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಾಗ, ಘಟಕ ಮಂಜೂರು ಮಾಡಿಸಿದೆ. ಆರೋಗ್ಯ, ಶಿಕ್ಷಣ, ರಸ್ತೆ ಸಂಪರ್ಕಕ್ಕೆ ಹೆಚ್ಚು ಒತ್ತು ನೀಡಿದ್ದೇನೆ’ ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ಮುಖಂಡರಾದ ರಂಗಸ್ವಾಮಿ, ತಿಪ್ಪೇಸ್ವಾಮಿ, ನರಸಿಂಹಮೂರ್ತಿ, ಲಿಂಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.