ADVERTISEMENT

ಹಿರಿಯೂರಿಗೆ ಸಿಎಂ ಆಗಮನ: ಬೆಟ್ಟದಷ್ಟು ನಿರೀಕ್ಷೆ ಹೊತ್ತ ಜನ

ಇಂದು ವಿವಿ ಸಾಗರಕ್ಕೆ ಬಾಗಿನ ಅರ್ಪಿಸಲಿರುವ ಮುಖ್ಯಮಂತ್ರಿ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 6:52 IST
Last Updated 22 ನವೆಂಬರ್ 2022, 6:52 IST
ಹಿರಿಯೂರು ತಾಲ್ಲೂಕಿನಲ್ಲಿರುವ ವಾಣಿವಿಲಾಸ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿರುವುದು.
ಹಿರಿಯೂರು ತಾಲ್ಲೂಕಿನಲ್ಲಿರುವ ವಾಣಿವಿಲಾಸ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿರುವುದು.   

ಸುವರ್ಣಾ ಬಸವರಾಜ್‌

ಹಿರಿಯೂರು: 89 ವರ್ಷಗಳ ನಂತರ ಕೋಡಿ ಬಿದ್ದಿರುವ ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ.22ರಂದು ತಾಲ್ಲೂಕಿನ ವಾಣಿವಿಲಾಸಪುರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಜನರು ಹತ್ತಾರು ಬೇಡಿಕೆಗಳ ಒಪ್ಪಿಗೆಗೆ ಕಾತುರದಿಂದ ಕಾಯುತ್ತಿದ್ದಾರೆ.

ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸುವ ಅವಕಾಶ ಪಡೆದಿರುವ ಮೊದಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾಗಿದ್ದಾರೆ ಎನ್ನುವ ಚರ್ಚೆಗಳೂ ನಡೆದಿವೆ. ಬೊಮ್ಮಾಯಿಯವರು 2008ರಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಒಪ್ಪಿಗೆ ನೀಡಿದ್ದರು. ಅದರಿಂದಾಗಿ ಭದ್ರಾ ಜಲಾಶಯದಿಂದ ತಾತ್ಕಾಲಿಕ ಮಾರ್ಗದಲ್ಲಿ 16 ಟಿಎಂಸಿ ಅಡಿ ನೀರು ವಾಣಿವಿಲಾಸಕ್ಕೆ ಹರಿದು ಬಂದಿದೆ. ಆಗ ತಾತ್ಕಾಲಿಕವಾಗಿ ಮೀಸಲಿಟ್ಟಿದ್ದ 5 ಟಿಎಂಸಿ ಅಡಿ ನೀರನ್ನು 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 2 ಟಿಎಂಸಿ ಅಡಿಗೆ ಇಳಿಸುವ ಮೂಲಕ ತಾಲ್ಲೂಕಿನ ಜನರಿಗೆ ಅನ್ಯಾಯ ಎಸಗಿದ್ದು, 5 ಟಿಎಂಸಿ ಅಡಿ ನೀರಿನ ಶಾಶ್ವತ ಆದೇಶ ಮಾಡುವ ಮೂಲಕ ಸರಿಪಡಿಸಬೇಕು ಎಂಬುದು ತಾಲ್ಲೂಕಿನ ಜನರ ಪ್ರಮುಖ ಬೇಡಿಕೆಯಾಗಿದೆ.

ADVERTISEMENT

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನಿಗದಿತ ಅವಧಿಯಲ್ಲಿ ಭದ್ರಾ ಕಾಮಗಾರಿ ಪೂರ್ಣಗೊಳಿಸಬೇಕು. ಸ್ಥಗಿತಗೊಂಡಿರುವ ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ಪುನರ್‌ ಆರಂಭಿಸಬೇಕು. ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗಕ್ಕೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕು. ಚಿತ್ರದುರ್ಗದಲ್ಲಿ ಶೀಘ್ರವೇ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಬೇಕು. ವಿಧಾನಸಭಾ ಚುನಾವಣೆ ಘೋಷಣೆ ಆಗುವುದರ ಒಳಗೆ ವೇದಾವತಿ ನದಿಯಿಂದ ಧರ್ಮಪುರ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟಿರುವ ಜನ, ಮುಖ್ಯಮಂತ್ರಿ ಅವರ ಸಕರಾತ್ಮಕ ಉತ್ತರದ ನಿರೀಕ್ಷೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.