ADVERTISEMENT

ತೆಂಗಿಗೆ ಬೆಂಕಿ ರೋಗ: ರೈತರ ಆತಂಕ

ಮಲ್ಲಾಡಿಹಳ್ಳಿ ಭಾಗದಲ್ಲಿ ರೋಗ ಉಲ್ಬಣ, ಕಪ್ಪು ಹುಳು ಜತೆಗೆ ಬಿಳಿನೊಣಗಳ ಬಾಧೆ

ಸಾಂತೇನಹಳ್ಳಿ ಸಂದೇಶ ಗೌಡ
Published 13 ಆಗಸ್ಟ್ 2022, 4:03 IST
Last Updated 13 ಆಗಸ್ಟ್ 2022, 4:03 IST
ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಗೇಟ್‌ನ ರಂಗನಾಥ್ ಎಂಬುವರ ತೋಟದಲ್ಲಿ ತೆಂಗಿನ ಮರಗಳಿಗೆ ಬೆಂಕಿ ರೋಗ ತಗುಲಿರುವುದು
ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಗೇಟ್‌ನ ರಂಗನಾಥ್ ಎಂಬುವರ ತೋಟದಲ್ಲಿ ತೆಂಗಿನ ಮರಗಳಿಗೆ ಬೆಂಕಿ ರೋಗ ತಗುಲಿರುವುದು   

ಹೊಳಲ್ಕೆರೆ: ತಾಲ್ಲೂಕಿನ ಮಲ್ಲಾಡಿಹಳ್ಳಿ, ದೊಗ್ಗನಾಳು ಭಾಗದಲ್ಲಿ ತೆಂಗಿನ ಮರಗಳಿಗೆ ಬೆಂಕಿ ರೋಗ ತಗುಲಿದ್ದು, ರೈತರು ಆತಂಕಗೊಂಡಿದ್ದಾರೆ.

ಮಲ್ಲಾಡಿಹಳ್ಳಿ ಗೇಟ್ ಭಾಗದ ಸುಮಾರು 150 ಹೆಕ್ಟೇರ್ ಪ್ರದೇಶದಲ್ಲಿ ರೋಗದ ತೀವ್ರತೆ ಹೆಚ್ಚಿದೆ.

ರಾಮಗಿರಿ ಹೋಬಳಿಯಲ್ಲಿ 700 ಹೆಕ್ಟೇರ್‌ನಲ್ಲಿ ರೋಗ ಹರಡಿದೆ. ತೆಂಗಿನ ಗರಿಗಳು ಸುಟ್ಟಂತಾಗಿದ್ದು, ಮರಗಳು ಒಣಗುವ ಭೀತಿ ಎದುರಾಗಿದೆ. ರೋಗ ಹೆಚ್ಚಾಗಿರುವುದರಿಂದ ಮರಗಳಲ್ಲಿ ತೆಂಗಿನ ಇಳುವರಿ ಕಡಿಮೆಯಾಗಿದೆ.

ADVERTISEMENT

‘ನಮ್ಮ ತೋಟದಲ್ಲಿ 110 ತೆಂಗಿನ ಮರಗಳಿದ್ದು, ಎಲ್ಲಾ ಮರಗಳಿಗೂ ರೋಗ ಬಿದ್ದಿದೆ. ತೆಂಗಿನ ಗರಿಯ ಒಳಗೆ ಹುಳುಗಳಿದ್ದು, ಇಡೀ ಗರಿಯನ್ನು ತಿಂದು ಹಾಕುತ್ತವೆ. ರೋಗ ಬರುವುದಕ್ಕೂ ಮೊದಲು ಪ್ರತಿ ಮರದಲ್ಲಿ 200ರಿಂದ 250 ತೆಂಗಿನ ಕಾಯಿಗಳು ಸಿಗುತ್ತಿತ್ತು. ಈಗ ಮರಕ್ಕೆ 10 ಕಾಯಿಯೂ ಸಿಗುತ್ತಿಲ್ಲ. ಹುಳು ಸುಳಿಗೆ ಹೋದರೆ ಮರವೇ ಒಣಗಿ ಹೋಗುತ್ತದೆ. ಕಷ್ಟ ಪಟ್ಟು ಬೆಳೆಸಿ ಫಸಲಿಗೆ ಬಂದ ತೋಟ ಒಣಗಿದರೆ ಗತಿ ಏನು?’ ಎಂದು ಮಲ್ಲಾಡಿಹಳ್ಳಿಯ ರೈತರಂಗನಾಥ್ ಆತಂಕ ವ್ಯಕ್ತಪಡಿಸಿದರು.

ಗ್ರಾಮದ ಅಂದಾನಪ್ಪ, ರಾಮಣ್ಣ, ಕೃಷ್ಣಮೂರ್ತಿ, ಮಹಲಿಂಗಪ್ಪ, ಪುಂಡಲೀಕ್, ವಸಂತ ಕುಮಾರ್, ರಂಗನಾಥ್ ಅವರ ತೋಟಗಳಿಗೂ ರೋಗ ಆವರಿಸಿದೆ.

‘30 ವರ್ಷಗಳಿಂಲೂ ಈ ಭಾಗದಲ್ಲಿ ಕಪ್ಪುತಲೆ ಹುಳು ಬಾಧೆ ಇದೆ. ಇದು ಬೇಸಿಗೆಯಲ್ಲಿ ಹೆಚ್ಚಾಗಿ ಮಳೆಗಾಲದಲ್ಲಿ ಕಡಿಮೆ ಆಗುತ್ತದೆ. ಇದರ ಜತೆಗೆ ರೂಗೋಸ್ ವೈಟ್ ಎಂಬ ನೊಣದ ಬಾಧೆಯೂಇದೆ. ಇದಕ್ಕೆ ಕೀಟನಾಶಕದ ಪರಿಹಾರ ಸದ್ಯಕ್ಕೆ ಇಲ್ಲ. ಬಿಳಿ ನೊಣಗಳನ್ನು ತಿನ್ನುವ ಹುಳುಗಳು ವಾತಾವರಣದಲ್ಲೇ ಉತ್ಪತ್ತಿ ಆಗಿವೆ. ನಾವುಕೀಟನಾಶಕ ಸಿಂಪಡಿಸಿದರೆ ನಿರೋಧಕ ಹುಳುಗಳ ಸಂಖ್ಯೆ ಕಡಿಮೆಯಾಗಿ
ರೋಗ ಉಲ್ಬಣಿಸಬಹುದು’ ಎನ್ನುತ್ತಾರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕುಮಾರ ನಾಯ್ಕ್.

‘ಕಪ್ಪುತಲೆ ಹುಳುಗಳು ತೆಂಗಿನ ಸುಳಿಗಳಿಗೆ ಹೋಗುವುದಿಲ್ಲ. ಮರಗಳು ಒಣಗಿದಂತೆ ಕಂಡರೂಒಣಗುವುದಿಲ್ಲ. ಮಳೆಗಾಲದಲ್ಲಿ ತಂತಾನೇ ರೋಗ ಕಡಿಮೆ ಆಗುತ್ತದೆ. ಕಪ್ಪುತಲೆ ಹುಳುಗಳನ್ನು ತಿನ್ನುವ ಗೋನಿಯೋಜಸ್ ಎಂಬ ಪರೋಪಜೀವಿಗಳುಲಭ್ಯವಿದ್ದು, ತೋಟಗಳಿಗೆ ಬಿಡಬಹುದು. ಈ ರೋಗ ಅಡಿಕೆಗೆ ಹರಡುವುದಿಲ್ಲ’ ಎನ್ನುತ್ತಾರೆ ಅವರು.

ತೆಂಗಿನ ಮರಗಳಿಗೆ ಬೆಂಕಿ ರೋಗ ತಗುಲಿರುವುದರಿಂದ ಇಳುವರಿ ಕಡಿಮೆ ಆಗಿದೆ. ರೋಗ ಹೆಚ್ಚಾದರೆ ತೋಟವೇ ಒಣಗಿ ಹೋಗುವ ಆತಂಕ ಇದೆ.

–ರಂಗನಾಥ್, ರೈತ, ಮಲ್ಲಾಡಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.