ADVERTISEMENT

ಮ್ಯಾನ್‌ಹೋಲ್: ಐವರ ವಿರುದ್ಧ ಪ್ರಕರಣ ದಾಖಲು

ನಗರಸಭೆಯಿಂದ ಈ ಕೆಲಸ ಮಾಡಿಸಿಲ್ಲ; ಪೌರಾಯುಕ್ತ ಚಂದ್ರಪ್ಪ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 19:46 IST
Last Updated 14 ಅಕ್ಟೋಬರ್ 2018, 19:46 IST

ಚಿತ್ರದುರ್ಗ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಖಾಸಗಿ ವ್ಯಕ್ತಿಗಳನ್ನು ಮ್ಯಾನ್‌ಹೋಲ್ ಇಳಿಸಿ ಸ್ವಚ್ಛಗೊಳಿಸಿರುವ ಸಂಬಂಧ ಬೆಂಗಳೂರಿನ ಗುತ್ತಿಗೆದಾರ ಸೇರಿ ಒಟ್ಟು ಐದು ಮಂದಿ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಆವರಣದ ಸ್ವಚ್ಛತೆ, ಅದರ ವ್ಯಾಪ್ತಿಯಲ್ಲಿನ ಸ್ವಚ್ಛತೆ, ಕಸ ವಿಲೇವಾರಿ ನಿರ್ವಹಿಸಲು ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ 2017ರಿಂದ 2020ರವರೆಗೆ ಬೆಂಗಳೂರಿನ ಗೋವಿಂದೂರು ವೆಂಕಪ್ಪ ಹೆಗ್ಡೆ ಅವರಿಗೆ ಗುತ್ತಿಗೆ ನೀಡಿದ್ದಾರೆ’ ಎಂದು ನಗರಸಭೆ ಪೌರಾಯುಕ್ತ ಚಂದ್ರಪ್ಪ ತಿಳಿಸಿದ್ದಾರೆ.

‘ನಗರಸಭೆಗೆ ಸಂಬಂಧಪಡದ ಖಾಸಗಿ ವ್ಯಕ್ತಿಗಳಿಂದ ಮ್ಯಾನ್‌ಹೋಲ್ ಸ್ವಚ್ಛತೆ ಕಾರ್ಯವನ್ನು ಸುರಕ್ಷತಾ ಪರಿಕರಗಳಿಲ್ಲದೆ ಮಾಡಿಸಿರುವ ಕಾರಣ ರಾಜ್ಯ ನಾಗರಿಕ ಹಕ್ಕುಗಳ ಸಂರಕ್ಷಣಾ ಅಧಿನಿಯಮದ ಪ್ರಕಾರ ಸಂಬಂಧಪಟ್ಟ ಗುತ್ತಿಗೆದಾರ, ಸ್ಥಳೀಯರಾದ ರಾಜು,ಮೂರ್ತಿ, ತಿಪ್ಪೇಶ್, ನಾಗರಾಜ್ ಎಂಬುವವರ ವಿರುದ್ಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ನಗರಸಭೆಯ ಗುತ್ತಿಗೆದಾರರಾಗಲೀ, ಪೌರಕಾರ್ಮಿಕರಾಗಲೀ, ಹೊರಗುತ್ತಿಗೆ ಪೌರಕಾರ್ಮಿಕರಾಗಲೀ ಈ ಕೆಲಸ ಮಾಡಿಲ್ಲ. ಮ್ಯಾನ್‌ಹೋಲ್ ಸ್ವಚ್ಛತೆಗಾಗಿಯೇ ನಮ್ಮ ಕಚೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಸುರಕ್ಷತಾ ದಿರಿಸುಗಳು, ಅತ್ಯಾಧುನಿಕ ಯಂತ್ರೋಪಕರಣ, ಆಕ್ಸಿಜನ್ ಸಿಲಿಂಡರ್, ಇತರೆ ಉಪಕರಣಗಳಿವೆ. ಕೆಎಸ್‌ಆರ್‌ಟಿಸಿ ಸ್ವಚ್ಛತಾ ಗುತ್ತಿಗೆದಾರರು ನಗರಸಭೆಗೆ ಯಾವುದೇ ಮಾಹಿತಿ ನೀಡದೆ ನೇರವಾಗಿ ಮಾಡಿಸಿರುವ ಕುರಿತು ನಗರಸಭೆಗೆ ಮಾಹಿತಿ ಇಲ್ಲ’ ಎಂದು ಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.