ADVERTISEMENT

ಹಿರಿಯೂರು| ಮುಸ್ಲಿಂ ಮೀಸಲಾತಿ ಮುಂದುವರಿಸಿ: ಬಿಎಸ್‌ಪಿ ಪ್ರತಿಭಟನೆ

ಬಹುಜನ ಸಮಾಜ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 5:24 IST
Last Updated 2 ಏಪ್ರಿಲ್ 2023, 5:24 IST
2 ಬಿ ಮೀಸಲಾತಿಯನ್ನು ಮುಂದುವರಿಸುವಂತೆ ಒತ್ತಾಯಿಸಿ ಹಿರಿಯೂರಿನಲ್ಲಿ ಶನಿವಾರ ಬಹುಜನ ಸಮಾಜ ಪಾರ್ಟಿ ನೇತೃತ್ವದಲ್ಲಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.
2 ಬಿ ಮೀಸಲಾತಿಯನ್ನು ಮುಂದುವರಿಸುವಂತೆ ಒತ್ತಾಯಿಸಿ ಹಿರಿಯೂರಿನಲ್ಲಿ ಶನಿವಾರ ಬಹುಜನ ಸಮಾಜ ಪಾರ್ಟಿ ನೇತೃತ್ವದಲ್ಲಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.   

ಹಿರಿಯೂರು: ಮುಸ್ಲಿಮರಿಗೆ ಈ ಹಿಂದೆ ಇದ್ದ ‘2 ಬಿ’ ಮೀಸಲಾತಿಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿ ಶನಿವಾರ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

‘ಮುಸ್ಲಿಮರಿಗೆ ಅನ್ಯಾಯ ಮಾಡಿಲ್ಲ. ಆರ್ಥಿಕವಾಗಿ ಹಿಂದುಳಿದವರ ಪಟ್ಟಿಗೆ ಸೇರಿಸಿದ್ದು, ಶೇ 10ರ ಮೀಸಲಾತಿ ಲಾಭ ಪಡೆಯಲಿದ್ದಾರೆ ಎಂದು ಸರ್ಕಾರ ಹಸಿ ಸುಳ್ಳು ಹೇಳಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ತುಂಬಾ ಹಿಂದುಳಿದಿರುವ ಸಮುದಾಯದವರು ಆರ್ಥಿಕವಾಗಿ ಹಿಂದುಳಿದವರ ಪಟ್ಟಿಯಲ್ಲಿರುವ ಬ್ರಾಹ್ಮಣರು, ವೈಶ್ಯರೊಂದಿಗೆ ಸ್ಪರ್ಧಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಈಗ ಬದಲಾಗಿರುವ ಮೀಸಲಾತಿ ಅನ್ವಯ ಮುಸ್ಲೀಮರು ವೈದ್ಯ, ಎಂಜಿನಿಯರಿಂಗ್, ದಂತವೈದ್ಯ ಪದವಿ ಪಡೆಯುವುದು ಕನಸಿನ ಮಾತು. ಪ್ರತಿ ವರ್ಷ 2000 ಉದ್ಯೋಗಗಳು ಕೈ ತಪ್ಪಲಿವೆ. ಭವಿಷ್ಯದಲ್ಲಿ ವಿದ್ಯಾವಂತ ಮುಸ್ಲಿಮರನ್ನು ನೋಡುವುದೇ ಅಪರೂಪ ಆಗುತ್ತದೆ. ಮೀಸಲಾತಿ ಮುಂದುವರಿಸದಿದ್ದರೆ ಬೃಹತ್ ಹೋರಾಟ ನಡೆಸಬೇಕಾಗುತ್ತದೆ’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ADVERTISEMENT

ಬಿಎಸ್‌ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ, ಜಿಲ್ಲಾ ಕಾರ್ಯದರ್ಶಿ ಎಂ. ಜಗದೀಶ್, ಜಿ. ರಾಘವೇಂದ್ರ, ಎನ್. ಮಹಲಿಂಗಪ್ಪ, ಎಂ.ಡಿ. ಕೋಟೆ ಚಂದ್ರಣ್ಣ, ಮಾರುತೇಶ್, ಹೆಗ್ಗೆರೆ ಮಂಜು, ಎನ್. ರಂಗಸ್ವಾಮಿ, ಕೃಷ್ಣಮೂರ್ತಿ, ಎಸ್‌ಡಿಪಿಐ ತಾಲ್ಲೂಕು ಅಧ್ಯಕ್ಷ ಸುಹೇಲ್, ಉಪಾಧ್ಯಕ್ಷ ಜಮೀರ್, ನಜೀರ್, ನವಾಜ್, ಉಮರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.