ADVERTISEMENT

ಲೋಕ ಅದಾಲತ್: ‘ವರ್ಚುವಲ್‌’ನಲ್ಲೇ ಪ್ರಕರಣ ಇತ್ಯರ್ಥ

ಆ.14ರಂದು ಮೆಗಾ ಲೋಕ ಅದಾಲತ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 15:43 IST
Last Updated 11 ಆಗಸ್ಟ್ 2021, 15:43 IST

ಚಿತ್ರದುರ್ಗ: ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಬಗೆಹರಿಸಿಕೊಳ್ಳುವ ಮನಸಿದ್ದರೆ ಮನೆಯಲ್ಲೇ ಕುಳಿತು ಕಲಾಪದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಆ.14ರಂದು ಹಮ್ಮಿಕೊಂಡ ಲೋಕ ಅದಾಲತ್‌ನಲ್ಲಿ ‘ವರ್ಚುವಲ್‌’ ಮೂಲಕವೂ ಪ್ರಕರಣ ಇತ್ಯರ್ಥಪಡಿಸಲಾಗುತ್ತದೆ.

‘ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲದವರು ವರ್ಚುವಲ್‌ ಕಲಾಪದಲ್ಲಿಯೂ ಭಾಗಿಯಾಗಬಹುದು. ಕಾನೂನು ಸೇವಾ ಪ್ರಾಧಿಕಾರ ಸಂಪರ್ಕಿಸಿ ಮಾಹಿತಿ ನೀಡಿದರೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗುವುದು. ವರ್ಚುವಲ್‌ ಕಲಾಪಕ್ಕೆ ಕಕ್ಷಿದಾರರಿಂದ ಕೋರಿಕೆ ಬಂದಿಲ್ಲ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮನಗೂಳಿ ಎಂ.ಪ್ರೇಮಾವತಿ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಬ್ಯಾಂಕ್‌ ಪ್ರಕರಣ, ಅಪಘಾತ ಪರಿಹಾರ ವ್ಯಾಜ್ಯ, ವಿದ್ಯುತ್‌, ನೀರಿನ ಶುಲ್ಕ, ಕೌಟುಂಬಿಕ ಪ್ರಕರಣ, ಭೂಸ್ವಾಧೀನ, ವಿಮೆಗೆ ಸಂಬಂಧಿಸಿದ ಪ್ರಕರಣ ಬಗೆಹರಿಸಿಕೊಳ್ಳಲು ಅವಕಾಶವಿದೆ. ಇದು ಕಕ್ಷಿದಾರರ ನಡುವೆ ಬಾಂಧವ್ಯ ಮೂಡಿಸಲು ನೆರವಾಗಲಿದೆ. ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನೂ ಮರಳಿ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯ ಹಲವು ನ್ಯಾಯಾಲಯಗಳಲ್ಲಿ 36,570 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಆ.14ರಂದು ನಡೆಯುವ ಅದಾಲತ್‌ಗೆ 5,725 ಪ್ರಕರಣ ಕೈಗೆತ್ತಿಕೊಳ್ಳಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 08194–222322, 9449684954 ಸಂಪರ್ಕಿಸಬಹುದು’ ಎಂದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಕೆ.ಗಿರೀಶ್‌, ವಕೀಲರ ಸಂಘದ ಅಧ್ಯಕ್ಷ ಶಿವು ಯಾದವ, ಪ್ರಧಾನ ಕಾರ್ಯದರ್ಶಿ ಎಂ.ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.