ಹಿರಿಯೂರು: ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ ಎಂದು ನಟ ಕಮಲ್ ಹಾಸನ್ ನೀಡಿದ್ದ ಹೇಳಿಕೆ ಕುರಿತು ಮಂಗಳವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ವ್ಯಕ್ತಪಡಿಸಿರುವ ಮಾತುಗಳು ಬಹುಭಾಷಾ ನಟನಿಗೆ ತಪರಾಕಿ ಹಾಕಿದೆ. ಇನ್ನಾದರೂ ಇಂತಹ ಹೇಳಿಕೆಗಳಿಂದ ಕಮಲ್ ದೂರ ಇರುವುದು ಒಳಿತು ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಅಭಿನಂದನ್ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಯಾವುದೇ ಒಂದು ಭಾಷೆ ಇಡಿಯಾಗಿ ಮತ್ತೊಂದು ಭಾಷೆಯಿಂದ ಹುಟ್ಟಿ ಬರಲು ಸಾಧ್ಯವಿಲ್ಲ. ಹೆಚ್ಚಂದರೆ ಪ್ರೇರಣೆಗೆ ಒಳಗಾಗಿರಬಹುದು. ಕನ್ನಡ ಭಾಷೆಯ ಇತಿಹಾಸ, ಸಂಸ್ಕೃತಿಯನ್ನು ಅರಿಯದೇ ದಾರ್ಷ್ಟ್ಯದ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಕಮಲ್ ಹಾಸನ್ ತಕ್ಷಣ ಕನ್ನಡಿಗರ ಕ್ಷಮೆಯಾಚಿಸುವ ಮೂಲಕ ಉಳಿದಿರುವ ಅಲ್ಪಸ್ವಲ್ಪ ಮರ್ಯಾದೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಕಮಲ್ ಹಾಸನ್ ತರಹದ ಉದ್ಧಟತನದ ವ್ಯಕ್ತಿಗಳು ನಟಿಸಿರುವ ಚಿತ್ರಗಳನ್ನು ರಾಜ್ಯದಲ್ಲಿ ಪ್ರದರ್ಶಿಸಬಾರದು. ಜೊತೆಗೆ ಯಾರೇ ಕನ್ನಡ ಭಾಷಾ ವಿರೋಧಿಗಳಿದ್ದರೂ ಅಂತಹವರನ್ನು ರಾಜ್ಯದೊಳಗೆ ಸೇರಿಸಬಾರದು ಎಂದು ಅಭಿನಂದನ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.