ADVERTISEMENT

ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ: ಚಿತ್ರದುರ್ಗ ಜಿಲ್ಲಾಧಿಕಾರಿ ಮನವಿ

ವಾರಾಂತ್ಯದ ಕರ್ಫ್ಯೂ ಇನ್ನಷ್ಟು ಬಿಗಿ, ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಮನವಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 15:33 IST
Last Updated 23 ಏಪ್ರಿಲ್ 2021, 15:33 IST
ಕವಿತಾ ಎಸ್‌.ಮನ್ನಿಕೇರಿ
ಕವಿತಾ ಎಸ್‌.ಮನ್ನಿಕೇರಿ   

ಚಿತ್ರದುರ್ಗ: ಕೊರೊನಾ ಸೋಂಕಿನ ಸರಪಳಿಯನ್ನು ತುಂಡರಿಸುವ ಉದ್ದೇಶದಿಂದ ಅನುಷ್ಠಾನಗೊಳಿಸಿದ ವಾರಾಂತ್ಯದ ಕರ್ಫ್ಯೂ ಇನ್ನಷ್ಟು ಬಿಗಿಯಾಗಿದ್ದು, ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮನವಿ ಮಾಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆ ಬಳಿಕ ಹಣ್ಣು, ತರಕಾರಿ, ದಿನಸಿ ಅಂಗಡಿಗಳು ಕೂಡ ಬಾಗಿಲು ಮುಚ್ಚಲಿವೆ’ ಎಂದರು.

‘ಮೇ 4ರವರೆಗೆ ಸಭೆ, ಸಮಾರಂಭ ಆಯೋಜಿಸಲು ಅವಕಾಶವಿಲ್ಲ. ಕ್ರೀಡಾಕೂಟ ನಡೆಸಲು ಅನುಮತಿ ನೀಡುವುದಿಲ್ಲ. ಜಾತ್ರೆ, ಉತ್ಸವಗಳನ್ನು ರದ್ದುಪಡಿಸಲಾಗಿದೆ. ದೇಗುಲಗಳಿಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅರ್ಚಕರು, ಪೂಜಾರಿಗಳು ಮಾತ್ರ ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ. ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಕೋವಿಡ್‌ ಲಸಿಕೆ ಪಡೆಯುವವರಿಗೆ ವಾರಾಂತ್ಯದ ಕರ್ಫ್ಯೂ ವೇಳೆಯೂ ಅವಕಾಶವಿದೆ. ಲಸಿಕೆ ಪಡೆಯುವ ವ್ಯಕ್ತಿ ಸರಿಯಾದ ಮಾಹಿತಿ ನೀಡಬೇಕು. ಆಧಾರ್‌ ಕಾರ್ಡ್‌ ತೋರಿಸಿ ಮನವರಿಕೆ ಮಾಡಿಕೊಡಬೇಕು. ರೋಗಿಗಳು, ತುರ್ತು ವೈದ್ಯಕೀಯ ಸೇವೆಯ ಅಗತ್ಯ ಇರುವವರ ಸಂಚಾರಕ್ಕೆ ಯಾವುದೇ ತೊಂದರೆ ಇರುವುದಿಲ್ಲ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ‘ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿಯೂ ಮದುವೆಗೆ ಅವಕಾಶವಿದೆ. ಆದರೆ, ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ ಎಂದು ಎಚ್ಚರಿಕೆ ನೀಡಿದರು.

‘ಮದುವೆಗೆ ಪೊಲೀಸ್‌ ಇಲಾಖೆಯಿಂದ ಯಾವುದೇ ಪಾಸ್‌ ವಿತರಿಸುವುದಿಲ್ಲ. ಅಗತ್ಯ ಅನುಮತಿ ಪಡೆದು ನಿಯಮದ ಪ್ರಕಾರ ಮದುವೆ ಮಾಡಬೇಕು. ನಿಗದಿಗಿಂತ ಹೆಚ್ಚಿನ ಜನರು ಸೇರಿದರೆ ವಧು–ವರರು ಸೇರಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಕಲ್ಯಾಣ ಮಂಟಪದ ಮಾಲೀಕರ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಧಾರ್ಮಿಕ ಉತ್ಸವ: 15 ಜನರ ಬಂಧನ
ಸರ್ಕಾರ ರೂಪಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಧಾರ್ಮಿಕ ಉತ್ಸವ ನೆರವೇರಿಸಿದ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ವೀರಭದ್ರಸ್ವಾಮಿ ಕೊಂಡೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತ್ತು. ಚಿತ್ರದುರ್ಗ ತಾಲ್ಲೂಕಿನ ಪಂಡ್ರಳ್ಳಿಯಲ್ಲಿ ರಂಗನಾಥಸ್ವಾಮಿ ರಥೋತ್ಸವ ಗುರುವಾರ ನೆರವೇರಿತ್ತು. ಈ ವೇಳೆ ನೂರಾರು ಜನ ಸೇರಿದ್ದರು. ಮಾಸ್ಕ್‌ ಧರಿಸದೇ, ‍ಪರಸ್ಪರ ಅಂತರ ಕಾಪಾಡಿಕೊಳ್ಳದೇ ಮಾರ್ಗಸೂಚಿ ಉಲ್ಲಂಘನೆ ಮಾಡಿದ ಆರೋಪ ಕೇಳಿಬಂದಿತ್ತು.

‘ಮಾರ್ಗಸೂಚಿ ಉಲ್ಲಂಘನೆ ಮಾಡಿದ ದುಮ್ಮಿ ಗ್ರಾಮದ ಐವರನ್ನು ಬಂಧಿಸಲಾಗಿದೆ. ಪಂಡ್ರಳ್ಳಿಯ 10 ಜನರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದರು.

ಪತ್ರಿಕೆ ವಿತರಣೆಗೆ ಅವಕಾಶ
ವಾರಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಪತ್ರಿಕೆ ವಿತರಣೆಗೆ ಯಾವುದೇ ಅಡೆತಡೆ ಇರುವುದಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು. ಅಗತ್ಯ ವಸ್ತುಗಳ ವ್ಯಾಪ್ತಿಗೆ ಪತ್ರಿಕೆಯೂ ಒಳಪಟ್ಟಿರುವುದರಿಂದ ಮಾರ್ಗಸೂಚಿಯಲ್ಲಿಯೇ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪತ್ರಿಕೆ ವಿತರಣೆಯ ಪ್ರಕ್ರಿಯೆ ನಸುಕಿನ 4 ಗಂಟೆಯಿಂದಲೇ ಆರಂಭವಾಗುತ್ತದೆ. ಅನಗತ್ಯ ಸಂಚಾರ ನಿರ್ಬಂಧಿಸುವ ಸಂದರ್ಭದಲ್ಲಿ ಪತ್ರಿಕೆ ವಿತರಣೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಈ ಸಂಬಂಧ ಜಿಲ್ಲೆಯ ಎಲ್ಲ ಪೊಲೀಸರಿಗೆ ಸೂಚನೆ ನೀಡಲಾಗುವುದು ಎಂದರು.

2,130 ಬೆಡ್‌ ಸಿದ್ಧ
ಕೋವಿಡ್‌ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ 2,130 ಬೆಡ್‌ಗಳು ಸಿದ್ಧವಾಗಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 1,380 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 750 ಬೆಡ್‌ಗಳನ್ನು ಮೀಸಲಿಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ 60 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 25 ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಸೋಂಕಿತರ ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಶೇ 50ರಷ್ಟು ಬೆಡ್‌ ಮೀಸಲಿಡಲಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಹಾಸ್ಟೆಲ್‌ಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದರು.

‘ಸರ್ಕಾರಿ ಆಸ್ಪತ್ರೆಯಲ್ಲಿ 55 ಆಕ್ಸಿನೇಟೆಡ್ ಬೆಡ್ ಹಾಗೂ ಖಾಸಗಿಯಲ್ಲಿ 50 ಆಕ್ಸಿನೇಟೆಡ್‌ ಬೆಡ್‍ಗಳಿವೆ. 41 ಸರ್ಕಾರಿ ಹಾಗೂ 50 ಖಾಸಗಿ ಐಸಿಯುಗಳಿವೆ. 30 ಖಾಸಗಿ, 31 ಸರ್ಕಾರಿ ವೆಂಟಿಲೇಟರ್‌ಗಳಿವೆ. ಅಗತ್ಯ ಪ್ರಮಾಣದ ಆಕ್ಸಿಜನ್‌ ಹರಿಹರದಿಂದ ಪೂರೈಕೆ ಆಗುತ್ತಿದೆ. ವೈದ್ಯಕೀಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಎಚ್ಚರಿಕೆ ವಹಿಸಲಾಗಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಈ.ಬಾಲಕೃಷ್ಣ ಇದ್ದರು.

***

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆ ಮುಗಿಯುವವರೆಗೆ ವಿದ್ಯಾರ್ಥಿಗಳಿಗೆ ತೊಂದರೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
–ಕವಿತಾ ಎಸ್‌.ಮನ್ನಿಕೇರಿ,ಜಿಲ್ಲಾಧಿಕಾರಿ

***

ಮಾಸ್ಕ್‌ ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳದವರಿಗೆ ದಂಡ ವಿಧಿಸಲಾಗುವುದು. ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
-ಜಿ.ರಾಧಿಕಾ,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.