ADVERTISEMENT

ಚಳ್ಳಕೆರೆ: ಆಮ್ಲಜನಕಕ್ಕಾಗಿ ದೊಂಬಿ

​ಪ್ರಜಾವಾಣಿ ವಾರ್ತೆ
Published 5 ಮೇ 2021, 5:53 IST
Last Updated 5 ಮೇ 2021, 5:53 IST

ಚಳ್ಳಕೆರೆ: ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಸೋಮವಾರ ಒಂದೇ ದಿನ 20 ಆಮ್ಲಜನಕ ತುಂಬಿದ ಸಿಲಿಂಡರ್ ಬಳಕೆಯಾಗಿದ್ದು, ದಾಖಲಾಗುವ ಹೊಸ ಪ್ರಕರಣಗಳಿಗೆ ಆಮ್ಲಜನಕದ ಕೊರತೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಆಸ್ಪತ್ರೆ ಆವರಣದಲ್ಲಿ ಆಮ್ಲಜನಕಕ್ಕಾಗಿ ಮಂಗಳವಾರ ದೊಂಬಿ ನಡೆಸುತ್ತಿದ್ದ ಕೆಲವರನ್ನು ಪೋಲಿಸ್ ನಿರೀಕ್ಷರು ನಿಯಂತ್ರಿಸಿದ ಘಟನೆ ಜರುಗಿತು.

ಸ್ಯಾಚುರೇಷನ್ ಲೆವೆಲ್‌ 95-96 ಇರುವವರೂ ಆಮ್ಲಜನಕ ನೀಡುವಂತೆ ಬೇಡಿಕೆ ಇಡುತ್ತಾರೆ. ಇದರಿಂದ ತೀರಾ ಅವಶ್ಯಕತೆ ಇರುವವರಿಗೆ ಈಗ ಆಸ್ಪತ್ರೆಯಲ್ಲಿ ಆಕ್ಸಿಜನ್ ತುಂಬಿದ ಸಿಲಿಂಡರ್ ಇಲ್ಲವಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸ್ಯಾಚುರೇಷನ್ ಲೆವೆಲ್‌ ಕನಿಷ್ಠ 60, 70, 80 ಇರುವ ರೋಗಿಗಳಿಗೆ ಆಮ್ಲಜನಕ ನೀಡುವ ಅವಶ್ಯಕತೆ ಇದೆ. ನಿತ್ರಾಣಗೊಂಡ ಸಂದರ್ಭದಲ್ಲಿ ರೋಗಿ ಸ್ವಲ್ಪ ಚೇತರಿಸಿಕೊಳ್ಳಲು ಕನಿಷ್ಠ ಒಂದು ಗಂಟೆ ಆಮ್ಲಜನಕ ನೀಡಿದರೆ ಸಾಕಾಗುತ್ತದೆ. ನಂತರ ಬಿಸಿ ನೀರು, ಪೌಷ್ಠಿಕ ಆಹಾರ ಸೇವನೆ ಮೂಲಕ ಉಸಿರಾಟದ ತೊಂದರೆಯನ್ನು ನೀಗಿಸಿಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿ.

‘ಕೆಲವರು ಅವಶ್ಯಕತೆ ಇಲ್ಲದಿದ್ದರೂ ಆಮ್ಲಜನಕ ನೀಡುವಂತೆ ಜನ ಪ್ರತಿನಿಧಿಗಳಿಂದ ಒತ್ತಡ ಹಾಕಿಸುತ್ತಾರೆ. ವಿಳಂಬ ಮಾಡಿದರೆ ಜಗಳಕ್ಕೆ ಬರುತ್ತಾರೆ’ ಎಂದು ಆರೋಗ್ಯ ಸಹಾಯಕಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

‘ಮೇಲ್ವಿಚಾರಕರ ಸಲಹೆ ಮೇರೆಗೆ ಸೋಂಕಿತರಿಗೆ ಆಮ್ಲಜನಕ ನೀಡುತ್ತೇವೆ. ಆಮ್ಲಜನಕ ತುಂಬಿದ ಎರಡು ಸಿಲಿಂಡರ್‌ಗಳನ್ನು ತುರ್ತು ಪ್ರಕರಣಗಳಿಗೆ ಆಸ್ಪತ್ರೆಯಲ್ಲಿ ಕಾಯ್ದಿರಿಸಲಾಗಿದೆ. ಇನ್ನೂ 9 ಸಿಲಿಂಡರ್ ಚಿತ್ರದುರ್ಗದಿಂದ ಬರಲಿದೆ. ಅಗತ್ಯ ಬಿದ್ದಾಗ ಹರಿಹರ, ದಾವಣಗೆರೆಯಿಂದಲೂ ಆಮ್ಲಜನಕ ತುಂಬಿದ ಸಿಲಿಂಡರ್ ತರಿಸಲಾಗುವುದು. ಸೋಂಕಿತರು ಭಯಪಡುವ ಅಗತ್ಯವಿಲ್ಲ’ ಎಂದು ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.