ADVERTISEMENT

ರಾಸುಗಳಿಗೂ ಕೋವಿಡ್ ಮಾದರಿ ರೋಗ!

ಚರ್ಮಗಂಟು ಸಾಂಕ್ರಾಮಿಕ ರೋಗದಿಂದ ರಾಸುಗಳು ಹೈರಾಣು * ಆತಂಕದಲ್ಲಿ ಪಶುಪಾಲಕರು

ಕೆ.ಎಸ್.ಪ್ರಣವಕುಮಾರ್
Published 30 ಅಕ್ಟೋಬರ್ 2020, 10:47 IST
Last Updated 30 ಅಕ್ಟೋಬರ್ 2020, 10:47 IST
ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವುದು
ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವುದು   

ಚಿತ್ರದುರ್ಗ:ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿರುವ ಕೊರೊನಾ ಸೋಂಕಿನ ಮಾದರಿಯಲ್ಲೇ ರಾಸುಗಳಿಗೂ ಚರ್ಮಗಂಟು ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದು, ಪಶುಪಾಲಕರಲ್ಲಿ ಆತಂಕ ಮೂಡಿಸಿದೆ.

ಆಫ್ರಿಕಾ ಖಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಚರ್ಮಗಂಟು ರೋಗ (ಎಲ್‌ಎಸ್‌ಡಿ) ಮೊದಲ ಬಾರಿಗೆ ಕರ್ನಾಟಕ ರಾಜ್ಯಕ್ಕೂ ಕಾಲಿರಿಸಿದೆ. ಇದು ರಾಸುಗಳನ್ನು ಮೂರೇ ದಿನಗಳಲ್ಲಿ ಹೈರಾಣಾಗುವಂತೆ ಮಾಡುತ್ತಿದೆ.

ನೊಣ ಅಥವಾ ಸೊಳ್ಳೆಗಳು ಚರ್ಮಗಂಟು ರೋಗ ತಗುಲಿದ ರಾಸುವೊಂದಕ್ಕೆ ಕಚ್ಚಿ, ಆರೋಗ್ಯವಂತ ರಾಸುಗಳಿಗೆ ಕಡಿಯುವುದರಿಂದ ಇದು ಹರಡುತ್ತದೆ. ಇದನ್ನು ಕೂಡ ಸೋಂಕು ರೋಗ ಎಂದು ಕರೆಯಲಾಗುತ್ತದೆ.

ADVERTISEMENT

ಕೊರೊನಾ ಸೋಂಕಿತ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡುವ ರೀತಿಯಂತೆ ಸೋಂಕಿತ ರಾಸುಗಳನ್ನು 15 ದಿನ ಕ್ವಾರಂಟೈನ್‌ ಮಾಡಲಾಗುತ್ತಿದೆ. ಅವುಗಳನ್ನು ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ನೋವು ನಿವಾರಕ‌ ಔಷಧ ಹೆಚ್ಚಾಗಿ ಬಳಸಲಾಗುತ್ತಿದೆ.

ರೋಗ ಲಕ್ಷಣ: ಆರಂಭಿಕ ಹಂತದಲ್ಲಿ ರಾಸುಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಕಾಲುಗಳಲ್ಲಿ ಬಾವು ಕಾಣಿಸಿಕೊಂಡು ಕುಂಟುತ್ತವೆ. ಆಹಾರ ಸೇವಿಸುವುದನ್ನು ನಿಲ್ಲಿಸುತ್ತವೆ. ಒಂದು ವಾರದೊಳಗೆ ಮೈಮೇಲೆ ಗುಳ್ಳೆಗಳಾಗುತ್ತವೆ. ಗುಳ್ಳೆ ಒಡೆದು ರಕ್ತ ಸೋರಿಕೆಯಾಗುತ್ತದೆ. ಈ ಅವಧಿಗಳಲ್ಲಿ ರಾಸುಗಳು ನಿಶ್ಯಕ್ತಿ, ನಿತ್ರಾಣಕ್ಕೆ ಒಳಗಾಗುತ್ತವೆ.

ಮುಂಜಾಗ್ರತಾ ಕ್ರಮವೇನು?: ಜಿಲ್ಲೆಯ ಯಾವುದಾದರೂ ಗ್ರಾಮದಲ್ಲಿ ಈ ರೋಗ ಲಕ್ಷಣ ಕಾಣಿಸಿಕೊಂಡರೆ ರಾಸುಗಳನ್ನು ಹೊರಗೆ ಬಿಡದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಸೋಂಕಿತ ರಾಸುವಿನ ಐದು ಕಿ.ಮೀ ವ್ಯಾಪ್ತಿಯೊಳಗೆ ಆರೋಗ್ಯವಂತ ರಾಸುಗಳಿಗೆ ವ್ಯಾಕ್ಸಿನ್‌ ನೀಡಲಾಗುತ್ತಿದೆ. ಗುಳ್ಳೆ ಒಡೆದ ಚರ್ಮದ ಮಾದರಿಯನ್ನು ತ್ವರಿತವಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಮೊದಲ ಬಾರಿ ಈ ರೋಗ ಕಾಣಿಸಿಕೊಂಡಾಗ ಅನೇಕ ರೈತರು ಆತಂಕಕ್ಕೆ ಒಳಗಾಗಿದ್ದರು. ಈಗ ಭೀತಿ ಕಡಿಮೆಯಾಗಿದೆ. ಇದು ಸಂಪೂರ್ಣ ಗುಣವಾಗುವ ಕಾಯಿಲೆಯಾದ್ದರಿಂದ ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ತಪಾಸಣೆಗೆ ಒಳಪಡಿಸಿ ಎಂದು ಪಶುಪಾಲನಾ ಇಲಾಖೆ ಮನವಿ ಮಾಡಿದೆ.

ನೂರಾರು ಸಂಖ್ಯೆಯ ನಾಟಿ ದನಗಳಿಗೆ ಮಾತ್ರ ಸೋಂಕು ಹರಡಿದೆ. ಇಲಾಖೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮದಿಂದಾಗಿ ಅಧಿಕ ಸಂಖ್ಯೆಯ ರಾಸುಗಳಿಗೆ ಈ ರೋಗ ಹರಡಿಲ್ಲ. ಎಮ್ಮೆಗಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿರುವ ಪ್ರಮಾಣ ತೀರಾ ವಿರಳವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಸಿಕಾ ಕಾರ್ಯ ಪ್ರಗತಿಯಲ್ಲಿದೆ

‘ಜಿಲ್ಲೆಯಲ್ಲಿ 3.39 ಲಕ್ಷ ದನ–ಎಮ್ಮೆಗಳು, 17.5 ಲಕ್ಷ ಕುರಿ–ಮೇಕೆಗಳು ಸೇರಿ ಒಟ್ಟು 21 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿವೆ’ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಟಿ.ಕೃಷ್ಣಪ್ಪ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಗಳಲೆ ರೋಗದ ವಿರುದ್ಧ 2.8 ಲಕ್ಷ, ಕಾಲುಬಾಯಿ ರೋಗಕ್ಕೆ 88 ಸಾವಿರ, ಚಪ್ಪೆ ರೋಗಕ್ಕೆ 46 ಸಾವಿರ ಜಾನುವಾರಿಗೆ ಲಸಿಕೆ ಹಾಕಲಾಗಿದೆ. ಕುರಿಸಿಡುಬು ವಿರುದ್ಧ 45,919 ಕುರಿಗಳಿಗೆ ಲಸಿಕೆ ಹಾಗೂ ಪಿಪಿಆರ್‌ ವಿರುದ್ಧ 7.29 ಲಕ್ಷ ಕುರಿ–ಮೇಕೆಗಳಿಗೆ ಲಸಿಕೆ ಹಾಕಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

***

ಚಿಕಿತ್ಸೆಗಿಂತಲೂ ರೋಗ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುವುದು. ಕೆಲ ರಾಸುಗಳಲ್ಲಿ ಕಂಡು ಬಂದಿರುವ ಚರ್ಮಗಂಟು ಸೇರಿ ಇತರೆ ರೋಗಗಳಿಗೂ ಲಸಿಕೆ ಹಾಕಲಾಗುತ್ತಿದೆ.

ಡಾ.ಟಿ.ಕೃಷ್ಣಪ್ಪ, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ

***

ಕೋವಿಡ್‌ನಿಂದ ಕೆಲವರು ಮೃತಪಟ್ಟಿದ್ದಾರೆ. ಆದರೆ, ರಾಸುಗಳಿಗೆ ಹರಡುತ್ತಿರುವ ಚರ್ಮಗಂಟು ರೋಗದಿಂದ ಈವರೆಗೂ ಜಿಲ್ಲೆಯಲ್ಲಿ ಯಾವ ರಾಸು ಮೃತಪಟ್ಟಿಲ್ಲ.

ಡಾ.ಬಿ.ಪ್ರಸನ್ನಕುಮಾರ್, ಉಪನಿರ್ದೇಶಕ, ಪಾಲಿಕ್ಲಿನಿಕ್‌ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.