ADVERTISEMENT

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:27 IST
Last Updated 19 ಸೆಪ್ಟೆಂಬರ್ 2020, 16:27 IST

ಚಿತ್ರದುರ್ಗ: ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಿಸುವ ಸಂಬಂಧ ಇದೇ 21ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಕಾಯ್ದೆ ಮಂಡಿಸಬೇಕು ಎಂದು ಭಾರತೀಯ ಗೋ ಪರಿವಾರ ಜಿಲ್ಲಾ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಶ್ರೀರಾಮಚಂದ್ರಾಪುರ ಮಠ, ಭಾರತೀಯ ಗೋಪರಿವಾರ ಸಮಿತಿಯಿಂದ ಈಗಾಗಲೇ ಕೈಗೊಂಡ ಅಭಯಾಕ್ಷರ ಅಭಿಯಾನದಡಿ ಒಂದು ಕೋಟಿಗೂ ಅಧಿಕ ಜನರಿಂದ ಸಹಿ ಸಂಗ್ರಹಿಸಿರುವ ಪ್ರತ್ಯೇಕ ಹಕ್ಕೊತ್ತಾಯ ಪತ್ರಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶನಿವಾರ ನೀಡಲಾಯಿತು. ಈ ಸಂಬಂಧ ಪ್ರಧಾನಿ ಮೋದಿ ಅವರಿಗೂ ಶ್ರೀಮಠ ಮನವಿ ಮಾಡಿದೆ.

ಪಕ್ಷ, ಧರ್ಮ ಭೇದ ಮರೆತು ಅಭಯಾಕ್ಷರ ಅಭಿಯಾನದಡಿ ರಾಜ್ಯದಲ್ಲಿ ಲಕ್ಷಾಂತರ ಗೋಪ್ರೇಮಿಗಳು ಭಾಗಿಯಾಗಿದ್ದಾರೆ. ಚಿತ್ರದುರ್ಗದಲ್ಲಿ 2018ರಲ್ಲಿ ನಡೆದ ಅಭಿಯಾನದಲ್ಲಿ ಜಿಲ್ಲೆಯ ಅನೇಕ ಮಠಾಧೀಶರು, ವಿವಿಧ ಶಾಸಕರು, ಚುನಾಯಿತ ಪ್ರತಿನಿಧಿಗಳು, ಧರ್ಮಗುರುಗಳು, ಶಿಕ್ಷಣ ತಜ್ಞರು ಬೆಂಬಲಿಸಿ, ಈ ಕಾರ್ಯಕ್ಕೆ ಪ್ರೋತ್ಸಾಹಿಸಿದ್ದಾರೆ.

ADVERTISEMENT

ಭಾರತೀಯ ಗೋ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆ ದೃಷ್ಟಿಯಿಂದ ರಾಜ್ಯದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧವಾಗಬೇಕು. ಈ ತಳಿಗಳನ್ನು ಸಾಕುವ ರೈತರಿಗೆ ರಾಜ್ಯ ಸರ್ಕಾರ ವಿಶೇಷ ನೆರವು ನೀಡಬೇಕು ಎಂಬುದು ಸಮಿತಿಯ ಆಶಯವಾಗಿದೆ.

ಛತ್ತೀಸ್‍ಗಡದಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರ ಈಗಾಗಲೇ ಗೋಮಯವನ್ನು ಪ್ರತಿ ಕೆ.ಜಿಗೆ ₹ 3ರ ದರದಲ್ಲಿ ರೈತರಿಂದ ಖರೀದಿಸುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡಾ ಗೋಮೂತ್ರ, ಗೋಮಯ ಖರೀದಿಗೆ ಮುಂದಾಗಬೇಕು. ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳು ರಚಿಸಿರುವ ಗೋಸೇವಾ ಆಯೋಗಗಳು ಗೋಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಅದು ಇಲ್ಲಿಯೂ ಜಾರಿಯಾಗಬೇಕು ಎಂದು ಸರ್ಕಾರಕ್ಕೆ ಸಮಿತಿ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.