ಚಿತ್ರದುರ್ಗ: ಅಭಿವೃದ್ಧಿಯ ನಾಗಾಲೋಟದಲ್ಲಿ ಸಾಗಿರುವ ಮಾನವ ಪ್ರಾಕೃತಿಕ ಸಂರಚನೆಯ ಮೇಲೆ ಹಸ್ತಕ್ಷೇಪ ಮಾಡುತ್ತಿರುವ ಕಾರಣ ವಿವಿಧೆಡೆ ಬೆಟ್ಟ, ಗುಡ್ಡಗಳು ಕುಸಿಯುವ ಭೀತಿ ನಿರ್ಮಾಣವಾಗಿದೆ. ಸಾಲುಬೆಟ್ಟ, ಗುಡ್ಡಗಳ ನಡುವೆ ನಿರ್ಮಾಣವಾಗಿರುವ ಐತಿಹಾಸಿಕ ಚಿತ್ರದುರ್ಗ ಕೂಡ ಈ ಭೀತಿಯಿಂದ ಹೊರತಾಗಿಲ್ಲ.
‘ಚಿತ್ರವಿಚಿತ್ರ ಹೆಬ್ಬಂಡೆಗಳಿಂದ ರೂಪಿತವಾಗಿರವ ದುರ್ಗದ ಗುಡ್ಡಗಳು ಅಭೇದ್ಯವಾಗಿವೆ. ಅವು ಕುಸಿಯುವ ಸಾಧ್ಯತೆ ಇಲ್ಲವೇ ಇಲ್ಲ’ ಎಂದು ಕೆಲವರು ವಾದಿಸುತ್ತಾರೆ. ಆದರೆ, ನಗರದ ಹೊರವಲಯದಲ್ಲಿರುವ ಗುಡ್ಡಗಳ ಬುಡದಲ್ಲಿ ವಿವಿಧ ಕಟ್ಟಡ, ಕಾರ್ಖಾನೆ, ಲೇಔಟ್, ರಸ್ತೆಗಳು ನಿರ್ಮಾಣವಾಗುತ್ತಿದ್ದು, ಚಿತ್ರದುರ್ಗದ ಗುಡ್ಡಗಳೂ ಅಪಾಯ ಎದುರಿಸುತ್ತಿವೆ ಎಂಬ ಅಭಿಪ್ರಾಯ ಈಗೀಗ ವ್ಯಕ್ತವಾಗುತ್ತಿದೆ.
ಹೊಳಲ್ಕೆರೆ ರಸ್ತೆಯಲ್ಲಿ ಹೊರಟರೆ ಗಾಢವಾಗಿ ಕಣ್ಣುತುಂಬಿಕೊಳ್ಳುವ ಚೋಳಗುಡ್ಡದ ಹಸಿರು ಗಮನ ಸೆಳೆಯುತ್ತದೆ. ಆದರೆ ಈಗ ಚೋಳಗುಡ್ಡದ ತಟದಲ್ಲಿ, ಗುಡ್ಡದ ಹಲವು ಭಾಗದಲ್ಲಿ ಮನೆಗಳು ತಲೆ ಎತ್ತಿವೆ. ಗುಡ್ಡದ ಬುಡ ಕೊರೆದು ಹಲವು ಕಟ್ಟಡ ನಿರ್ಮಾಣ ಮಾಡಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಖಾಸಗಿ ಶಾಲೆಗಳು, ಮಾರುಕಟ್ಟೆಗಳು ನಿರ್ಮಾಣಗೊಂಡಿವೆ.
ಚೋಳಗುಡ್ಡದ ಸುತ್ತಲೂ ಸ್ಥಳೀಯ ಜನಪ್ರತಿನಿಧಿಗಳು ಖಾಸಗಿ ಲೇಔಟ್ ಮಾಡಿದ್ದಾರೆ. ಜೊತೆಗೆ ಆಶ್ರಯ ಮನೆ, ದೇವಾಲಯ, ಮಸೀದಿಗಳನ್ನೂ ನಿರ್ಮಾಣ ಮಾಡಲಾಗಿದೆ. ಕರಡಿಗಳ ಆಶ್ರಯತಾಣವಾಗಿದ್ದ ಈ ಗುಡ್ಡ ಈಗ ಬಡಾವಣೆಯಾಗಿ ಬದಲಾಗಿದೆ. ಆದರೂ ಆಗಾಗ ಕರಡಿ ದಾಳಿ ಪ್ರಕರಣಗಳು ಇಲ್ಲಿಂದ ವರದಿಯಾಗುತ್ತಲೇ ಇವೆ.
ನಗರದಿಂದ 6 ಕಿ.ಮೀ ದೂರದಲ್ಲಿರುವ ಗೋನೂರು ಗುಡ್ಡ ಸಹ ಕೊರೆತಕ್ಕೆ ಒಳಗಾಗಿದೆ. ಗುಡ್ಡದ ಮೇಲೆ ಓಚಿ ಬೋರಯ್ಯ ಬಡಾವಣೆ ನಿರ್ಮಾಣಗೊಂಡಿದ್ದು, ವಿವಿಧೆಡೆ ಗುಡ್ಡವನ್ನು ಕೊರೆದು ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿಯೇ ಅನುಮತಿ ನೀಡಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಜೋಗಿಮಟ್ಟಿ ಗುಡ್ಡದ ಕತೆ:
‘ಕರ್ನಾಟಕದ ಊಟಿ’ ಎಂದೇ ಪ್ರಸಿದ್ಧಿ ಪಡೆದಿರುವ ಜೋಗಿಮಟ್ಟಿ ವನ್ಯಧಾಮದ ಹಾದಿಯಲ್ಲಿ ಸಿಗುವ ಗುಡ್ಡದ (ಜೋಗಿಮಟ್ಟಿ ಗುಡ್ಡ) ತಟದಲ್ಲಿ ಸಾವಿರಾರು ಮನೆಗಳು ನಿರ್ಮಾಣವಾಗಿವೆ. ಹಲವು ಖಾಸಗಿ ಲೇಔಟ್‌ಗಳು ತಲೆಎತ್ತಿದ್ದು, ನಿವೇಶನ ಖರೀದಿಗೆ ಜನರು ಉತ್ಸಾಹ ತೋರುತ್ತಿದ್ದಾರೆ. ಅಲ್ಲಲ್ಲಿ ಗುಡ್ಡ ಕೊರೆದು, ಅಗೆದು ರಸ್ತೆ ನಿರ್ಮಾಣ ಮಾಡಲಾಗಿದೆ.
ಪ್ರಾಕೃತಿಕ ಸಂಪನ್ಮೂಲವಾಗಿರುವ ಬೆಟ್ಟ ಗುಡ್ಡ ಕೊರೆಯಲು ಅವಕಾಶವಿಲ್ಲ. ಆದರೆ ಕೆಲವೆಡೆ ಪಟ್ಟಾ ಭೂಮಿ ಇದ್ದು ಅಲ್ಲಿ ಲೇಔಟ್ ಮಾಡುತ್ತಿದ್ದಾರೆ. ಅವುಗಳ ಬಗ್ಗೆ ಪರಿಶೀಲಿಸಲಾಗುವುದು.– ಟಿ.ವೆಂಕಟೇಶ್ ಜಿಲ್ಲಾಧಿಕಾರಿ
ಗಾಳಿ ಗೋಪುರ; ಬೆಟ್ಟಗಳಿಗೆ ಧಕ್ಕೆ ಪವನ ವಿದ್ಯುತ್ ಉತ್ಪಾದನೆಗಾಗಿ ಚಿತ್ರದುರ್ಗದ ಸುತ್ತಲಿನ ಹಲವು ಬೆಟ್ಟಗಳಲ್ಲಿ ಗಾಳಿ ಗೋಪುರ (ಗಾಳಿ ಚಕ್ರಗಳು) ಅಳವಡಿಸಲಾಗಿದೆ. ಭಾರೀ ತೂಕದ ಉಪಕರಣ ಚಕ್ರಗಳನ್ನು ಹೊತ್ತು ಸಾಗುವ ಬೃಹತ್ ಲಾರಿಗಳ ಓಡಾಟಕ್ಕಾಗಿ ಬೆಟ್ಟಗಳ ಮೇಲೆ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಯಿಂದಲೂ ಬೆಟ್ಟದ ಭದ್ರತೆಗೆ ಧಕ್ಕೆ ಉಂಟಾಗಲಿದೆ ಎಂದು ಪರಿಸರ ಪ್ರೇಮಿಗಳು ಹೇಳುತ್ತಾರೆ. ‘ವಿವಿಧ ಕಾಮಗಾರಿಯಿಂದಾಗಿ ಬೆಟ್ಟದ ಮೇಲಿನಿಂದ ಹರಿದು ಬರುವ ನೀರಿನ ದಿಕ್ಕು ಬದಲಾಗಿದೆ. ಕಾಲುವೆಗಳ ಪಥವನ್ನು ತಪ್ಪಿಸಲಾಗಿದೆ. ಇದರಿಂದಲೂ ಬೆಟ್ಟಕ್ಕೆ ಅಪಾಯ ಇದೆ’ ಎಂದು ಉಪನ್ಯಾಸಕ ಹನುಮಂತಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.