ADVERTISEMENT

ಸೆಸ್‌ ಇಳಿಕೆ: ನಿರ್ವಹಣೆಗೆ ಪರದಾಟ

ಎಪಿಎಂಸಿ ಕಾಯ್ದೆ ತಿದ್ದುಪಡಿ ಬಳಿಕ ಉಂಟಾದ ಪರಿಣಾಮ

ಜಿ.ಬಿ.ನಾಗರಾಜ್
Published 12 ನವೆಂಬರ್ 2020, 5:42 IST
Last Updated 12 ನವೆಂಬರ್ 2020, 5:42 IST
ಚಿತ್ರದುರ್ಗ ಮಾರುಕಟ್ಟೆಗೆ ಬುಧವಾರ ಆವಕವಾಗಿರುವ ಮೆಕ್ಕೆಜೋಳವನ್ನು ತೂಕ ಮಾಡಿದ ಕಾರ್ಮಿಕರು
ಚಿತ್ರದುರ್ಗ ಮಾರುಕಟ್ಟೆಗೆ ಬುಧವಾರ ಆವಕವಾಗಿರುವ ಮೆಕ್ಕೆಜೋಳವನ್ನು ತೂಕ ಮಾಡಿದ ಕಾರ್ಮಿಕರು   

ಚಿತ್ರದುರ್ಗ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ನಡೆಯುವ ವಹಿವಾಟಿಗೆ ವಿಧಿಸುವ ಮಾರುಕಟ್ಟೆ
ಶುಲ್ಕವನ್ನು (ಸೆಸ್‌) ಶೇ 1.5ರಿಂದ ಶೇ 0.35ಗೆ ಇಳಿಕೆ ಮಾಡಿದ್ದರಿಂದ ಆದಾಯದಲ್ಲಿ ಗಣನೀಯ ಕುಸಿತ ಕಂಡಿದೆ. ಇದರಿಂದ ಎಪಿಎಂಸಿ ನಿರ್ವಹಣೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬಳಿಕ ಸೆಸ್‌ ಬಗ್ಗೆ ವರ್ತಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಮಾರುಕಟ್ಟೆ ಶುಲ್ಕವನ್ನು ಕಡಿಮೆ ಮಾಡಿದೆ. ನೂತನ ಸೆಸ್‌ ನೀತಿ ಜುಲೈ ಅಂತ್ಯದಿಂದ ಅನುಷ್ಠಾನಕ್ಕೆ ಬಂದಿದೆ.

ನೂತನ ಸೆಸ್‌ ನೀತಿಯ ಪ್ರಕಾರ 35 ಪೈಸೆಯಲ್ಲಿ ಎಪಿಎಂಸಿಗೆ 14 ಪೈಸೆ ಮಾತ್ರ ಸಂದಾಯವಾಗುತ್ತಿದೆ. ಉಳಿದ ಹಣ ಸರ್ಕಾರಕ್ಕೆ ಪಾವತಿಯಾಗುತ್ತಿದೆ. ಎಪಿಎಂಸಿ ಸ್ವಚ್ಛತೆ, ಭದ್ರತೆ, ವಿದ್ಯುತ್‌ ಶುಲ್ಕ ಪಾವತಿ, ಅಭಿವೃದ್ಧಿ ಕಾಮಗಾರಿ ಸೇರಿ ಹಲವು ಉದ್ದೇಶಕ್ಕೆ ಸೆಸ್ ಬಳಸಿಕೊಳ್ಳಬೇಕಿದೆ. ಸೆಸ್‌ ಆದಾಯದಲ್ಲಿ ಕುಸಿತವಾಗಿರುವುದರಿಂದ ಎಪಿಎಂಸಿಗೆ ಸಂಕಷ್ಟ ಎದುರಾಗಿದೆ.

ADVERTISEMENT

ಎಪಿಎಂಸಿಯಲ್ಲಿ ನಡೆಯುವ ವಹಿವಾಟಿಗೆ ಶೇ 1.5ರಷ್ಟು ಶುಲ್ಕವನ್ನು ಸರ್ಕಾರ ವಿಧಿಸಿತ್ತು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಮಾರುಕಟ್ಟೆ ಆವರಣದ ಹೊರಗೂ ವಹಿವಾಟಿಗೆ ಅವಕಾಶ ಸಿಕ್ಕಿತು. ಸೆಸ್‌ ಹೊರೆಯಿಂದ ರೈತರು ಎಪಿಎಂಸಿ ಆವರಣದಲ್ಲಿ ವಹಿವಾಟು ನಡೆಸಲು ಹಿಂದೇಟು ಹಾಕಲಿದ್ದಾರೆ ಎಂಬ ವಾದವನ್ನು ಮುಂದಿಟ್ಟು ವರ್ತಕರು ಚಳವಳಿ ನಡೆಸಿದ್ದರು.

ಚಿತ್ರದುರ್ಗ ಎಪಿಎಂಸಿ 100 ಎಕರೆ ವಿಸ್ತೀರ್ಣದ ಮಾರುಕಟ್ಟೆಯನ್ನು ಹೊಂದಿದೆ. ಭೀಮಸಮುದ್ರದಲ್ಲಿ 13 ಎಕರೆ ಹಾಗೂ ಭರಮಸಾಗರದಲ್ಲಿ 9 ಎಕರೆ ವಿಸ್ತೀರ್ಣದ ಉಪ ಮಾರುಕಟ್ಟೆಗಳು ಇದರ ವ್ಯಾಪ್ತಿಯಲ್ಲಿವೆ. ಎಪಿಎಂಸಿ ಆವರಣದ ಸ್ವಚ್ಛತೆಗೆ ಮಾಸಿಕ ₹ 2.5 ಲಕ್ಷಕ್ಕೆ ಟೆಂಡರ್‌ ನೀಡಲಾಗಿದೆ. ಸೆಸ್‌ ಆದಾಯ ಕುಸಿತವಾದ ಬಳಿಕ ಟೆಂಡರ್‌ ಮೊತ್ತವನ್ನು ಶೇ 25ರಷ್ಟು ಕಡಿತ ಮಾಡಿದೆ.

ಆದಾಯದಲ್ಲಿ ಉಂಟಾಗಿರುವ ಕೊರತೆಯನ್ನು ನೀಗಿಸಿಕೊಳ್ಳಲು ಎಪಿಎಂಸಿ ಆಡಳಿತ ಮಂಡಳಿ ವೆಚ್ಚಕ್ಕೆ ಕಡಿವಾಣ ಹಾಕಿದೆ. 32 ಭದ್ರತಾ ಸಿಬ್ಬಂದಿಗಳಲ್ಲಿ 16 ಜನರನ್ನು ಮಾತ್ರ ಉಳಿಸಿಕೊಂಡಿದೆ. ದತ್ತಾಂಶ ಸಂಗ್ರಹಕ್ಕೆ ತಾತ್ಕಾಲಿಕವಾಗಿ ನೇಮಕಗೊಂಡಿದ್ದ 8 ಸಿಬ್ಬಂದಿಯಲ್ಲಿ ನಾಲ್ವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಆದರೂ ತಿಂಗಳಿಗೆ ಬರುವ ₹ 2.5 ಲಕ್ಷ ವಿದ್ಯುತ್ ಬಿಲ್‌ ಪಾವತಿಗೆ ಪರದಾಡುವಂತಾಗಿದೆ.

‘ಭೀಮಸಮುದ್ರ ಎಪಿಎಂಸಿಯಲ್ಲಿ 15 ವರ್ತಕರಿದ್ದಾರೆ. ಇಲ್ಲಿ ನಡೆಯುವ ವಹಿವಾಟಿನಿಂದ ಮಾಸಿಕ ₹ 30 ಲಕ್ಷ ಸೆಸ್‌ ಸಂಗ್ರಹವಾಗುತ್ತಿತ್ತು. ಎಪಿಎಂಸಿ ಹೊರಗೂ ವಹಿವಾಟು ನಡೆಸಲು ಅವಕಾಶ ಸಿಕ್ಕಿದ್ದರಿಂದ ಅನೇಕರು ಆವರಣ ತೊರೆದಿದ್ದಾರೆ. ಹೀಗಾಗಿ ಅಕ್ಟೋಬರ್‌ ತಿಂಗಳ ಸೆಸ್‌ ಗಳಿಕೆ ₹ 2.5 ಲಕ್ಷಕ್ಕೆ ಕುಸಿದಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

*

ಎಪಿಎಂಸಿ ಸೆಸ್‌ ಇಳಿಕೆ ಮಾಡಿದ್ದರಿಂದ ಸಂಗ್ರಹವಾಗುತ್ತಿದ್ದ ಆದಾಯದಲ್ಲಿ ಕುಸಿತವಾಗಿದ್ದು ನಿಜ. ಕೃಷಿ ಉತ್ಪನ್ನಗಳ ಆವಕ ಹೆಚ್ಚಿದರೂ ಶುಲ್ಕ ಸಂಗ್ರಹ ಕಡಿಮೆಯಾಗಿದೆ.
-ವಿ.ರಮೇಶ್‌, ಜಂಟಿ ನಿರ್ದೇಶಕ, ಚಿತ್ರದುರ್ಗ ಎಪಿಎಂಸಿ

*

ಹೆಚ್ಚಿದ ಆವಕ; ಕುಸಿದ ಶುಲ್ಕ
ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಉತ್ತಮ ಫಸಲು ಸಿಕ್ಕಿದೆ. ನಿರೀಕ್ಷೆ ಮೀರಿ ಮಳೆ ಸುರಿದ ಪರಿಣಾಮ ಕೃಷಿ ಉತ್ಪನ್ನ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಸೆಸ್‌ ಮರುನಿಗದಿ ಮಾಡಿದ್ದರಿಂದ ಮಾರುಕಟ್ಟೆ ಶುಲ್ಕ ಸಂಗ್ರಹ ಕಡಿಮೆಯಾಗಿದೆ.

2019ರ ಅಕ್ಟೋಬರ್ ತಿಂಗಳಲ್ಲಿ 25,415 ಕ್ವಿಂಟಲ್‌ ಹತ್ತಿ, 6 ಸಾವಿರ ಕ್ವಿಂಟಲ್ ಶೇಂಗಾ ಹಾಗೂ 21,805 ಕ್ವಿಂಟಲ್‌ ಮೆಕ್ಕೆಜೋಳ ಮಾರುಕಟ್ಟೆಗೆ ಆವಕವಾಗಿತ್ತು. ಈ ಉತ್ಪನ್ನದಿಂದ ಸುಮಾರು ₹ 34 ಲಕ್ಷ ಮಾರುಕಟ್ಟೆ ಶುಲ್ಕ ಸಂಗ್ರಹವಾಗಿತ್ತು.

2020ರ ಇದೇ ತಿಂಗಳಲ್ಲಿ 59,153 ಕ್ವಿಂಟಲ್‌ ಹತ್ತಿ, 18,235 ಕ್ವಿಂಟಲ್‌ ಶೇಂಗಾ ‌ಹಾಗೂ 40,138 ಕ್ವಿಂಟಲ್‌ ಮೆಕ್ಕೆಜೋಳ ಆವಕವಾಗಿದೆ. ಮಾರುಕಟ್ಟೆ ಸೆಸ್‌ ₹ 15 ಲಕ್ಷಕ್ಕೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.