ಧರ್ಮಪುರ: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘ ಎರಡು ಬಿಎಂಸಿ ಕೇಂದ್ರಗಳನ್ನು ಹೊಂದಿದ್ದು, ಅಂದಾಜು 4 ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದನೆ ಮಾಡುವ ಮೂಲಕ ತಮ್ಮದೇ ಆದ ಹೆಸರನ್ನು ಗಳಿಸಿದೆ ಎಂದು ಶಿಮುಲ್ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ತಿಳಿಸಿದರು.
ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ 2024–25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.
ಶಿಮುಲ್ ವ್ಯಾಪ್ತಿಯ ಮೂರು ಜಿಲ್ಲೆಗಳ ಒಕ್ಕೂಟದಲ್ಲಿ ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘ ಅತೀ ಹೆಚ್ಚು ಗುಣಮಟ್ಟದ ಹಾಲು ಉತ್ಪಾದನೆ ಮಾಡುತ್ತಿದೆ. ಇದರಿಂದ ₹ 14 ಲಕ್ಷ ಲಾಭಾಂಶ ಪಡೆಯುವುದರ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ. ಜೊತೆಗೆ ಶಿಮುಲ್ ಒಕ್ಕೂಟದಿಂದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ ಎಂದರು.
ಈ ಹಿಂದೆ ರೈತರ ಹಸುಗಳಿಗೆ ವಿಮೆ ಸೌಲಭ್ಯ ಮಾಡಲಾಗುತ್ತಿತ್ತು. ಆದರೆ, ಇದೀಗ ಬೇರೆ ಕಂಪನಿ ಬದಾಲಾವಣೆಯಾಗಿದ್ದು, ಆಕಸ್ಮಿಕವಾಗಿ ಮೃತಪಟ್ಟ ಹಸುಗಳ ಪೂರ್ತಿ ಹಣವನ್ನು ನೀಡಲಾಗುವುದು. ಕೃಷಿ ಇಲಾಖೆ ಸಹಯೋಗದೊಂದಿಗೆ ಪಹಣಿ ಹೊಂದಿದ ರೈತರು ಹಸುಗಳನ್ನು ಕೊಳ್ಳಲು ₹ 20,000 ಪ್ರೋತ್ಸಾಹ ಧನ ನೀಡುತ್ತಿದ್ದೇವೆ ಎಂದು ತಿಳಿಸಿದರು.
‘ಹೈನುಗಾರಿಕೆಯನ್ನು ನಂಬಿರುವ ರೈತರು ಆರ್ಥಿಕವಾಗಿ ಸಬಲರಾಗಿ ತಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿ’ ಎಂದು ಹೊಸದುರ್ಗ ವಿಭಾಗದ ಶಿಮುಲ್ ನಿರ್ದೇಶಕ ಬಿ.ಆರ್. ರವಿಕುಮಾರ್ ತಿಳಿಸಿದರು.
ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘ ರಾಜ್ಯದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದ್ದು, ಉತ್ತಮ ಲಾಭಾಂಶ ಪಡೆದಿದ್ದರಿಂದ ಇಲ್ಲಿನ ಹಾಲು ಉತ್ಪಾದಕರಿಗೆ ₹ 2 ಪ್ರೋತ್ಸಾಹ ಧನ ನೀಡಿ ಉತ್ತೇಜನ ನೀಡುತ್ತಿರುವ ಏಕೈಕ ಕೇಂದ್ರ ಎಂದು ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ಶ್ರವಣಗೆರೆ ತಿಳಿಸಿದರು.
ನಿರ್ದೇಶಕರಾದ ಆರ್. ಭದ್ರಚಲಾ, ಕುಮಾರ್, ಮಹಾಲಿಂಗಪ್ಪ, ಮಂಜುನಾಥ್, ಜ್ಯೋತಿ, ಲತಾ, ಕೆ. ಕೃಷ್ಣಕುಮಾರ್, ಪುಟ್ಟರಾಜು, ರವಿಚಂದ್ರನ್, ಭೂತೇಶ್, ಕಾರ್ಯದರ್ಶಿ ಮಾರುತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.