ADVERTISEMENT

ಚಿತ್ರದುರ್ಗ | ಡಿಜಿಟಲ್‌ ಆಡಳಿತ: ಭ್ರಷ್ಟಾಚಾರಕ್ಕೆ ಕಡಿವಾಣ

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 4:34 IST
Last Updated 19 ಏಪ್ರಿಲ್ 2022, 4:34 IST
ಚಿತ್ರದುರ್ಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಅಂತ್ಯೋದಯ ಸಮಾರಂಭವನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಉದ್ಘಾಟಿಸಿದರು. ಶಾಸಕ ಕೆ.ಚಿದಾನಂದಗೌಡ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಕೆ.ಎಸ್‌. ನವೀನ್‌, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ, ಶಾಸಕರಾದ ಗೂಳಿಹಟ್ಟಿ ಶೇಖರ್‌, ಎನ್‌. ರವಿಕುಮಾರ್‌ ಇದ್ದಾರೆ.
ಚಿತ್ರದುರ್ಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಅಂತ್ಯೋದಯ ಸಮಾರಂಭವನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಉದ್ಘಾಟಿಸಿದರು. ಶಾಸಕ ಕೆ.ಚಿದಾನಂದಗೌಡ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಕೆ.ಎಸ್‌. ನವೀನ್‌, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ, ಶಾಸಕರಾದ ಗೂಳಿಹಟ್ಟಿ ಶೇಖರ್‌, ಎನ್‌. ರವಿಕುಮಾರ್‌ ಇದ್ದಾರೆ.   

ಚಿತ್ರದುರ್ಗ: ಡಿಜಿಟಲ್‌ ಆಡಳಿತ ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತಿದೆ. ಲಂಚ ನೀಡುವ ಹಾಗೂ ತಗೆದುಕೊಳ್ಳುವ ವ್ಯವಸ್ಥೆ ಮಾಯವಾಗುತ್ತಿದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಮುರುಘಾ ಮಠದ ಅನುಭವ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಯ ಸದಸ್ಯರಿಗೆ ಸೋಮವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿ ವೇತನ, ಸಹಾಯಧನ ಫಲಾನುಭವಿಗಳನ್ನು ತಲುಪುತ್ತಿರಲಿಲ್ಲ. ದೇಶದ ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ನಿಗಮಗಳೇ ಇಲ್ಲ. ಸರ್ಕಾರದ ನೆರವು ವೆಚ್ಚವಾಗಿರುವುದಕ್ಕೆ ಸಂಬಂಧಿಸಿದ ಮಾಹಿತಿ ಕೂಡ ಇಲ್ಲ. ನೇರ ನಗದು ವ್ಯವಸ್ಥೆ ಜಾರಿಗೆ ಬಂದ ಬಳಿಕ ಅನುದಾನ ಸೋರಿಕೆ ಆಗುವುದು ನಿಂತಿದೆ. ಸರ್ಕಾರದ ನೆರವು ನೇರವಾಗಿ ಫಲಾನುಭವಿ ತಲುಪುತ್ತಿದೆ’ ಎಂದರು.

ADVERTISEMENT

‘ಸರ್ಕಾರದ ಅನೇಕ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಇಲ್ಲ. ವಿದೇಶದಲ್ಲಿ ವ್ಯಾಸಂಗ ಮಾಡುವುದಕ್ಕೆ ಕೇಂದ್ರ ಸರ್ಕಾರ ₹ 2 ಕೋಟಿ ವರೆಗೂ ವಿದ್ಯಾರ್ಥಿ ವೇತನ ನೀಡುತ್ತದೆ. ಅರಿವಿನ ಕೊರತೆಯ ಕಾರಣಕ್ಕೆ ಅರ್ಜಿಗಳೇ ಸಲ್ಲಿಕೆ ಆಗುವುದಿಲ್ಲ. ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನ ರಾಜ್ಯದಲ್ಲಿ₹ 28 ಸಾವಿರ ಕೋಟಿ, ಕೇಂದ್ರದಲ್ಲಿ₹ 1.42 ಲಕ್ಷ ಕೋಟಿ ಇದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ‘ಕೃಷಿ ಇಲಾಖೆ ಕೂಡ ಹಲವು ಯೋಜನೆಗಳನ್ನು ರೂಪಿಸಿದೆ. ಆಹಾರ ಸಂಸ್ಕರಣೆಗೆ ₹ 10 ಸಾವಿರ ಕೋಟಿಯನ್ನು ಮೀಸಲಿಡಲಾಗಿದೆ. ರೈತರು ಸಾಲದಿಂದ ಮುಕ್ತರಾಗಲು ಹಾಗೂ ಆದಾಯ ದ್ವಿಗುಣಗೊಳಿಸಲು ಕೃಷಿ ಸಮ್ಮಾನ್‌ ಯೋಜನೆ ರೂಪಿಸಲಾಗಿದೆ. ಕೃಷಿ ಉಪಕರಣಗಳಿಗೆ ಬಳಕೆ ಮಾಡುವ ಡೀಸೆಲ್‌ಗೆ ಸಹಾಯಧನ ನೀಡಲಾಗುತ್ತಿದೆ’ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯರಾದ ಎನ್‌. ರವಿಕುಮಾರ್‌, ಕೆ. ಚಿದಾನಂದಗೌಡ, ಶಾಸಕರಾದ ಟಿ. ರಘುಮೂರ್ತಿ, ಲಿಂಗಣ್ಣ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್‌ ಉಪ್ಪಾರ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ, ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಕೆ.ಎ. ದಯಾನಂದ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಪಿ.ಎಸ್‌.ಕಾಂತರಾಜು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್‌ ದೇಸಾಯಿ, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿದೇವಿ ಇದ್ದರು.

ಅಸ್ಪೃಶ್ಯತೆ ನಿವಾರಣೆಗೆ ‘ಸಾಮರಸ್ಯ’
ಸಮಾಜದಲ್ಲಿರುವ ಅಸ್ಪೃಶ್ಯತೆ ನಿವಾರಣೆ ಹಾಗೂ ಜಾಗೃತಿಯ ಉದ್ದೇಶದಿಂದ ‘ವಿನಯ ಸಾಮರಸ್ಯ’ ಯೋಜನೆ ಜಾರಿಗೆ ತರಲಾಗುವುದು ಎಂದು ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸಪೂಜಾರಿ ತಿಳಿಸಿದರು.

‘ಸರ್ಕಾರದ ಹಂತದಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗಿದೆ. ಮುಖ್ಯಮಂತ್ರಿಯೊಂದಿಗೆ ಚರ್ಚೆ ಮಾಡಲಾಗಿದೆ. ಎಲ್ಲರೂ ಒಗ್ಗೂಡಿ ದುಡಿದರೆ ಸಮಾಜ ಇನ್ನಷ್ಟು ಸುಧಾರಣೆ ಕಾಣಲಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಸರ್ಕಾರ ಶ್ರಮಿಸುತ್ತಿದೆ’ ಎಂದು ಹೇಳಿದರು.

‘ನರೇಗಾ ಕೆಲಸಕ್ಕೆ ವೇಗ ಸಿಗಲಿ’
ತಾಂತ್ರಿಕ ತೊಡಕಿನ ಕಾರಣಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಮೂರು ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಹಳ್ಳಿಗಳ ಅಭಿವೃದ್ಧಿಯ ದೃಷ್ಟಿಯಿಂದ ‘ನರೇಗಾ’ ಕೆಲಸಕ್ಕೆ ವೇಗ ನೀಡುವ ಅಗತ್ಯವಿದೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮನವಿ ಮಾಡಿದರು.

‘ಗ್ರಾಮೀಣ ಪ್ರದೇಶದಲ್ಲಿ ವಸತಿ ರಹಿತರ ಸಂಖ್ಯೆ ಹೆಚ್ಚಿದೆ. ಪ್ರತಿ ನಿಗಮದಿಂದ ಈ ವರ್ಷ ಅತಿ ಕಡಿಮೆ ಮನೆ ಮಂಜೂರು ಮಾಡಲಾಗಿದೆ. ಬೆರಳೆಣಿಕೆ ಮನೆಗಳನ್ನು ಎಲ್ಲರಿಗೂ ಹಂಚಲು ಸಾಧ್ಯವಿಲ್ಲ. ಗಂಗಾ ಕಲ್ಯಾಣ ಯೋಜನೆ, ಗೊಲ್ಲರಹಟ್ಟಿಯ ಸಿಸಿ ರಸ್ತೆ ಕಾಮಗಾರಿಗೆ ನಿರೀಕ್ಷಿತ ಅನುದಾನ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.