ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಹೋಬಳಿಯಲ್ಲಿ ಕಪ್ಪುತಲೆ ಹುಳುಬಾಧೆಗೆ ತುತ್ತಾಗಿರುವ ತೆಂಗಿನ ತೋಟ
ಹೊಸದುರ್ಗ: ಮೂರು ವರ್ಷಗಳ ಹಿಂದೆ ತೆಂಗಿನ ಮರಗಳಲ್ಲಿ ಕಾಣಿಸಿಕೊಂಡ ಕಪ್ಪುತಲೆ ಹುಳು ಬಾಧೆ (ಬೆಂಕಿ ರೋಗ) ಇತ್ತೀಚೆಗೆ ತಾಲ್ಲೂಕಿನ ರೈತರ ನಿದ್ದೆಗೆಡಿಸಿದೆ. ತಾಲ್ಲೂಕಿನಾದ್ಯಂತ ಅತೀ ಹೆಚ್ಚು ತೆಂಗು ಬೆಳೆಯುವುದು ಶ್ರೀರಾಂಪುರ ಹೋಬಳಿಯಲ್ಲಿ. ಹೀಗಾಗಿ ಈ ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದ ತೆಂಗು ರೋಗಕ್ಕೆ ಒಳಗಾಗಿದೆ.
ತಾಲ್ಲೂಕಿನಲ್ಲಿ 28,000 ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ಈ ಪೈಕಿ 1,000 ಹೆಕ್ಟೇರ್‌ನಲ್ಲಿ ರೋಗ ಹರಡಿದೆ. ಶ್ರೀರಾಂಪುರ ಹೋಬಳಿಯೊಂದರಲ್ಲೇ 11,000 ಹೆಕ್ಟೇರ್‌ನಲ್ಲಿ ತೆಂಗು ಇದ್ದು, ಅಂದಾಜು 600 ಹೆಕ್ಟೇರ್‌ನಷ್ಟು ಬೆಂಕಿ ರೋಗಕ್ಕೆ ಒಳಗಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದೆಡೆ ತೆಂಗಿನಕಾಯಿ ಹಾಗೂ ಒಣಕೊಬ್ಬರಿ ದರ ಏರಿಕೆಯಾಗಿದೆ. ಬೇಸಿಗೆಯ ಕಾರಣಕ್ಕೆ ಎಳನೀರಿನ ದರವೂ ಹೆಚ್ಚಾಗಿದೆ. ಆದರೆ ಹೋಬಳಿಯ ರೈತರು ತೆಂಗಿನ ಮರಗಳನ್ನು ಉಳಿಸಿಕೊಂಡರೆ ಸಾಕು ಎನ್ನುವಂತಾಗಿದೆ.
ತೆಂಗಿಗೆ ಹಲವು ರೋಗಗಳು ಕಾಡುತ್ತಿವೆ. ಬೂದಿರೋಗ, ಎಲೆ ಹೀರುವ ರೋಗ, ಸುಳಿರೋಗ, ಬಿಳಿನೊಣ ಹುಳುಬಾಧೆ, ನುಸಿರೋಗಗಳು ಫಸಲನ್ನು ಕಸಿದುಕೊಂಡಿವೆ. ಬೆಂಕಿರೋಗ ಮರದಿಂದ ಮರಕ್ಕೆ ಹಬ್ಬಿ, ಇಡೀ ತೋಟವೇ ನಾಶವಾಗುವಂತಹ ದುಃಸ್ಥಿತಿ ಬಂದೊದಗಿದೆ. ಬೆಂಕಿ ರೋಗ ಅಂಟಿದ 3-6 ತಿಂಗಳೊಳಗೆ ಸುಳಿ ಬಿದ್ದು, ಇಡೀ ಮರದ ಬೆಳವಣಿಗೆ ಕುಂಠಿತವಾಗುತ್ತದೆ. ರೈತ ಕಂಗಾಲಾಗಿದ್ದು, ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾನೆ.
ಬೇಸಿಗೆಯಲ್ಲಿ ಹೆಚ್ಚು:
ತೆಂಗಿನ ಗರಿಗಳ ಹಿಂದೆ ಕುಳಿತು ಎಲೆಯ ಹಿಂಭಾಗವನ್ನು ಕಪ್ಪುಹುಳು ತಿನ್ನುತ್ತದೆ. ಹಸಿರಾಗಿದ್ದ ಎಲೆಗಳು ಬಣ್ಣ ಕಳೆದುಕೊಂಡು ಸುಟ್ಟುಹೋದಂತೆ ಕಾಣುತ್ತವೆ. ಈ ರೋಗವು ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ಒಂದು ಹದವಾದ ಗುಡುಗು ಸಿಡಿಲು ಮಳೆಯಾದಲ್ಲಿ, ಎಲೆ ಮೇಲಿರುವ ಕಪ್ಪು ತಲೆ ಹುಳುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗುವುದರಿಂದ ರೋಗದ ಪ್ರಮಾಣ ಕಡಿಮೆಯಾಗುತ್ತದೆ. ರೈತರು ಇಲಾಖೆಯ ತಜ್ಞರ ಸಲಹೆ ಪಡೆದು, ಮಾರ್ಗಸೂಚಿ ಪಾಲಿಸಿದಲ್ಲಿ ರೋಗ ನಿಯಂತ್ರಿಸಬಹುದು ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿಗಳು.
ಜೈವಿಕ ಹತೋಟಿ ಕ್ರಮ:
ಮರವೊಂದಕ್ಕೆ 10-15 ಪರೋಪಕಾರಿ ಕೀಟಗಳನ್ನು ಬಿಡಬೇಕು. ಇವು ತೆಂಗಿನ ಮರದ ಎಲೆ ಮೇಲಿರುವ ಕಪ್ಪು ತಲೆ ಹುಳುವಿನ ಮೊಟ್ಟೆಗಳನ್ನು ತಿಂದು ಅವುಗಳ ಸಂತತಿ ಬೆಳೆಯದಂತೆ ನೋಡಿಕೊಳ್ಳುತ್ತವೆ ಎನ್ನುತ್ತಾರೆ ಹಿರಿಯೂರು ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಎಸ್. ಓಂಕಾರಪ್ಪ.
ತೆಂಗಿಗೆ ಹರಡಿರುವ ರೋಗ ನಿಯಂತ್ರಣದ ಬಗ್ಗೆ ಇಲಾಖೆ ಅಧಿಕಾರಿಗಳು, ಸಚಿವರು ಹಾಗೂ ತಜ್ಞರೊಂದಿಗೆ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ತಜ್ಞರ ತಂಡ ತೋಟಗಳಿಗೆ ಭೇಟಿ ನೀಡಿ, ಪರಿಹಾರ ನೀಡಲಿದೆಬಿ.ಜಿ ಗೋವಿಂದಪ್ಪ, ಶಾಸಕ
38 ಎಕರೆ ತೆಂಗಿನ ತೋಟವಿದ್ದು, ಪ್ರತಿ ವರ್ಷ 60,000 ತೆಂಗಿನಕಾಯಿ ಬರುತ್ತಿತ್ತು. ಆದರೀಗ ವರ್ಷಕ್ಕೆ 600 ಸಿಕ್ಕರೂ ಸಾಕು ಎನ್ನುವಂತಾಗಿದೆರಘು ಕಡವಿಗೆರೆ, ರೈತ
ಕಪ್ಪುತಲೆ ಹುಳು ಬಾಧೆ ನಿಯಂತ್ರಣದ ಬಗ್ಗೆ ಶ್ರೀರಾಂಪುರ ಹೋಬಳಿಯಲ್ಲಿ ವಿವಿಧ ತೋಟಗಳಿಗೆ ಭೇಟಿ ನೀಡಿ, ರೈತರಿಗೆ ಸಲಹೆ ನೀಡಲಾಗುತ್ತಿದೆ. ಇಲಾಖೆಯಿಂದ ಪರೋಪಕಾರಿ ಕೀಟಗಳನ್ನು ನೀಡಲಾಗುತ್ತಿದೆಶೋಭಾ ಬಿ.ಎಸ್, ಸಹಾಯಕ ತೋಟಗಾರಿಕೆ ನಿರೀಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.