ADVERTISEMENT

ಅನುದಾನ ಕಡಿತಕ್ಕೆ ತೀವ್ರ ಅಸಮಾಧಾನ

ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ನಡೆದ ಸಭೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 19:45 IST
Last Updated 8 ಜನವರಿ 2020, 19:45 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿತ್ರದುರ್ಗ: ಕಲೆ, ಸಾಹಿತ್ಯ, ಸಂಗೀತದಂತಹ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಟ್ರಸ್ಟ್‌ ಹಾಗೂ ಪ್ರತಿಷ್ಠಾನಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಅನುದಾನ ಕಡಿತಗೊಂಡಿರುವುದಕ್ಕೆ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು.

‘ಟ್ರಸ್ಟ್‌ ಹಾಗೂ ಪ್ರತಿಷ್ಠಾನಗಳು ಅಕಾಡೆಮಿಗಿಂತ ಹೆಚ್ಚು ಕೆಲಸ ಮಾಡುತ್ತಿವೆ. ಸಮುದಾಯದ ಸಹಭಾಗಿತ್ವದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ರಕ್ಷಣೆಯಲ್ಲಿ ತೊಡಗಿವೆ. ಸರ್ಕಾರ ನೀಡುವ ₹ 4 ಲಕ್ಷ ಅನುದಾನ ಯಾವುದಕ್ಕೂ ಸಾಕಾಗುತ್ತಿಲ್ಲ. ಈ ಅನುದಾನದಲ್ಲಿ ‍ಪ್ರತಿಷ್ಠಾನ ನಡೆಸುವುದು ತುಂಬಾ ಕಷ್ಟವಾಗುತ್ತಿದೆ’ ಎಂದು ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌ ಬೇಸರ ಹೊರಹಾಕಿದರು.

ರಾಜ್ಯದ 24 ಟ್ರಸ್ಟ್‌ ಹಾಗೂ ಪ್ರತಿಷ್ಠಾನಗಳಿಂದ ಬಂದಿದ್ದ ಮುಖ್ಯಸ್ಥರು ಮತ್ತು ಸದಸ್ಯರು ಈ ಮಾತಿಗೆ ಬೆಂಬಲ ಸೂಚಿಸಿದರು. ಜಿಲ್ಲಾಧಿಕಾರಿಗಳನ್ನು ಪ್ರತಿಷ್ಠಾನಗಳ ಆಡಳಿತಾತ್ಮಕ ಚೌಕಟ್ಟಿನಿಂದ ಹೊರಗೆ ಇಡುವಂತೆ ಮನವಿ ಮಾಡಿದರು.

ADVERTISEMENT

ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ನ ರಾಘವೇಂದ್ರ ಪಾಟೀಲ, ‘ಟ್ರಸ್ಟ್‌ ಮತ್ತು ಪ್ರತಿಷ್ಠಾನಗಳ ಸ್ವಾಯತ್ತತೆಯನ್ನು ಸರ್ಕಾರ ಗೌರವಿಸಬೇಕು. ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರತಿಷ್ಠಾನಗಳಿಗೆ ಈವರೆಗೆ ಬಂದಿರುವ ಅನುದಾನ, ಖರ್ಚು–ವೆಚ್ಚ ಹಾಗೂ ಕಾರ್ಯಚಟುವಟಿಕೆ ಬಗ್ಗೆ ಸಚಿವರು ಮಾಹಿತಿ ಪಡೆದರು. ಕಟ್ಟಡ, ನಿವೇಶನ ಹಾಗೂ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆದವು.

‘ಅನುದಾನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಚಿವನಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಮುಖ್ಯಮಂತ್ರಿಯ ಗಮನಕ್ಕೆ ತರುತ್ತೇನೆ. ಅನಾರೋಗ್ಯ, ವಯೋಮಾನದ ಕಾರಣಕ್ಕೆ ಸಕ್ರಿಯರಲ್ಲದವರನ್ನು ಪ್ರತಿಷ್ಠಾನಗಳಿಂದ ಕೈಬಿಡುವ ಆಲೋಚನೆ ಇದೆ. ತಜ್ಞರ ಸಮಿತಿ ರಚಿಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಪ್ರಶಸ್ತಿ ಮೊತ್ತಕ್ಕೆ ಮಿತಿ ಇಲ್ಲ

ಟ್ರಸ್ಟ್‌ ಹಾಗೂ ಪ್ರತಿಷ್ಠಾನ ಪ್ರದಾನ ಮಾಡುವ ಪ್ರಶಸ್ತಿಗಳ ಮೊತ್ತಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕತ್ತರಿ ಹಾಕಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಸಚಿವ ಸಿ.ಟಿ.ರವಿ, ‘ಪ್ರಶಸ್ತಿಯ ಮೊತ್ತ ಕನಿಷ್ಠ ₹ 10 ಸಾವಿರವಾದರೂ ಇರಬೇಕು’ ಎಂದು ಹೇಳಿದರು.

‘ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ಪ್ರಶಸ್ತಿ ಮೊತ್ತವನ್ನು ಮಿತಿಗೊಳಿಸಿಲ್ಲ. ಆದೇಶದಲ್ಲಿ ಸ್ಪಷ್ಟತೆ ಇಲ್ಲದ ಪರಿಣಾಮ ಗೊಂದಲ ಸೃಷ್ಟಿಯಾಗಿದೆ. ಪ್ರಶಸ್ತಿಯೊಂದಿಗೆ ಕನಿಷ್ಠ ₹ 10 ಸಾವಿರ ನೀಡಲೇಬೇಕು. ಆರ್ಥಿಕ ಶಕ್ತಿಗೆ ಅನುಗುಣವಾಗಿ ಗರಿಷ್ಠ ಮೊತ್ತ ನೀಡಲು ಟ್ರಸ್ಟ್‌ ಮತ್ತು ಪ್ರತಿಷ್ಠಾನಗಳು ಸ್ವಾತಂತ್ರ್ಯ ಹೊಂದಿವೆ’ ಎಂದರು.

***

ಟ್ರಸ್ಟ್‌ ಹಾಗೂ ಪ್ರತಿಷ್ಠಾನಗಳು ಸರ್ಕಾರಿ ಕೇಂದ್ರಿತವಾಗಬಾರದು. ಸಮುದಾಯದ ಸಹಭಾಗಿತ್ವ ಹೆಚ್ಚಿಸಿಕೊಂಡು ಸ್ವಾಯತ್ತ ಸಂಸ್ಥೆಗಳಾಗಬೇಕು. ಇವನ್ನು ಮುಂದಕ್ಕೆ ತಳ್ಳಲು ಸರ್ಕಾರಕ್ಕೆ ಸಾಧ್ಯವಿಲ್ಲ.
-ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.