ADVERTISEMENT

ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದ ತಂತ್ರಜ್ಞ

ಕಟ್ಟಡ ನಿರ್ಮಾಣ ಮೇಲುಸ್ತುವಾರಿ ತಾಂತ್ರಿಕ ಸಮಿತಿಯಲ್ಲಿ ಸೀತಾರಾಮ್‍ಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 1:26 IST
Last Updated 22 ಜನವರಿ 2021, 1:26 IST
ಚಳ್ಳಕೆರೆ ಅಯೋಧ್ಯೆ ಯ ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ಸದಸ್ಯ ರಾಗಿ ಆಯ್ಕೆ ಯಾದ ಪ್ರೊ ಟಿ.ಜಿ.ಸೀತಾರಾಮ್ ಅವರ ತಂದೆ ಮತ್ತು ತಾಯಿ .
ಚಳ್ಳಕೆರೆ ಅಯೋಧ್ಯೆ ಯ ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ಸದಸ್ಯ ರಾಗಿ ಆಯ್ಕೆ ಯಾದ ಪ್ರೊ ಟಿ.ಜಿ.ಸೀತಾರಾಮ್ ಅವರ ತಂದೆ ಮತ್ತು ತಾಯಿ .   

ಚಳ್ಳಕೆರೆ: ಅಯೋಧ್ಯೆಯ ರಾಮಮಂದಿರ ನಿರ್ಮಾಣದ ತಜ್ಞರ ತಾಂತ್ರಿಕ ಮೇಲುಸ್ತುವಾರಿ ಸಮಿತಿಯಲ್ಲಿ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದ ಟಿ.ಜಿ.ಸೀತಾರಾಮ್‍ ಅವರಿಗೆ ಸದಸ್ಯ ಸ್ಥಾನ ದೊರೆತಿದೆ. ಈ ಸಮಿತಿ ದೇಶದ ಎಂಟು ಜನರನ್ನೊಳಗೊಂಡಿದ್ದು, ಕರ್ನಾಟಕದವರೊಬ್ಬರು ಸ್ಥಾನ ಪಡೆದಿದ್ದಾರೆ.

ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಸರದ ಮೂಲ ಮನೆತನದಲ್ಲಿ ಹುಟ್ಟಿ ಬೆಳೆದ ಸೀತಾರಾಮ್‍ ಅವರು ರಾಮಮಂದಿರ ನಿರ್ಮಾಣದ ಮೇಲುಸ್ತುವಾರಿಗೆ ನೇಮಕವಾಗಿರುವುದರಿಂದ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ.

ಕೇಂದ್ರ ಸರ್ಕಾರದ ಹಲವು ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ವಿಯಾಗಿಸಿದ ಕಾರಣ ಅವರ ಕಾರ್ಯಕ್ಷಮತೆ ಗುರುತಿಸಿ ದ ವಿಜ್ಞಾನಿಯೊಬ್ಬರು ಈ ಸಮಿತಿಗೆ ಆಯ್ಕೆ ಮಾಡಲು ಸೂಚಿಸಿದ್ದರು. ಸೀತಾರಾಮ್‍ ಅವರು ಅಸ್ಸಾಂನ ಗುವಾಹಟಿಯ ಐಐಟಿಯಲ್ಲಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ಸೀತಾರಾಮ್‌ ಬೆಳೆದದ್ದು:ವತ್ಸಲಾ ಮತ್ತು ಟಿ.ಎಸ್.ಗುಂಡೂರಾವ್‍ ದಂಪತಿ ಪುತ್ರ ಸೀತಾರಾಮ್‍ ಅವರು ಜೂನ್‌ 15, 1962ರಲ್ಲಿ ಜನಿಸಿದರು. ತಂದೆ, ತಾಯಿ, ಮೂವರು ಸಹೋದರಿ ಯನ್ನೊಳಗೊಂಡ ಕುಟುಂಬದಲ್ಲಿ ಬೆಳೆದ ಸೀತಾರಾಮ್‌ ಅವರು ಪ್ರಾಥಮಿಕ ಶಿಕ್ಷಣವನ್ನು ತಳಕು ಗ್ರಾಮದಲ್ಲಿ ಪಡೆದರು.

ಪ್ರೌಢಶಿಕ್ಷಣವನ್ನು ತಾಯಿಯ ತವರೂರಾದ ದಾವಣಗೆರೆ ಜಿಲ್ಲೆ ಮನೆಬೆನ್ನೂರಿನಲ್ಲಿ ಪಡೆದರು. ಇಲ್ಲಿನ ಯುಬಿಡಿಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮುುಗಿಸಿದರು. ಬೆಂಗಳೂರಿನ ಐಐಎಸ್ಸಿಯ ಟಾಟಾ ಇನ್‍ಸ್ಟಿಟ್ಯೂಟ್‍ನಲ್ಲಿ ಎಂಎಸ್ ಪದವಿ ಪಡೆದರು. ಬಳಿಕ ಕೆನಡಾದಲ್ಲಿ ಪಿಎಚ್‍.ಡಿ ಪದವಿ ಪಡೆದುಎರಡು ವರ್ಷ ಅಮೆರಿಕದ ಟೆಕ್ಸಾಸ್‍ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ತಾಯ್ನಾಡಿಗೆ ಮರಳಿದ ಸೀತಾರಾಮ್‌ ಅವರು ಬೆಂಗಳೂರಿನ ಐಐಎಸ್ಸಿಯಲ್ಲೇ 20 ವರ್ಷ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು. ಕಳೆದ ಒಂದೂವರೆ ವರ್ಷದಿಂದ ಅಸ್ಸಾಂನ ಗುವಾಹಟಿಯ ಐಐಟಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಪತ್ನಿ ಅನುರಾಧ ಅವರು ರಸಾಯನ ವಿಜ್ಞಾನದಲ್ಲಿ ಪಿಎಚ್‍.ಡಿ ಪದವಿ ಪಡೆದು ಪದವಿ ಕಾಲೇಜು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

- ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಮ ಮಂದಿರ ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ. ಇಂತಹ ಮಹತ್ಕಾರ್ಯದಲ್ಲಿ ಪುತ್ರ ಭಾಗಿಯಾಗುವುದು ಅತೀವ ಸಂತೋಷ ತಂದಿದೆ.

ಟಿ.ಎಸ್.ಗುಂಡುರಾವ್, ವತ್ಸಲಾ, ಪೋಷಕರು

- ಶ್ರೀರಾಮ ಮಂದಿರ ನಿರ್ಮಾಣದ ಕೆಲಸಕ್ಕಾಗಿ ತಜ್ಞರ ಸಮಿತಿಯಲ್ಲಿ ಸಹೋದರನೂ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ ಎಂಬ ವಿಶ್ವಾಸವಿದೆ.

ಪುಷ್ಪಾ, ಸಹೋದರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.