ADVERTISEMENT

ಸಹಜ ಸಾವು ಎಂಬಂತೆ ಬಿಂಬಿಸಲು ಯತ್ನ: ವೈದ್ಯೆ ಡಾ.ರೂಪಾ ಸಾವು

ತಲೆಗೆ ಗುಂಡು ತಗುಲಿ ವೈದ್ಯೆ ಡಾ.ರೂಪಾ ಸಾವು; ತನಿಖೆ ಚುರುಕುಗೊಳಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 4:36 IST
Last Updated 7 ಡಿಸೆಂಬರ್ 2022, 4:36 IST
ಡಾ.ರೂಪಾ
ಡಾ.ರೂಪಾ   

ಚಿತ್ರದುರ್ಗ: ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರೂಪಾ (52) ಗುಂಡು ತಗುಲಿ ಮೃತಪಟ್ಟಿರುವುದನ್ನು ಮರೆಮಾಚಲು ಯತ್ನಿಸಿದ ಪತಿ ಡಾ.ಕೆ.ಜಿ.ರವಿ ನಡೆಯ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಹಜ ಸಾವು ಎಂಬಂತೆ ಬಿಂಬಿಸಲು ಮುಂದಾದ ರೀತಿ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

ವಿ.ಪಿ. ಬಡಾವಣೆಯ ಮನೆಯಲ್ಲಿ ಡಾ.ರೂಪಾ ಅವರು ಸೋಮವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಗುಂಡು ತಗುಲಿ ಮೃತಪಟ್ಟಿರುವುದು ಖಚಿತವಾದ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಮಂಗಳವಾರವೂ ಸ್ಪಷ್ಟವಾಗಿಲ್ಲ.

ಬೆಂಗಳೂರಿನಿಂದ ಬಂದ ವಿಧಿವಿಜ್ಞಾನ ತಜ್ಞರ ತಂಡ ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿದ್ದ ಡಾ.ರೂಪಾ ಅವರ ಮೃತದೇಹದ ಬಗ್ಗೆ ಮಾಹಿತಿ ಕಲೆಹಾಕಿತು. ಬಳಿಕ ಶವಪರೀಕ್ಷೆ ನಡೆಸಲಾಗಿದ್ದು, ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ADVERTISEMENT

ಕೇಳದ ಗುಂಡಿನ ಸದ್ದು: ಡಾ.ರೂಪಾ ಅವರ ತಲೆಗೆ ಬಿದ್ದಿರುವ ಗುಂಡು ರಿವಾಲ್ವಾರ್‌ನಿಂದ ಹಾರಿದ್ದು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ‘ಗುಂಡಿನ ಸದ್ದು ಕೇಳಿಲ್ಲ’ ಎಂಬುದಾಗಿ ಮನೆಯಲ್ಲಿಯೇ ಇದ್ದ ಕುಟುಂಬದ ಸದಸ್ಯರು ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ.

‘ರೂಪಾ ಅವರು ಸೋಮವಾರ ಬೆಳಿಗ್ಗೆ 6ಕ್ಕೆ ಹಾಸಿಗೆಯಿಂದ ಎದ್ದಿದ್ದರು. ಏರೊಬಿಕ್‌ಗೆ ತೆರಳಬೇಕಿದ್ದ ಅವರು ತರಬೇತುದಾರರು ರಜೆ ಹಾಕಿದ್ದರಿಂದ ಮನೆಯಲ್ಲಿಯೇ ಉಳಿಯಬೇಕಾಯಿತು. ಲೆಮನ್‌ ಟೀ ಸೇವಿಸಿದ ಬಳಿಕ ಪತಿ ಮನೆಯ ಎರಡನೇ ಮಹಡಿಯಲ್ಲಿದ್ದ ಜಿಮ್‌ಗೆ ತೆರಳಿದ್ದರು. 16 ವರ್ಷದ ಪುತ್ರ ಹಾಗೂ ಅತ್ತೆ ಮನೆಯಲ್ಲಿಯೇ ಇದ್ದರು. ರೂಪಾ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಮೊದಲು ಕಂಡಿದ್ದು ಕಿರಿಯ ಪುತ್ರ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಲೆಯ ಬಲಭಾಗದಿಂದ ಹಾರಿದ ಗುಂಡು ಎಡಭಾಗದಿಂದ ಹೊರಗೆ ಬಂದಿದೆ. ರೂಪಾ ಅವರ ತಲೆಯಿಂದ ಹೊರಗೆ ಬಂದ ಗುಂಡು ಗೋಡೆಗೆ ತಗುಲಿ ಟೇಬಲ್‌ ಮೇಲೆ ಬಿದ್ದಿದೆ. ಗುಂಡು ಹಾಗೂ ರಿವಾಲ್ವಾರ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಇಂಗ್ಲೆಂಡ್‌ನ ರಿವಾಲ್ವಾರ್‌ ಆಗಿದ್ದು, ಡಾ.ರವಿ ಪರವಾನಗಿ ಹೊಂದಿದ್ದರು ಎಂದು ಪೊಲೀಸರು ಖಚಿತಪಡಿಸಿದ್ದಾರೆ.

‘ತಲೆಗೆ ಪೆಟ್ಟುಬಿದ್ದು ಸಾವು’: ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಪುತ್ರ ಗಮನಿಸಿದ್ದಾನೆ. ಎರಡನೇ ಮಹಡಿಯಲ್ಲಿದ್ದ ತಂದೆಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಧಾವಿಸಿದ ರವಿ ಪತ್ನಿಯ ದೇಹವನ್ನು ಪರಿಶೀಲಿಸಿದ್ದಾರೆ. ತುರುವನೂರು ರಸ್ತೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮನೆಯಲ್ಲಿ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟುಬಿದ್ದು ಮೃತಪಟ್ಟಿದ್ದಾಗಿ ರವಿ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ವೈದ್ಯರು ಇದನ್ನೇ ನಂಬಿದ್ದರು. ಮೈಸೂರಿನಲ್ಲಿದ್ದ ರೂಪಾ ಅವರ ಕುಟುಂಬದ ಸದಸ್ಯರಿಗೂ ಇದೇ ಮಾಹಿತಿ ನೀಡಲಾಗಿತ್ತು ಎಂದು ಪೊಲೀಸ್‌ ಇಲಾಖೆ ಮೂಲಗಳು ವಿವರಿಸಿವೆ.

ರೂಪಾ ಅವರ ಸಹೋದ್ಯೋಗಿಗಳು ಹಾಗೂ ಆಸ್ಪತ್ರೆಯ ವೈದ್ಯರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ತಲೆಯಲ್ಲಿ ರಂಧ್ರವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ ಅನುಮಾನ ಮೂಡಿದೆ. ಘಟನಾ ಸ್ಥಳವನ್ನು ಕುಲಂಕಷವಾಗಿ ಪರಿಶೀಲಿಸಿದಾಗ ಗುಂಡು ಹಾಗೂ ಡೆತ್‌ನೋಟ್‌ ಪತ್ತೆಯಾಗಿದೆ.

ಕನ್ನಡದಲ್ಲಿದೆ ಡೆತ್‌ನೋಟ್‌

ರೂಪಾ ಅವರು ಮೃತಪಟ್ಟ ಬೆಡ್‌ರೂಮಿನಲ್ಲಿ ಪತ್ತೆಯಾದ ಡೆತ್‌ನೋಟ್‌ ಕನ್ನಡದಲ್ಲಿದೆ. ಪತಿಯನ್ನು ಉದ್ದೇಶಿಸಿ ಬರೆದ ಪತ್ರದ ಕೊನೆಯಲ್ಲಿ ಇಂಗ್ಲಿಷ್‌ನಲ್ಲಿ ಸಹಿ ಇದೆ.

ರೂಪಾ ಹಾಗೂ ರವಿ ಅವರದು ಪ್ರೇಮ ವಿವಾಹ. ಅಂತರ್ಜಾತಿ ವಿವಾಹವಾಗಿದ್ದ ದಂಪತಿ ಮೂರು ದಶಕ ಸಂಸಾರ ನಡೆಸಿದ್ದಾರೆ. ಎಂಜಿನಿಯರಿಂಗ್ ಹಾಗೂ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುವ ಇಬ್ಬರು ಪುತ್ರರು ಇದ್ದಾರೆ.

‘ತಪ್ಪು ಇಬ್ಬರ ಕಡೆಯಿಂದಲೂ ನಡೆದಿದೆ. ಹೃದಯಾಘಾತವಾಗಿ ಮೃತಪಟ್ಟಿರುವುದಾಗಿ ಸಂಬಂಧಿಕರಿಗೆ ಹೇಳಿ..’ ಎಂಬ ಉಲ್ಲೇಖ ಡೆತ್‌ನೋಟ್‌ನಲ್ಲಿದೆ. ಹಸ್ತಾಕ್ಷರ ರೂಪಾ ಅವರದ್ದೇ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಳ್ಳುತ್ತಿದ್ದಾರೆ.

₹ 10 ಕೋಟಿ ಸಾಲ

ಡಾ.ರೂಪಾ ಅವರು ಸರ್ಕಾರಿ ವೈದ್ಯರಾಗಿ ಚಿತ್ರದುರ್ಗ ತಾಲ್ಲೂಕಿನ ಹಲವೆಡೆ ಕಾರ್ಯನಿರ್ವಹಿಸಿದ್ದರು. ಕೀಲು ಮತ್ತು ಮೂಳೆ ತಜ್ಞರಾಗಿರುವ ಡಾ.ಕೆ.ಜಿ. ರವಿ ‘ಗಿರಿಶಾಂತ ಆರ್ಥೊ ಕೇರ್‌ ಸೆಂಟರ್‌’ ನಡೆಸುತ್ತಿದ್ದರು. ವೈದ್ಯ ದಂಪತಿಯಾಗಿದ್ದರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.

ನಗರದ ಹೊಳಲ್ಕೆರೆ ರಸ್ತೆಯಲ್ಲಿ ಹೋಟೆಲ್‌ ತೆರೆದಿದ್ದರು. ನಷ್ಟ ಅನುಭವಿಸಿದ ಪರಿಣಾಮವಾಗಿ ಹೋಟೆಲ್‌ ಮುಚ್ಚಲಾಗಿತ್ತು. ‘₹ 10 ಕೋಟಿ ಸಾಲ ಹೆಗಲ ಮೇಲಿತ್ತು. ಇದರಲ್ಲಿ ₹ 7 ಕೋಟಿ ಸಾಲವನ್ನು ತೀರಿಸಲಾಗಿತ್ತು. ಇನ್ನೂ ₹ 3 ಕೋಟಿ ಬಾಕಿ ಇತ್ತು’ ಎಂದು ಪೊಲೀಸರ ಎದುರು ಡಾ.ರವಿ ಹೇಳಿಕೆ ನೀಡಿದ್ದಾರೆ.

......

ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂಬಂತೆ ಗೋಚರವಾಗುತ್ತಿದೆ. ರೂಪಾ ಸಹೋದರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ತನಿಖೆಯ ಬಳಿಕ ನಿಜಾಂಶ ಹೊರಬರಲಿದೆ.

-ಕೆ. ಪರಶುರಾಮ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

.......

ತಂದೆ–ತಾಯಿ ತೀರಿದ ಬಳಿಕ ರೂಪಾ ಖಿನ್ನತೆಗೆ ಒಳಗಾಗಿದ್ದರು. ಇಬ್ಬರೂ 25 ವರ್ಷ ದುಡಿದು ಸಂಪಾದಿಸಿದ ಆಸ್ತಿ ಕಳೆದುಕೊಂಡಿದ್ದೆವು. ಈ ಬೇಸರ ಅವರಿಗೂ ಇತ್ತು. ಆತ್ಮಹತ್ಯೆಗೆ ಇದು ಕಾರಣವಾಗಿರಬಹುದು.

ಡಾ.ಕೆ.ಜಿ.ರವಿ, ಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.