ಚಿತ್ರದುರ್ಗ:‘ಎಲ್ಲರದೂ ಒಂದೇ ಜೀವ... ಯಾರಿಗೂ ತೊಂದ್ರೆ ಕೊಟ್ಟು ಜೀವನ ಮಾಡೋದು ನಮ್ಗೂ ಇಷ್ಟವಿಲ್ಲ... ಆದ್ರೆ ಈ ಕಸುಬು ಬಿಟ್ರೆ ನಮ್ಗೆ ಬ್ಯಾರೇ ಗೊತ್ತಿಲ್ಲ... ಜಾಗ ತೋರಿಸಿ ನಾವ್ ಈ ಕ್ಷಣನೇ ಗುಮ್ಮಿ ಸಹಿತ ಹೋಗ್ತಿವಿ...’ ಎನ್ನುತ್ತಾ ಸುಣ್ಣದ ಕಲ್ಲನ್ನು ಗುಮ್ಮಿಗೆ ತುಂಬುತ್ತಾ ಸಂಕಷ್ಟವನ್ನು ತೆರೆದಿಟ್ಟರು ಸುಣ್ಣಗಾರರು.
ತಲೆತಲಾಂತರಗಳಿಂದ ನಗರದ ಜೋಗಿಮಟ್ಟಿ ರಸ್ತೆಯ ಅಗಳು ಪ್ರದೇಶದಲ್ಲಿ ಸುಣ್ಣದ ಗುಮ್ಮಿಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ ಬೆಸ್ತ ಸಮುದಾಯದ ಸುಣ್ಣಗಾರರು. ಆದರೆ, ಕೆಲ ವರ್ಷಗಳಿಂದ ಸುಣ್ಣದ ಗುಮ್ಮಿಯ ಹೊಗೆಯ ಸಮಸ್ಯೆ ಸುತ್ತಲಿನ ಐದು ವಾರ್ಡ್‌ಗಳ ಜನರ ನಿದ್ದೆಗೆಡಿಸಿದೆ.
ಪ್ರತಿ ವರ್ಷ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಜೋಗಿಮಟ್ಟಿ ರಸ್ತೆ, ಸ್ವಾಮಿ ವಿವೇಕಾನಂದ ನಗರದ ಜನರು ಹೊಗೆಯಿಂದ ಹೈರಾಣಾಗುತ್ತಿದ್ದಾರೆ. ಯಾಕಾದರೂ ಸಂಜೆ ಆಗುತ್ತದೆಯೋ ಎಂಬ ಸಂಕಷ್ಟದ ಸ್ಥಿತಿಗೆ ಬಂದು ನಿಂತಿದ್ದಾರೆ.
ರಾತ್ರಿ ಏಳು ಗಂಟೆಯ ಸುಮಾರಿಗೆ ಜೋಗಿಮಟ್ಟಿ ರಸ್ತೆಗೆ ಪ್ರವೇಶಿಸಿದರೆ ಸಾಕು, ದಟ್ಟ ಹೊಗೆ ನಮ್ಮನ್ನು ಸ್ವಾಗತಿಸುತ್ತದೆ. ಅಷ್ಟರಮಟ್ಟಿಗೆ ಇಲ್ಲಿನ ಗುಮ್ಮಿಗಳು ಹೊಗೆಯನ್ನು ಹೊರಸೂಸುತ್ತವೆ. ಇದರಿಂದ ಸಾವಿರಕ್ಕೂ ಹೆಚ್ಚು ಮನೆಗಳ ನಿವಾಸಿಗಳು ನೇರವಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ.
ನಗರದಲ್ಲಿ ಒಟ್ಟು 37 ಸುಣ್ಣದ ಗುಮ್ಮಿಗಳಿವೆ. ಇದನ್ನು ನಂಬಿ ಕಳೆದ 60 ವರ್ಷಗಳಿಂದ ಹಲವು ಕುಟುಂಬಗಳು ಜೀವನ ಸಾಗಿಸುತ್ತಿವೆ. ಕೆಲ ವರ್ಷಗಳಿಂದ ಈ ಭಾಗದ ಜನರ ಜತೆ ಸಂಘರ್ಷ ಇವರಿಗೆ ಸಾಮಾನ್ಯವಾಗಿದೆ.
ನಿತ್ಯ ಜನರ ಮಾತನ್ನು ಕೇಳಿ ಮನನೊಂದಿರುವ ಸುಣ್ಣಗಾರರು ಕಳೆದ ಐದಾರು ವರ್ಷಗಳಿಂದ ಸ್ಥಳಾಂತರಿಸುವಂತೆ ಜಿಲ್ಲಾಡಳಿತಕ್ಕೆ, ಶಾಸಕರಿಗೆ ಮನವಿ ಸಲ್ಲಿಸಿ ಸುಸ್ತಾಗಿದ್ದಾರೆ. ಈ ಬೆಳವಣಿಗೆ ನಡುವೆಯೇ ನಗರಸಭೆ, ಆರೋಗ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ತಂಡ ಈ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಗಂಭೀರತೆಯನ್ನು ಜಿಲ್ಲಾಡಳಿತಕ್ಕೆ ತಿಳಿಸಿದೆ.
ನಗರದಲ್ಲಿ ಇಷ್ಟು ವರ್ಷವಾದರೂ ಸುಣ್ಣ ಮಾರಾಟಕ್ಕೆಂದು ನಗರಸಭೆ ಸ್ಥಳ ನಿಗದಿಗೊಳಿಸಿಲ್ಲ. ಪಾದಚಾರಿ ಮಾರ್ಗಗಳೇ ವ್ಯಾಪಾರದ ಸ್ಥಳವಾಗಿವೆ.ಮೀನು ಹಿಡಿದು ಜೀವನ ಸಾಗಿಸುತ್ತಿದ್ದ ಬೆಸ್ತ ಜನಾಂಗಕ್ಕೆ ‘ಸರ್ಕಾರದ ಟೆಂಡರ್’ ಶಾಪವಾಗಿದೆ. ಬಣ್ಣದ ಹಾವಳಿಯಿಂದ ಸುಣ್ಣಕ್ಕೆ ಬೇಡಿಕೆ ಇಲ್ಲವಾಗಿದೆ. ಇದರಿಂದ ಲಾಭವಿಲ್ಲದ ಕಸುಬನ್ನು ಬಿಡಲೂ ಆಗದೇ, ಕಟ್ಟಿಕೊಳ್ಳಲೂ ಆಗದೇ ಸಂಕಷ್ಟದಲ್ಲಿ ಬದುಕಿನ ದಿನಗಳನ್ನು ದೂಡುತ್ತಿದ್ದಾರೆ.
ಇಬ್ಬನಿ ಕಂಟಕ: ಸುಣ್ಣಕ್ಕೆ ಬೇಡಿಕೆ ಹೆಚ್ಚಾಗುವ ಡಿಸೆಂಬರ್ ತಿಂಗಳಲ್ಲಿ ಚಳಿಗಾಲ ಶುರುವಾಗುತ್ತದೆ. ಮೊದಲು ಸುಣ್ಣ ಸುಡಲು ಇದ್ದಿಲನ್ನು ಬಳಸುತ್ತಿದ್ದರು. ಆದರೆ, ಬೆಲೆ ಏರಿಕೆಯಿಂದ ತೆಂಗಿನ ಚಿಪ್ಪು, ಮೆಕ್ಕೆಜೋಳದ ದಂಟನ್ನು ಬಳಸುವುದರಿಂದ ಹೊಗೆ ಹೆಚ್ಚಾಗುತ್ತಿದೆ.ನಾಲ್ಕು ಟನ್ ಕಚ್ಚಾ ಸುಣ್ಣವನ್ನು ಪೂರ್ಣ ನಾಲ್ಕು ದಿನ ಸುಡಲಾಗುತ್ತದೆ. ಈ ವೇಳೆ ಹಗಲಿರುಳೂ ಹೊಗೆ ಹೊರಹೊಮ್ಮುತ್ತದೆ. ಎರಡು ತಿಂಗಳು ಇಬ್ಬನಿ ವಾತಾವರಣದ ಕಾರಣಕ್ಕೆ ಹೊಗೆ ಮೇಲೆ ಹೋಗಲು ಸಾಧ್ಯವಾಗದೇ ಸಮಸ್ಯೆ ಉಂಟಾಗುತ್ತದೆ.
‘ಸುಣ್ಣದ ಕೆಲಸದಲ್ಲಿ ಖರ್ಚು ಜಾಸ್ತಿ, ಲಾಭ ಕಡಿಮೆ. ವರ್ಷ ಪೂರ್ತಿ ದುಡಿದರೂ ಸಾಲ ಮಾಡೋದು ತಪ್ಪಿಲ್ಲ’ ಎಂದು ಲಾಭ ನಷ್ಟದ ಲೆಕ್ಕಚಾರ ಬಿಚ್ಚಿಟ್ಟರು ಸುಣ್ಣಗಾರರು.
‘ಕ್ಯಾದಿಗೆರೆ, ಬುರುಜನರೊಪ್ಪ, ಪಾಲವ್ವನಹಳ್ಳಿ, ಗೌಡಗೆರೆ, ನೆಲಗೇತನಹಟ್ಟಿ ಕಡೆಗಳಿಂದ ಸುಣ್ಣದ ಕಲ್ಲು ತರಿಸುತ್ತೇವೆ. ಐದರಿಂದ ಎಂಟು ಸಾವಿರ ರೂಪಾಯಿ ಕೊಟ್ಟು 4 ಟನ್‌ನ ಒಂದು ಲೋಡು ಸುಣ್ಣದ ಕಲ್ಲು ತಂದರೆ 2 ಟನ್ ಸುಣ್ಣ ಬರುತ್ತದೆ. ಎಲ್ಲ ಸೇರಿ ಒಂದು ಗುಮ್ಮಿಗೆ ಸರಾಸರಿ ₹ 18 ಸಾವಿರ ಖರ್ಚಾಗುತ್ತದೆ. ಮಾರಾಟ ಮಾಡಿದ ಬಳಿಕ
₹ 5 ಸಾವಿರ ಉಳಿದರೆ ಹೆಚ್ಚು. ಇದು ವರ್ಷದ ಎರಡು ತಿಂಗಳು ಮಾತ್ರ’ ಎಂದು ವಿವರಿಸಿದರು.
ಗುಮ್ಮಿಗಳಲ್ಲಿ ತಯಾರಿಸುವ ಸುಣ್ಣ ಪರಿಸರಸ್ನೇಹಿ. ಆದರೆ, ಸುಣ್ಣ ಬೇಯಿಸುವ ಪ್ರಕ್ರಿಯೆಯ ವೇಳೆ ಹೊರಸೂಸುವ ಹೊಗೆ ಹಾಗೂ ದೂಳು ಶ್ವಾಸಕೋಶಕ್ಕೆ ಹೆಚ್ಚು ಹಾನಿ ಮಾಡುತ್ತದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.
ಆಸರೆಯಾದ ಅಡಿಕೆ, ಕೋಟೆ
ಮನೆಗಳಿಂದ ದೂರವಾದ ಸುಣ್ಣ ಅಡಿಕೆ, ಕೋಟೆ, ದೇವಸ್ಥಾನಗಳಿಗೆ ಸರ್ವ ಶ್ರೇಷ್ಠ. ಬಯಲು ಸೀಮೆಯ ಅಡಿಕೆ ಮರಗಳನ್ನು ಬಿಸಿಲನಿಂದ ರಕ್ಷಿಸಲು ಸುಣ್ಣ ಬಳಕೆ ಹೆಚ್ಚಾಗಿದೆ. ಇದು ಸುಣ್ಣಕ್ಕೆ ಬೇಡಿಕೆಯನ್ನು ತಂದುಕೊಟ್ಟಿದೆ. ಇದರಿಂದ ಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಪುರಾತತ್ವ, ಮುಜರಾಯಿ ವ್ಯಾಪ್ತಿಯ ಕೋಟೆ, ದೇವಸ್ಥಾನಗಳ ಜೀರ್ಣೋದ್ಧಾರದ ವೇಳೆ ಗಾರೆ ಕೆಲಸಕ್ಕೆ ಸುಣ್ಣದ ಬಳಕೆ ಕಡ್ಡಾಯವಾಗಿದೆ. ಇಲ್ಲಿನ ಗುಮ್ಮಿಗಳಿಂದ ಕೋಲಾರ, ಬಳ್ಳಾರಿ, ಹಂಪಿ, ತುಮಕೂರು, ದಾವಣಗೆರೆ ಜಿಲ್ಲೆ ಹಾಗೂ ಗೋವಾದ ಪುರಾತನ ಚರ್ಚ್‌ಗಳಿಗೆ ಸುಣ್ಣ ರವಾನೆಯಾಗುತ್ತದೆ.
ಬಿಸಿಲ ರಕ್ಷಣೆಗೆ ಸುಣ್ಣ ಮದ್ದು
ಶ್ವೇತಾ ಜಿ.
ಹೊಸದುರ್ಗ:ಕೃಷಿಗೆ ಪೋಷಕಾಂಶದ ನಿರ್ವಹಣೆ ಮಹತ್ವದ್ದು, ಸೂಕ್ತ ಸಮಯದಲ್ಲಿ ಇವು ಮಣ್ಣಿಗೆ ದೊರೆತರೆ ಅದು ಬೆಳೆಗೆ ಪೂರಕ. ಹೆಚ್ಚು ಇಳುವರಿ ಪಡೆಯಲು ರೈತರು, ಸಸಿಗಳಿಗೆ ಉತ್ತಮ ಪೋಷಕಾಂಶ ನೀಡಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಹೊಸದುರ್ಗ ತಾಲ್ಲೂಕಿನ ಜನರು ಅಡಿಕೆ ಗಿಡಗಳಿಗೆ ಸುಣ್ಣ ಹಚ್ಚುವುದರಲ್ಲಿ ನಿರತರಾಗಿದ್ದಾರೆ.
ಅಡಿಕೆ ಪ್ರಮುಖ ವಾಣಿಜ್ಯ ಬೆಳೆ. ಈ ಬೆಳೆಗೆ ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುವ ಇಂಗಾಲ, ಆಮ್ಲಜನಕ ಮತ್ತು ಜಲಜನಕವನ್ನು ಪ್ರಕೃತಿಯೇ ಒದಗಿಸುತ್ತದೆ. ಬೆಳೆಗೆ ದ್ವಿತೀಯ ಪೋಷಕಾಂಶಗಳಾಗಿ ಸುಣ್ಣ, ಮೆಗ್ನೀಷಿಯಂ ಮತ್ತು ಗಂಧಕವನ್ನು ಒದಗಿಸಬೇಕು.
ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಸುಣ್ಣ ಬಳಸುವುದಿಲ್ಲ. ಸಸ್ಯಗಳಿಗೆ ಪೋಷಕಾಂಶ ಕೊಡುವ ಮುಂಚೆ ಸುಣ್ಣದ ಅಂಶ ಕೊಟ್ಟರೆ ಉಳಿದ ಯಾವುದೇ ಗೊಬ್ಬರ ಕೊಡುವುದು ತಡವಾದರೂ, ಸಸ್ಯದ ಬೆಳವಣಿಗೆ ಒಮ್ಮೆಲೇ ವೃದ್ಧಿಯಾಗುತ್ತದೆ. ಮಣ್ಣಿನಲ್ಲಿ ಕೆಲವು ಪೋಷಕಾಂಶಗಳ ಕೊರತೆಯಿದ್ದರೆ ಸುಣ್ಣ ಅದನ್ನು ನೀಗಿಸುತ್ತದೆ.
35 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಅಡಿಕೆ ಮರದ ಕಾಂಡಕ್ಕೆ ನಿರಂತರ ಬಿಸಿಲು ಬೀಳುವುದರಿಂದ ಕಾಂಡ ಹಳದಿ ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುತ್ತದೆ. ವರ್ಷ ಕಳೆದಾಗ ಆ ಭಾಗದಲ್ಲಿ ಸಣ್ಣ ಒಡಕು ಮೂಡುತ್ತದೆ. ಮೂರು ವರ್ಷದ ನಂತರ ಆ ಭಾಗ ನಿರ್ಜೀವವಾಗಿ ಗಾಳಿಗೆ ಬೀಳಲೂಬಹುದು. ಇದನ್ನು ತಡೆಯುವ ಉದ್ದೇಶದಿಂದ ಅಡಿಕೆ ಮರಕ್ಕೆ 2ನೇ ವರ್ಷದಿಂದ 5 ವರ್ಷದವರೆಗೂ ಸುಣ್ಣ ಲೇಪನ ಮಾಡಲಾಗುತ್ತದೆ.
ಚಳಿಗಾಲ ಆರಂಭವಾಗುವ ಕಾರ್ತಿಕ ಮಾಸದಿಂದ ಮಕರ ಮಾಸದ ತನಕ ದಕ್ಷಿಣಾಯನದ ಪ್ರಖರ ಬಿಸಿಲಿಗೆ ಎಳೆಯ ಅಡಿಕೆ ಸಸಿಯ ಎಲೆಗಳು ತಾಗಿ ಕಮರುತ್ತವೆ. ಈ ಸಮಯದಲ್ಲಿ ಬೆಳೆಯುತ್ತಿರುವ ಮರದ ಕಾಂಡಕ್ಕೆ ಬಿಸಿಲು ತಾಗಿ, ಮರದ ಆಯುಸ್ಸು ಕಡಿಮೆಯಾಗುತ್ತದೆ. ಇದನ್ನು ನಿಯಂತ್ರಿಸಲು ಸುಣ್ಣವನ್ನು ಲೇಪನ ಮಾಡುವುದು ರೂಢಿ. ಕಾರಣ ಬಿಳಿ ಬಣ್ಣವು ಸೂರ್ಯನ ಶಾಖವನ್ನು ಕಡಿಮೆ ಹೀರಿಕೊಳ್ಳುತ್ತದೆ. ಸಸಿ ಬುಡ ಬಿಟ್ಟ ನಂತರ ಕಾಂಡಕ್ಕೆ ಬಿಸಿಲು ತಾಗದಂತೆ ಸುಣ್ಣವನ್ನು ಲೇಪನ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಮರದಲ್ಲಿ 50–60 ವರ್ಷಕ್ಕೂ ಹೆಚ್ಚು ಇಳುವರಿ ಪಡೆಯಬಹುದು.
‘ಜನವರಿಯಲ್ಲಿ ಅಡಿಕೆ ಗಿಡಕ್ಕೆ ಸುಣ್ಣ ಹಚ್ಚುತ್ತೇವೆ. ಮಾರುಕಟ್ಟೆಯಲ್ಲಿ ಸುಣ್ಣ ತಂದು ಬೆಲ್ಲ ಮಿಶ್ರಣ ಮಾಡಿ ಹಚ್ಚಲಾಗುತ್ತದೆ. ಹೀಗೆ ಮಾಡುವುದರಿಂದ ಸುಣ್ಣ ಬಿಸಿಲಿಗೆ ಉದುರುವುದಿಲ್ಲ. ತೋಟದ 580 ಗಿಡಗಳಿಗೆ 20 ಲೀಟರ್ ಸುಣ್ಣ ಹಚ್ಚಲಾಗಿದೆ’ ಎನ್ನುತ್ತಾರೆ ರೈತ ಎಚ್. ಪ್ರಕಾಶ್.
ಸಂಕಷ್ಟದಲ್ಲಿ ಸುಣ್ಣಗಾರರು
ಶಿವಗಂಗಾ ಚಿತ್ತಯ್ಯ
ಚಳ್ಳಕೆರೆ:ಸುಣ್ಣದ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ತಾಲ್ಲೂಕಿನ 40ಕ್ಕೂ ಹೆಚ್ಚು ಕುಟುಂಬಗಳು ತೀವ್ರ ಸಂಕಷ್ಟದ ಸ್ಥಿತಿಗೆ ಸಿಲುಕಿವೆ.
ದೊಡ್ಡೇರಿ, ಗುಡಿಹಳ್ಳಿ, ಮನಮೈನಹಟ್ಟಿ, ಯಲಗಟ್ಟೆ, ಪರಶುರಾಂಪುರ, ನಾರಾಯಣಪುರ, ತಳಕು, ಜುಂಜರಗುಂಟೆ ಮುಂತಾದ ಗ್ರಾಮದಲ್ಲಿ ಸುಣ್ಣಗಾರರು ನೆಲೆಸಿದ್ದಾರೆ. ಬಣ್ಣ ಬಂದ ಮೇಲೆ ಸುಣ್ಣಕ್ಕೆ ಬೇಡಿಕೆ ಕುಸಿದ ಪರಿಣಾಮವಾಗಿ ಜನಾಂಗದವರು ಕಟ್ಟಡ ನಿರ್ಮಾಣ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಕಲ್ಲುಸುಣ್ಣ, ಪುಡಿ ಸುಣ್ಣ ಮತ್ತು ಗಸಿಸುಣ್ಣ ಹೀಗೆ ಮೂರು ತರಹ ಸುಣ್ಣವನ್ನು ತಯಾರು ಮಾಡುತ್ತಾರೆ. ಗುಣಮಟ್ಟದ ಕಲ್ಲು ಸುಣ್ಣ ಎಲೆ–ಅಡಿಕೆಗೆ, ಪುಡಿ ಸುಣ್ಣ ಕೋಳಿಫಾರಂ, ರೇಷ್ಮೆ ಗೂಡಿಗೆ ಮತ್ತು ಗಸಿಸುಣ್ಣವನ್ನು ಮನೆ ಚಾವಣಿಹಾಗೂ ಗೋಡೆಗಳಿಗೆ ಬಳಕೆ ಮಾಡುತ್ತಾರೆ.
‘ಸುಣ್ಣಕ್ಕೆ ಬೇಡಿಕೆ ಕುಸಿದಿದ್ದರೂ ಕುಲಕಸುಬು ಕಳೆದುಕೊಳ್ಳಬಾರದು ಎಂದು ನಷ್ಟವನ್ನು ಎದುರಿಸುತ್ತಲೇ ಕೆಲಸ ಮಾಡುತ್ತಿದ್ದೇವೆ. ನಾಲ್ಕು ದಿನ ಸುಣ್ಣದ ಕಲ್ಲು ಸುಟ್ಟರೆ ಒಂದು ಗುಮ್ಮಿಯಿಂದ 100 ಚೀಲ ಸುಣ್ಣ ದೊರೆಯುತ್ತದೆ. 25 ಕೆ.ಜಿ ತೂಕದ ಚೀಲವನ್ನು ₹ 150ಗೆ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ದೊಡ್ಡೇರಿ ಸುಣ್ಣಗಾರ ಹನುಮಂತಪ್ಪ.
‘ಗ್ರಾಮದ ಸರ್ಕಾರಿ ಜಾಗದಲ್ಲಿ ಸುಣ್ಣ ಸುಡುತ್ತೇವೆ. ನಮಗೆ ಬ್ಯಾಂಕ್‍ನಲ್ಲಿ ಸಾಲ ಸೌಲಭ್ಯ ನೀಡುವುದಿಲ್ಲ. ಅಂಬಿಗರ ಚೌಡಯ್ಯ ಯೋಜನೆಯ ಅಡಿಯಲ್ಲಿ ಈವರೆಗೂ ಬಿಡಿಗಾಸು ಸಿಕ್ಕಿಲ್ಲ’ ಎಂದು ಗಂಗಮ್ಮ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.