ADVERTISEMENT

ರಾಜಕೀಯ ವಿದ್ಯಮಾನ ಸಮಿತಿಗೆ ಮಾಜಿ ಸಚಿವ ಎಚ್‌.ಆಂಜನೇಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 13:31 IST
Last Updated 10 ಜುಲೈ 2022, 13:31 IST
ಎಚ್.ಆಂಜನೇಯ
ಎಚ್.ಆಂಜನೇಯ   

ಚಿತ್ರದುರ್ಗ: ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ರೂಪಿಸಿದ ಕೆಪಿಸಿಸಿ ರಾಜಕೀಯ ವಿದ್ಯಮಾನಗಳ ಸಮಿತಿಯಲ್ಲಿ ಮಾಜಿ ಸಚಿವ ಎಚ್‌.ಆಂಜನೇಯ ಸ್ಥಾನ ಪಡೆದಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಧ್ಯಕರ್ನಾಟಕದಿಂದ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ನೇತೃತ್ವದಲ್ಲಿ ಎಐಸಿಸಿ ರಚಿಸಿದ ಸಮಿತಿಯಲ್ಲಿ 28 ಸದಸ್ಯರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಪಕ್ಷದ ಹಿರಿಯ ನಾಯಕರನ್ನೊಳಗೊಂಡ ಸಮಿತಿ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಲಿದೆ.

‘ವಿಧಾನಸಭಾ ಚುನಾವಣೆಗೆ ವರ್ಷಕ್ಕಿಂತ ಕಡಿಮೆ ಅವಧಿ ಇದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಅಖಾಡಕ್ಕೆ ಇಳಿಯುವ ಚಿಂತನೆಯಲ್ಲಿವೆ. ರಾಜಕೀಯ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್‌ ಒಂದು ಹೆಜ್ಜೆ ಮುಂದಿದೆ. ಜಾತಿ, ಪ್ರದೇಶ, ಹಿರಿತನ, ಪಕ್ಷ ನಿಷ್ಠೆ ಆಧಾರದಡಿ ನಾಯಕರಿಗೆ ಸ್ಥಾನ ಕಲ್ಪಿಸಲಾಗಿದೆ’ ಎಂದು ಆಂಜನೇಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ವಿಧಾನಸಭಾ ಕ್ಷೇತ್ರವಾರು ಪಕ್ಷ ಸಂಘಟನೆ, ಪ್ರಚಾರ ಹಾಗೂ ರಾಜಕೀಯ ವ್ಯವಹಾರಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸುವ ಉನ್ನತ ಸಮಿತಿ ಇದಾಗಿದೆ. ಚುನಾವಣೆಯಲ್ಲಿ ಪಕ್ಷ ಬಹುಮತ ಗಳಿಸಲು ಅಗತ್ಯವಿರುವ ತಂತ್ರಗಾರಿಕೆ ಹೆಣೆಯುವ ಜವಾಬ್ದಾರಿ ಸಮಿತಿಗೆ ಇದೆ’ ಎಂದು ಮಾಹಿತಿ ನೀಡಿದ್ದಾರೆ.

ಆಂಜನೇಯ ಅವರಿಗೆ ಸಮಿತಿಯಲ್ಲಿ ಅವಕಾಶ ಕಲ್ಪಿಸಿದ ಪಕ್ಷದ ನಿರ್ಧಾರವನ್ನು ಕಾಂಗ್ರೆಸ್‌ ಜಿಲ್ಲಾ ಘಟಕ ಸ್ವಾಗತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.