ADVERTISEMENT

ಕೃಷಿ ಸಾಲಕ್ಕೂ ರೈತರ ಪರದಾಟ

ರೈತರಿಗೂ ‘ಸಿಬಿಲ್‌’ ಕಡ್ಡಾಯ ಮಾನದಂಡ l ವಾಹನ, ಮನೆ ಸಾಲ ಪಾವತಿ ವಿಳಂಬ ಕಾರಣ

ಜಿ.ಬಿ.ನಾಗರಾಜ್
Published 15 ಆಗಸ್ಟ್ 2019, 19:45 IST
Last Updated 15 ಆಗಸ್ಟ್ 2019, 19:45 IST

ಚಿತ್ರದುರ್ಗ: ಸಾಲ ಪಡೆಯುವ ಹಾಗೂ ಮರುಪಾವತಿಸುವ ಸಾಮರ್ಥ್ಯವನ್ನು ವಿಶ್ಲೇಷಿಸುವ ‘ಕ್ರೆಡಿಟ್ ಇನ್‌ಫರ್ಮೇಷನ್ ಬ್ಯೂರೊ ಆಫ್ ಇಂಡಿಯಾ ಲಿಮಿಟೆಡ್‌’ (ಸಿಬಿಲ್‌) ವರದಿಯನ್ನು ರೈತರಿಗೂ ಕಡ್ಡಾಯಗೊಳಿಸಿದ್ದರಿಂದ ಕೃಷಿ ಸಾಲಕ್ಕೂ ಅನ್ನದಾತ ಪರದಾಡುವಂತಾಗಿದೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಸೂಚನೆಯ ಮೇರೆಗೆ ಬ್ಯಾಂಕುಗಳು ಈ ನೀತಿಯನ್ನು ಜಾರಿಗೆ ತಂದಿವೆ. ಗ್ರಾಮೀಣ ಹಾಗೂ ಸಹಕಾರಿ ಕ್ಷೇತ್ರದ ಬ್ಯಾಂಕುಗಳಿಗೂ ಈ ಮಾನದಂಡವನ್ನುವಿಸ್ತರಿಸಲಾಗಿದ್ದು, ಎರಡು ವರ್ಷಗಳ ಬಳಿಕ ರೈತರಿಗೆ ಬಿಸಿತಟ್ಟಲಾರಂಭಿಸಿದೆ.

ಮುಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆಯಲು ಬ್ಯಾಂಕುಗಳ ಮೆಟ್ಟಿಲೇರಿದ ರೈತರಿಗೆ ‘ಸಾಲದ ಸಾಮರ್ಥ್ಯ ಕಡಿಮೆ ಇದೆ’ ಎಂಬ ಮಾತು ಕಿವಿಗೆ ಬೀಳುತ್ತಿದೆ. ಬೇಬಾಕಿ ಪ್ರಮಾಣ ಪತ್ರ (ಎನ್‌ಡಿಸಿ) ಒದಗಿಸಿದರೂ ಸಾಲ ಸಿಗುವುದು ಅನುಮಾನವಾಗಿದೆ. ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಸಹ ‘ಸಿಬಿಲ್‌’ ಪರಿಶೀಲಿಸಲಾಗುತ್ತಿವೆ. ಆದರೆ, ಇದನ್ನು ಕಡ್ಡಾಯ ಮಾಡಿಲ್ಲ.

ADVERTISEMENT

ಬ್ಯಾಂಕುಗಳ ಖಾತೆದಾರರ ಸಾಲದ ಮಾಹಿತಿಯನ್ನು ಒದಗಿಸುವ ಸೇವೆಯನ್ನು ‘ಸಿಬಿಲ್‌’ ಮಾಡುತ್ತದೆ. ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳು ಸೇರಿ 500ಕ್ಕೂ ಅಧಿಕ ಬ್ಯಾಂಕ್‌, ಹಣಕಾಸು ಸಂಸ್ಥೆಗಳು ಸಾಲ ಪಡೆದವರ ಮಾಹಿತಿಯನ್ನು ‘ಸಿಬಿಲ್‌’ ಜತೆ ಹಂಚಿಕೊಳ್ಳುತ್ತವೆ. ಪ್ರತಿ ಸಾಲಗಾರನ ಸಾಲದ ಇತಿಹಾಸವನ್ನು ಸಿಬಿಲ್‌ ದಾಖಲಿಸುತ್ತದೆ. ರೈತರ ಸಾಲದ ಇತಿಹಾಸವನ್ನು ಪರಿಶೀಲಿಸಿ ಮರುಪಾವತಿಯ ಸಾಮರ್ಥ್ಯವನ್ನು ಅಳಯಲಾಗುತ್ತದೆ.

ಸಾಲಗಾರರ ಸಾಮರ್ಥ್ಯವನ್ನು ಅಳೆಯಲು 300ರಿಂದ 900ರವರೆಗೆ ಅಂಕಗಳನ್ನು ‘ಸಿಬಿಲ್‌’ ನಿಗದಿ ಮಾಡಿದೆ. 750ಕ್ಕಿಂತ ಹೆಚ್ಚು ಅಂಕ ಗಳಿಸಿದ ವ್ಯಕ್ತಿ ಸಾಲಕ್ಕೆ ಅರ್ಹತೆ ಪಡೆಯುತ್ತಾರೆ. ಸಾಲ ಮರುಪಾವತಿಯ ಆಧಾರದ ಮೇರೆಗೆ ಇದನ್ನು ವಿಶ್ಲೇಷಿಸಲಾಗುತ್ತದೆ. ಸಾಲದ ಕಂತು ಪಾವತಿಯಲ್ಲಿ ಉಂಟಾದ ಲೋಪದಿಂದ ಹೊಸ ಸಾಲ ಪಡೆಯುವ ಅವಕಾಶ ರೈತರ ಕೈತಪ್ಪುತ್ತದೆ.

ಸರ್ಕಾರ ಘೋಷಣೆ ಮಾಡಿದ ಸಾಲ ಮನ್ನಾದ ಪ್ರಯೋಜನ ಪಡೆಯುವ ಆಸೆಯಿಂದ ಹಲವು ರೈತರು ಸುಸ್ಥಿದಾರರಾಗಿದ್ದಾರೆ. ಕೃಷಿ ಸಾಲದ ಜೊತೆಗೆ ವಾಹನ ಸಾಲ, ಮನೆ ಸಾಲವೂ ಮನ್ನಾ ಆಗಲಿದೆ ಎಂಬ ನಂಬಿಕೆಯಿಂದ ಅನೇಕರು ಮರುಪಾವತಿಸುವ ಗೋಜಿಗೆ ಹೋಗಿಲ್ಲ. ತಪ್ಪು ಅರಿವಾದ ಬಳಿಕ ಸಾಲ ಮರುಪಾವತಿಸಿದ್ದಾರೆ. ಆದರೆ, ಅವರ ಸಿಬಿಲ್‌ ಸ್ಕೋರ್‌ ಗಣನೀಯವಾಗಿ ಕುಸಿದಿದ್ದು, ಹೊಸ ಸಾಲ ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

‘ರೈತರು ಹಲವು ಬ್ಯಾಂಕುಗಳಲ್ಲಿ ಏಕಕಾಲಕ್ಕೆ ಸಾಲ ಪಡೆಯುತ್ತಾರೆ. ಇದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸಿಬಿಲ್‌ ಪರಿಶೀಲಿಸುತ್ತೇವೆ. ಬೆಳೆ ನಷ್ಟ ಅನುಭವಿಸಿದ ಅಥವಾ ಬರ ಪರಿಸ್ಥಿತಿಯಿಂದ ಸಮಸ್ಯೆಗೆ ಸಿಲುಕಿದ ರೈತರಿಗೆ ಮಾನವೀಯತೆ ದೃಷ್ಟಿಯಿಂದ ಸಿಬಿಲ್‌ ಕಡ್ಡಾಯಗೊಳಿಸಿಲ್ಲ’ ಎನ್ನುತ್ತಾರೆ ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ನಿಂಗೇಗೌಡ.

***

"ಕೃಷಿ ಸಾಲಕ್ಕೆ ‘ಸಿಬಿಲ್‌’ ಮಾನದಂಡ ಕಡ್ಡಾಯಗೊಳಿಸಿದ್ದು ತಪ್ಪು. ಬೇಬಾಕಿ ಪ್ರಮಾಣ ಪತ್ರದ (ಎನ್‌ಡಿಸಿ) ಶುಲ್ಕಕ್ಕೂಶೇ 18ರಷ್ಟು ಜಿಎಸ್‌ಟಿ ವಿಧಿಸುತ್ತಿರುವುದು ಅಮಾನವೀಯ"


-ಈಚಘಟ್ಟ ಸಿದ್ಧವೀರಪ್ಪ, ರೈತ ಮುಖಂಡ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.