ADVERTISEMENT

ಕಳಪೆ ಬೀಜ: ವ್ಯಾಪಾರಿ ಪತ್ತೆಗೆ ರೈತ ಸಂಘ ಆಗ್ರಹ

ಕಳಪೆ ಈರುಳ್ಳಿ ಬೀಜ ಮಾರಾಟ

​ಪ್ರಜಾವಾಣಿ ವಾರ್ತೆ
Published 2 ಮೇ 2021, 5:23 IST
Last Updated 2 ಮೇ 2021, 5:23 IST
ಚಳ್ಳಕೆರೆ ರೈತ ಸಂಘದ ಕಚೇರಿಯಲ್ಲಿ ಶನಿವಾರ ರೈತ ಮುಖಂಡ ಕೆ.ಪಿ.ಭೂತಯ್ಯ ಅವರು ಈರುಳ್ಳಿ ಕಳಪೆ ಬೀಜದ ಪಾಕೀಟ್‌ ಪ್ರದರ್ಶಿಸಿದರು.
ಚಳ್ಳಕೆರೆ ರೈತ ಸಂಘದ ಕಚೇರಿಯಲ್ಲಿ ಶನಿವಾರ ರೈತ ಮುಖಂಡ ಕೆ.ಪಿ.ಭೂತಯ್ಯ ಅವರು ಈರುಳ್ಳಿ ಕಳಪೆ ಬೀಜದ ಪಾಕೀಟ್‌ ಪ್ರದರ್ಶಿಸಿದರು.   

ಚಳ್ಳಕೆರೆ: ‘ಕಾಳ ಸಂತೆಯಲ್ಲಿ ಕಳಪೆ ಈರುಳ್ಳಿ ಬೀಜವನ್ನು ಮಾರಾಟ ಮಾಡಿ ರೈತರನ್ನು ವಂಚಿಸಿದ ತಮಿಳುನಾಡು ಮೂಲದ ವ್ಯಾಪಾರಿಯನ್ನು ಪತ್ತೆ ಮಾಡಿ ಕೂಡಲೇ ಬಂಧಿಸಬೇಕು’ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಅವರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.

ಇಲ್ಲಿನ ರೈತ ಸಂಘದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬೆಳಗೆರೆ, ಸಾಣಿಕೆರೆ, ತೊರೆಬೀರನಹಳ್ಳಿ, ಕೊನಿಗರಹಳ್ಳಿ, ನಾರಾಯಣಪುರ, ಟಿ.ಎನ್.ಕೋಟೆ, ದೊಡ್ಡಚೆಲ್ಲೂರು, ದೊಡ್ಡಬೀರನಹಳ್ಳಿ ಮುಂತಾದ ಗ್ರಾಮ ಸೇರಿ ತಾಲ್ಲೂಕಿನಲ್ಲಿ 5–6 ಕ್ವಿಂಟಲ್ ಕಳಪೆ ಈರುಳ್ಳಿ ಬೀಜವನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇದುವರೆಗೆ ಬಿತ್ತನೆ ಮಾಡದೇ ಇರುವ ಕಳಪೆ ಈರುಳ್ಳಿ ಬೀಜವನ್ನು ಹಾಗೆಯೇ ಸಂಗ್ರಹಿಸಿಟ್ಟುಕೊಳ್ಳಬೇಕು. ಕಾಳ ಸಂತೆಯಲ್ಲಿ ಕಳಪೆ ಬೀಜ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಕೂಡಲೇ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ರೈತರಲ್ಲಿ ಮನವಿ ಮಾಡಿದರು.

ADVERTISEMENT

‘2019–20ನೇ ಸಾಲಿನ ಬಾರದೆ ಇರುವ ಬೆಳೆ ವಿಮೆ ಸಂಬಂಧವಾಗಿ ವಿಮಾ ಕಂಪನಿಯವರನ್ನು ಕೂಡಲೇ ಕರೆಯಿಸಿ ಕೃಷಿ–ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ರೈತರ ಸಮ್ಮುಖದಲ್ಲಿ ಚರ್ಚೆ ನಡೆಸಬೇಕು. ಇಲ್ದದಿದ್ದರೆ ಮುಂದಿನ ದಿನಗಳಲ್ಲಿ ಶಾಸಕರ ಭವನದ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ತಾಲ್ಲೂಕು ಅಧ್ಯಕ್ಷ ಕಾಪರಹಳ್ಳಿ ಹಂಪಣ್ಣ, ಉಪಾಧ್ಯಕ್ಷ ಆರ್.ರಾಜಣ್ಣ, ಮಂಜುನಾಥ್, ನಾಗರಾಜ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.