ADVERTISEMENT

ಶ್ರದ್ಧಾಭಕ್ತಿಗೆ ಸಾಕ್ಷಿಯಾದ ಹೋಳಿಗೆ ಅಮ್ಮ

ಕೋವಿಡ್ ಕಾರಣಕ್ಕೆ ಹಿಂದಿನ ವರ್ಷ ರದ್ದಾಗಿದ್ದ ಆಚರಣೆಗೆ ಪುನಃ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 5:16 IST
Last Updated 4 ಆಗಸ್ಟ್ 2021, 5:16 IST
ಚಿತ್ರದುರ್ಗದ ಕರುವಿನಕಟ್ಟೆ ವೃತ್ತದಲ್ಲಿ ಮಂಗಳವಾರ ನಡೆದ ಹೋಳಿಗೆ ಅಮ್ಮ ಹಬ್ಬದ ಅಂಗವಾಗಿ ಸಾವಿರಾರು ಹೋಳಿಗೆ ಎಡೆಗಳನ್ನು ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಗೆ ಭಕ್ತರು ಸಮರ್ಪಿಸಿರುವುದು (ಎಡಚಿತ್ರ). ಶಕ್ತಿದೇವತೆ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಗೆ ಪುಷ್ಪಗಳಿಂದ ಅಲಂಕರಿಸಿರುವುದು
ಚಿತ್ರದುರ್ಗದ ಕರುವಿನಕಟ್ಟೆ ವೃತ್ತದಲ್ಲಿ ಮಂಗಳವಾರ ನಡೆದ ಹೋಳಿಗೆ ಅಮ್ಮ ಹಬ್ಬದ ಅಂಗವಾಗಿ ಸಾವಿರಾರು ಹೋಳಿಗೆ ಎಡೆಗಳನ್ನು ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಗೆ ಭಕ್ತರು ಸಮರ್ಪಿಸಿರುವುದು (ಎಡಚಿತ್ರ). ಶಕ್ತಿದೇವತೆ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಗೆ ಪುಷ್ಪಗಳಿಂದ ಅಲಂಕರಿಸಿರುವುದು   

ಚಿತ್ರದುರ್ಗ: ಇಲ್ಲಿಯ ಕರುವಿನಕಟ್ಟೆ ವೃತ್ತದಲ್ಲಿ ಶತಮಾನಗಳಿಂದ ಆಚರಿಸುತ್ತ ಬಂದಿರುವ ‘ಹೋಳಿಗೆ ಅಮ್ಮ’ ಹಬ್ಬವೂ ಕೋವಿಡ್ ಕಾರಣಕ್ಕೆ ಹಿಂದಿನ ವರ್ಷ ರದ್ದಾಗಿತ್ತು. ಪ್ರಸಕ್ತ ವರ್ಷ ಆಚರಣೆಗೆ ಪುನಃ ಚಾಲನೆ ನೀಡಲಾಗಿದೆ. ಈ ಮೂಲಕ ಭಕ್ತರ ಶ್ರದ್ಧಾ–ಭಕ್ತಿಗೆ ಸಾಕ್ಷಿಯಾಯಿತು.

ಒಂದರ ಪಕ್ಕದಲ್ಲಿ ಮತ್ತೊಂದರಂತೆ ಸಾಲು ಸಾಲಾಗಿ ಎಡೆಯ ರೂಪದಲ್ಲಿ ಭಕ್ತರು ಹೋಳಿಗೆಗಳನ್ನು ಇಡುತ್ತಿದ್ದರು. ಮಂಗಳವಾರ ಬೆಳಿಗ್ಗೆ ಆರಂಭವಾದ ಈ ಪ್ರಕ್ರಿಯೆ ಸಂಜೆ ಆಗುತ್ತಿದ್ದಂತೆ ಇಡಿ ವೃತ್ತವನ್ನೇ ಆವರಿಸಿತು.

ಆಷಾಢ ಮಾಸದ ಯಾವುದಾದರೂ ಮಂಗಳವಾರ ಈ ಹಬ್ಬವನ್ನು ಜಿಲ್ಲೆಯ ವಿವಿಧೆಡೆ ಆಚರಿಸುವ ಪರಂಪರೆ ಇದೆ. ಆದರೆ, ಕೋಟೆನಗರಿಯ ಈ ಸ್ಥಳದಲ್ಲಿ ಮೂರು ಅಥವಾ ನಾಲ್ಕನೇ ಮಂಗಳವಾರ ಆಚರಿಸುತ್ತ ಬರಲಾಗಿದೆ. ಘಮಘಮಿಸುವ ಸಾವಿರಾರು ಹೋಳಿಗೆಯ ಎಡೆಗಳಿಂದಲೇ ವೃತ್ತ ಪೂರ್ತಿಯಾಗಿ ಆವೃತ್ತವಾಗುತ್ತದೆ. ಇದನ್ನು ಕಣ್ತುಂಬಿಕೊಳ್ಳಲಿಕ್ಕಾಗಿಯೇ ಅನೇಕರು ಬರುವುದು ಉಂಟು.

ADVERTISEMENT

ಇಲ್ಲಿರುವ ಶಕ್ತಿದೇವತೆಗಳನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುವ ಪರಂಪರೆ ಪಾಳೆಗಾರರ ಆಳ್ವಿಕೆಗಿಂತಲೂ ಮುಂಚಿನಿಂದಲೇ ನಡೆದುಕೊಂಡು ಬಂದಿದೆ. ಈ ಕಾರಣದಿಂದಾಗಿಯೇ ಅಕ್ಕ–ತಂಗಿಯರಾದ ನವದುರ್ಗೆ
ಯರನ್ನು ವಿಶೇಷವಾಗಿ ಪೂಜಿಸುವ ಸಂಪ್ರದಾಯವಿದೆ. ಅದರ ಒಂದು ಭಾಗವಾಗಿ ಈ ಆಚರಣೆ ರೂಢಿಯಲ್ಲಿದೆ.

ಹಬ್ಬದ ವಿಶೇಷವೇನು?: ಈ ಹಬ್ಬದಂದು ಮಹಿಳೆಯರು ಆಹಾರ ಸೇವಿಸದೇ, ಮನೆಯಲ್ಲಿ ಮಡಿಯಿಂದ ಸಿದ್ಧಪಡಿಸಿದ ಹೋಳಿಗೆಗಳನ್ನು ಮೊರದಲ್ಲಿ ತಂದು ವೃತ್ತದ ಮುಂಭಾಗದಲ್ಲಿ ಸಾಲಾಗಿ ಇಡುವ ಪದ್ಧತಿ ಇಂದಿಗೂ ಮುಂದುವರಿದುಕೊಂಡು ಬಂದಿದೆ.

ಹೋಳಿಗೆಗಳ ಜೊತೆ ಅರಿಸಿಣ, ಕುಂಕುಮ, ಬಳೆ, ಬೇವಿನ ಸೊಪ್ಪು, ತೆಂಗಿನಕಾಯಿ ಹೋಳು ಇರುತ್ತದೆ. ಪೂಜಿಸಿದ ಮೊರಗಳನ್ನು ಶಕ್ತಿದೇವತೆಯ ಜೊತೆಗೆ ಕರೆದೊಯ್ದು ಊರಿನ ಗಡಿ ದಾಟಿಸುತ್ತಾರೆ. ಮುಂದಿನ ಗ್ರಾಮದವರು ಇದೇ ರೀತಿ ಆಚರಣೆ ನಡೆಸುತ್ತಾರೆ.

ಹಬ್ಬಕ್ಕೆ ಜಾತಿ ಭೇದವಿಲ್ಲ: ಹೋಳಿಗೆ ಅಮ್ಮನ ಆಚರಣೆ ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಲ್ಲ. ಹೋಳಿಗೆ ಎಲ್ಲರ ಆಹಾರ ಆಗಿರುವುದರಿಂದ ಹಿಂದೂ ಧರ್ಮೀಯರೇ ಹೆಚ್ಚಾಗಿ ಆಚರಿಸುತ್ತ ಬಂದಿದ್ದಾರೆ. ದೇವಿಯರೂ ಸಾಂಕ್ರಾಮಿಕ ರೋಗಗಳಿಂದ ಊರು, ಕುಟುಂಬದವರನ್ನು ರಕ್ಷಿಸುತ್ತಾರೆ ಎಂಬ ನಂಬಿಕೆಯೊಂದಿಗೆ ಆಚರಿಸುತ್ತಿರುವ ಈ ಹಬ್ಬವೂ ಇಂದಿಗೂ ಪ್ರಚಲಿತದಲ್ಲಿದೆ.

ಕರುವಿನಕಟ್ಟೆ ವೃತ್ತ, ದೊಡ್ಡಗರಡಿ, ಸಣ್ಣಗರಡಿ, ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ಸುಣ್ಣದ ಗುಮ್ಮಿ, ಉಜ್ಜಿನಿಮಠದ ರಸ್ತೆ, ದೊಡ್ಡಪೇಟೆ, ಕಂಬಳಿ ಬೀದಿ, ಜಿಲ್ಲಾ ಕ್ರೀಡಾಂಗಣ ರಸ್ತೆಯ ಭಕ್ತರು ಐತಿಹಾಸಿಕ ನಗರದೇವತೆ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವತೆಗೆ ಹೋಳಿಗೆ ಅಮ್ಮ ಹಬ್ಬದ ಹೆಸರಿನಲ್ಲಿ ಎಡೆ ಇಟ್ಟು ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿ ನಗರದ ವಿವಿಧ ಬಡಾವಣೆಗಳಲ್ಲಿನ ದೇವಿಯರ ಹೆಸರಿನಲ್ಲಿ ಆಯಾ ಭಾಗದವರು ಈ ಹಬ್ಬವನ್ನು ಆಚರಿಸುತ್ತಿದ್ದಾರೆ.

ಜಿಲ್ಲೆ ಬುಡಕಟ್ಟು ಸಂಸ್ಕೃತಿಯ ತವರು. ಪ್ರತಿಯೊಂದು ಹಬ್ಬ, ಆಚರಣೆಗೆ ಇಲ್ಲಿ ಅದರದೇ ಆದ ನಂಬಿಕೆ ಇದೆ. ಸಂಪ್ರದಾಯ ಹಾಗೂ ಸಂಸ್ಕೃತಿಯ ನೆಲೆಯಿದೆ. ಅದರಲ್ಲಿ ಹೋಳಿಗೆ ಅಮ್ಮ ಹಬ್ಬ ಕೂಡ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಅಮ್ಮನ ಹೆಸರಲ್ಲಿ ಹೋಳಿಗೆ ಮೀಸಲಿಡಲಾಗುತ್ತದೆ.

ಮಾಸ್ಕ್ ಮರೆತ ಭಕ್ತರು

ಆಚರಣೆಯ ಮುನ್ನಾ ದಿನವೇ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಭಕ್ತರು ಕರುವಿನಕಟ್ಟೆ ವೃತ್ತ ಹಾಗೂ ಮುಂಭಾಗದ ದೇಗುಲಕ್ಕೆ ಬರಬೇಕು ಎಂಬುದಾಗಿ ಸಮಿತಿ ಕಾರ್ಯಕರ್ತರು ಆಟೊ ಮೂಲಕ ವಿವಿಧ ಬಡಾವಣೆಗಳಲ್ಲಿ ವ್ಯಾಪಕ ಪ್ರಚಾರ ಮಾಡಿದ್ದರು. ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇರುವ ಕಾರಣ ಅರ್ಧಕ್ಕರ್ಧ ಭಕ್ತರು ಮಾಸ್ಕ್ ಧರಿಸದೇ ಬಂದಿದ್ದರು.

ಎಡೆ ಸಮರ್ಪಿಸಲು ಬಂದಿದ್ದ ಬಹುತೇಕರು ಅಂತರ ಕಾಯ್ದುಕೊಂಡರಾದರೂ ದೇವಿಯ ಮಂಗಳಾರತಿ ಪಡೆಯುವ ವೇಳೆ ಗುಂಪು ಸೇರಿದರು.

ಊರಿನ ಒಳಿತು, ಮಳೆಗಾಗಿ ಪ್ರಾರ್ಥನೆ

ಅಕ್ಕಿ, ಬೇಳೆ, ಬೆಲ್ಲ, ಹೆಸರು ಬೇಳೆ ದರ ಹೆಚ್ಚಿದ್ದರೂ ಭಕ್ತರು ಎಡೆ ಸಮರ್ಪಿಸುತ್ತಾರೆ. ಹೋಳಿಗೆ ಅಮ್ಮನ ಹಬ್ಬಕ್ಕೂ ಆಚರಿಸುವ ಭಕ್ತರಿಗೂ ಅವಿನಾಭಾವ ಸಂಬಂಧವಿದೆ. ಊರಿನ ಒಳಿತಿನ ಜತೆಗೆ ಉತ್ತಮ ಮಳೆಯಾಗಲಿ ಎಂದು ಕೂಡ ಇದೇ ಸಂದರ್ಭದಲ್ಲಿ ಅನೇಕ ಭಕ್ತರು ಪ್ರಾರ್ಥಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.