ಮೊಳಕಾಲ್ಮುರು: ತಾಲ್ಲೂಕಿನ ಬಿ.ಜಿ.ಕೆರೆಯ ಮುತ್ತಿಗಾರಹಳ್ಳಿ ರಸ್ತೆಯಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸಲು ಸಿಬ್ಬಂದಿ ಸಾಹಸ ಪಡಬೇಕಾಯಿತು.
ತೋಟವೊಂದರ ಬೇಲಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ನಿಧಾನವಾಗಿ ವ್ಯಾಪಿಸಿಕೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಮೊಳಕಾಲ್ಮುರು ಅಗ್ನಿಶಾಮಕ ಸಿಬ್ಬಂದಿ ತಂದಿದ್ದ ಮಿನಿ ವಾಹನದಲ್ಲಿದ್ದ ನೀರಿಮಿಂದ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಸಮೀಪದ ತೋಟಕ್ಕೆ ವಾಹನವನ್ನು ತೆಗೆದುಕೊಂಡು ಹೋಗಿ ನೀರು ತುಂಬಿಸಿಕೊಂಡು ಬಂದು ಸಿಂಪಡಣೆ ಮಾಡಿದರೂ ಬೆಂಕಿ ಆರಲಿಲ್ಲ.
ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಆಗ ಅಗ್ನಿಶಾಮಕ ಸಿಬ್ಬಂದಿ ಚಳ್ಳಕೆರೆ ಕಚೇರಿಗೆ ಕರೆ ಮಾಡಿ ವಾಹನ ತರಿಸಿಕೊಂಡು ಬೆಂಕಿ ಆರಿಸಿದರು.
ಇಲ್ಲಿನ ಅಗ್ನಿಶಾಮಕ ಕೇಂದ್ರದಲ್ಲಿ ದೊಡ್ಡ ವಾಹನವಿಲ್ಲದೇ ತೀವ್ರ ತೊಂದರೆಯಾಗಿರುವ ಬಗ್ಗೆ ಮಾದ್ಯಮಗಳಲ್ಲಿ ವರದಿಯಾಗಿದೆ. ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಲಾಗಿದೆ. ಇದೇ ಸ್ಥಿತಿ ಮುಂದುವರಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐ ತಾಲ್ಲೂಕು ಕಾರ್ಯದರ್ಶಿ ಜಾಫರ್ ಷರೀಫ್, ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರ್ಲಹಳ್ಳಿ ರವಿಕುಮಾರ್ ಎಚ್ಚರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.