ADVERTISEMENT

ಹಲವೆಡೆ ಅಂತರ; ಕೆಲವೆಡೆ ನೂಕುನುಗ್ಗಲು

ಏಪ್ರಿಲ್ ಅಂತ್ಯದೊಳಗೆ ಎರಡು ತಿಂಗಳ ಆಹಾರಧಾನ್ಯ ಪಡೆಯಲು ಅವಕಾಶ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 15:13 IST
Last Updated 5 ಏಪ್ರಿಲ್ 2020, 15:13 IST
ಚಿತ್ರದುರ್ಗದ ಕರುವಿನಕಟ್ಟೆ ವೃತ್ತ ಸಮೀಪದ ನ್ಯಾಯಬೆಲೆ ಅಂಗಡಿಯೊಂದರ ಮುಂಭಾಗ ಪಡಿತರ ಧಾನ್ಯಕ್ಕಾಗಿ ಸಾಮಾಜಿಕ ಅಂತರದೊಂದಿಗೆ ಕಾಯುತ್ತ ನಿಂತಿದ್ದ ಜನ
ಚಿತ್ರದುರ್ಗದ ಕರುವಿನಕಟ್ಟೆ ವೃತ್ತ ಸಮೀಪದ ನ್ಯಾಯಬೆಲೆ ಅಂಗಡಿಯೊಂದರ ಮುಂಭಾಗ ಪಡಿತರ ಧಾನ್ಯಕ್ಕಾಗಿ ಸಾಮಾಜಿಕ ಅಂತರದೊಂದಿಗೆ ಕಾಯುತ್ತ ನಿಂತಿದ್ದ ಜನ   

ಚಿತ್ರದುರ್ಗ: ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಆಹಾರಧಾನ್ಯ ಪಡೆಯಲು ಜನರು ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆದರೆ, ಕೆಲವೆಡೆ ಭಾನುವಾರ ನೂಕುನುಗ್ಗಲು ಉಂಟಾಗಿದ್ದು, ನಿಯಮ ಉಲ್ಲಂಘಿಸಿದ್ದಾರೆ.

ಲಾಕ್‌ಡೌನ್ ಜಾರಿಯಾದ ಕೆಲ ದಿನಗಳ ಕಾಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಆಹಾರಧಾನ್ಯ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆಹಾರದ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ನ್ಯಾಯಬೆಲೆ ಅಂಗಡಿಗಳನ್ನು ಮತ್ತೆ ತೆರೆಯಲಾಗಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲವರು ಸ್ಪಂದಿಸುತ್ತಿಲ್ಲ.

‘ನಗರ ಮತ್ತು ಪಟ್ಟಣಗಳಲ್ಲಿ ಪಡಿತರಕ್ಕಾಗಿ ಸಾಮಾಜಿಕ ಅಂತರದ ನಿಯಮ ಉಲ್ಲಂಘಿಸಿ ಸಾಮಗ್ರಿ ಪಡೆಯಲು ನೂಕುನುಗ್ಗಲು ಉಂಟಾವುದನ್ನು ತಡೆಯಬೇಕು. ಇದನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಆರ್. ವಿನೋತ್‌ ಪ್ರಿಯಾ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಏಪ್ರಿಲ್, ಮೇ ತಿಂಗಳ ಪಡಿತರ ವಿತರಣೆ:ಅರ್ಹ ಕುಟುಂಬಗಳಿಗೆ ಆಹಾರ ಧಾನ್ಯದ ಕೊರತೆ ಆಗಬಾರದು ಎಂಬ ಉದ್ದೇಶಕ್ಕಾಗಿ ಏಪ್ರಿಲ್ ಹಾಗೂ ಮೇ ತಿಂಗಳ ಪಡಿತರವನ್ನು ಏಕಕಾಲದಲ್ಲಿ ವಿತರಿಸಲಾಗುತ್ತಿದೆ.

‘ಪಡಿತರ ಚೀಟಿ ಇರುವವರಿಗೆ ಬಯೋಮೆಟ್ರಿಕ್ ಬದಲಾಗಿ ಮೊಬೈಲ್ ಒಟಿಪಿ ಮೂಲಕ ಆಹಾರಧಾನ್ಯ ವಿತರಿಸಲಾಗುತ್ತಿದೆ. ಪಡಿತರ ಹಂಚಿಕೆಯ ಪ್ರಮಾಣದಲ್ಲಿ ಏಪ್ರಿಲ್ ತಿಂಗಳಿನಿಂದ ಬದಲಾವಣೆ ಆಗಿದ್ದು, ಆದ್ಯತಾ ಕಾರ್ಡ್‍ನ ಪ್ರತಿ ಸದಸ್ಯರಿಗೆ ತಲಾ 5 ಕೆ. ಅಕ್ಕಿ ಮತ್ತು ಪ್ರತಿ ಕಾರ್ಡ್‌ಗೆ ತಲಾ 2 ಕೆ.ಜಿ ಗೋಧಿ ಉಚಿತವಾಗಿ ವಿತರಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.