ADVERTISEMENT

ನಕಲಿ ಬಂಗಾರ ನೀಡಿ ವಂಚಿಸುತ್ತಿದ್ದವರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 4:55 IST
Last Updated 17 ಜನವರಿ 2022, 4:55 IST
ಕೆ.ಸುರೇಶ್
ಕೆ.ಸುರೇಶ್   

ಚಿತ್ರದುರ್ಗ: ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ಮಾಚ್ಚಹಳ್ಳಿ ಕೊರಚರಹಟ್ಟಿಯ ಕೆ. ಸುರೇಶ್ (25), ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಚೆಲ್ಲಾಪುರ ಗ್ರಾಮದ ಕೇಶವಮೂರ್ತಿ (30) ಹಾಗೂ ಹರಪನಹಳ್ಳಿ ತಾಲ್ಲೂಕು ವಡೇರಹಳ್ಳಿ ಕೊರಚರಹಟ್ಟಿಯ ಶೇಖರಪ್ಪ (48) ಬಂಧಿತ ಆರೋಪಿಗಳು. ಇವರಿಂದ ಅರ್ಧ ಕೆ.ಜಿ ಯಷ್ಟು ನಕಲಿ ಬಂಗಾರದ ನಾಣ್ಯ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್‌ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ: ತಮ್ಮ ಜಮೀನಿನಲ್ಲಿ ಹೊಲ ಉಳುಮೆ ಮಾಡುವಾಗ ಬಂಗಾರದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಕಡಿಮೆ ಬೆಲೆಗೆ ಕೊಡುತ್ತೇವೆ ಎಂದು ಚಿತ್ರದುರ್ಗ ನಗರ ಹಾಗೂ ಹೊರವಲಯದಲ್ಲಿ ಸಾರ್ವಜನಿಕರನ್ನು ಈ ತಂಡ ನಂಬಿಸುತ್ತಿತ್ತು. ಬಳಿಕ ಒಂದು ಶುದ್ಧ ಬಂಗಾರದ ನಾಣ್ಯ ನೀಡಿ ನಂತರ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ಮೋಸ ಮಾಡುತ್ತಿದ್ದರು.

ADVERTISEMENT

ಇಲ್ಲಿಯ ಪಿಳ್ಲೇಕೆರೆನಹಳ್ಳಿ ಬಳಿಯ ಬಾಪೂಜಿ ಕಾಲೇಜು ಹಿಂಭಾಗ ಶನಿವಾರ ಬೆಳಿಗ್ಗೆ ಕಾರಿನಲ್ಲಿ ವ್ಯವಹರಿಸುತ್ತಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರ ಪತ್ತೆಗೆ ತನಿಖೆ ಮುಂದುವರಿದಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.