ADVERTISEMENT

ಗಣೇಶೋತ್ಸವ: ಜಿಲ್ಲೆಯಾದ್ಯಂತ ಸಂಭ್ರಮ

ಬಹುರೂಪಗಳಲ್ಲಿ ವಿಘ್ನೇಶ್ವರನ ಮೂರ್ತಿ ಪ್ರತಿಷ್ಠಾಪನೆ * ಎಲ್ಲೆಡೆ ಶ್ರದ್ಧಾ–ಭಕ್ತಿಯಿಂದ ಗಣಪನ ಆರಾಧನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 16:17 IST
Last Updated 11 ಸೆಪ್ಟೆಂಬರ್ 2021, 16:17 IST
ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಮೂರ್ತಿ
ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಮೂರ್ತಿ   

ಚಿತ್ರದುರ್ಗ: ಗಣೇಶೋತ್ಸವ ಆಚರಣೆ ಕೋವಿಡ್ ನಡುವೆಯೂ ಜಿಲ್ಲೆಯಾದ್ಯಂತ ಶುಕ್ರವಾರ ಸಂಭ್ರಮದ ಜತೆಗೆ ಶ್ರದ್ಧಾ–ಭಕ್ತಿಯಿಂದ ಜರುಗಿತು. ಏಕದಂತನ ಅನೇಕ ಭಕ್ತರು ಮನೆ, ದೇಗುಲ, ಮಂಟಪಗಳಲ್ಲಿ ಗಣಪ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಸಾವಿರಾರು ಭಕ್ತರು ಮನೆಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ್ದರು. ಮಡಿಯಿಂದ ಸಿದ್ಧಪಡಿಸಿದ್ದ ಅಡುಗೆಗಳನ್ನು ಎಡೆಯಾಗಿ ಸಮರ್ಪಿಸಿದರು. ಕುಟುಂಬ ಸಮೇತ ಪೂಜೆ ನೆರವೇರಿಸಿದರು. ರಾತ್ರಿ ಆಗುತ್ತಿದ್ದಂತೆ ಬಹುತೇಕರು ನಗರಸಭೆಯಿಂದ ವಿವಿಧೆಡೆ ಬಾವಿ ಆಕಾರದಲ್ಲಿ ನಿರ್ಮಿಸಿದ್ದ ಚಿಕ್ಕ ತೊಟ್ಟಿಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು.

ಜೋಗಿಮಟ್ಟಿ ರಸ್ತೆ, ಜಿಲ್ಲಾ ಕ್ರೀಡಾಂಗಣ ರಸ್ತೆ, ಚಿಕ್ಕಪೇಟೆ, ಕೋಟೆ ರಸ್ತೆ, ಬುರುಜನಹಟ್ಟಿ, ಜೆಸಿಆರ್, ಹೊಳಲ್ಕೆರೆ ರಸ್ತೆ, ಗಾರೇಹಟ್ಟಿ, ಮುನ್ಸಿಪಲ್ ಕಾಲೊನಿ, ಸರಸ್ವತಿ ಪುರ, ಐಯುಡಿಪಿ ಬಡಾವಣೆ ಹೀಗೆ ಅನೇಕ ಬಡಾವಣೆಗಳಲ್ಲಿ ಹಲವು ರೂಪಗಳಲ್ಲಿದ್ದ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ್ದರು.

ADVERTISEMENT

ಸರ್ಕಾರ ಗಣೇಶೋತ್ಸವ ಆಚರಿಸಲು ಐದು ದಿನ ಅನುಮತಿ ನೀಡಿರುವ ಕಾರಣ ನಗರದ ಹಲವೆಡೆ ಸಾರ್ವಜನಿಕ ಗಣೇಶ ಮೂರ್ತಿ ಕಂಡು ಬಂದವು. ಉತ್ಸವ ಸಮಿತಿಯವರಲ್ಲಿ ಹಿಂದಿನ ವರ್ಷ ಕಳೆಗುಂದಿದ್ದ ಉತ್ಸಾಹ ಮರುಕಳಿಸಿದೆ. ಪ್ರತಿಷ್ಠಾಪನೆ ವೇಳೆ ಅದ್ದೂರಿ ಅಲ್ಲದಿದ್ದರೂ ಎತ್ತಿನ ಗಾಡಿ, ಟ್ರ್ಯಾಕ್ಟರ್, ಆಪೆ ವಾಹನಗಳಲ್ಲಿ ಗಣೇಶನನ್ನು ಕೂರಿಸಿ ಸರಳವಾಗಿ ಮೆರವಣಿಗೆ ನಡೆಸಿದರು. 50ರಿಂದ 100 ಜನ ಪಾಲ್ಗೊಂಡಿದ್ದರು.

ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸುವ ಆಚರಣೆ ನಡೆಸದವರೂ ಹಣ್ಣು, ತರಕಾರಿ, ಪುಷ್ಪ, ವೀಳ್ಯದ ಎಲೆ, ಕಾಯಿಗಳಿಂದಲೂ ಗಣೇಶ ಮೂರ್ತಿಗಳನ್ನು ತಯಾರಿಸಿದ್ದರು. ಇನ್ನೂ ಕೆಲವರು ಮನೆಗಳಲ್ಲೇ ಇದ್ದಂಥ ಬೆಳ್ಳಿ, ಮರ, ಪಂಚಲೋಹದ ವಿಘ್ನೇಶ್ವರನ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಅರ್ಪಿಸಿ, ಹಬ್ಬ ಆಚರಿಸಿದರು.

ಬೆಟ್ಟದ ಗಣಪ: ಐತಿಹಾಸಿಕ ಕೋಟೆಯ ಮೇಲುದುರ್ಗದಲ್ಲಿ ಇರುವ ಬೆಟ್ಟದ ಗಣಪತಿಯೂ ಇಷ್ಟಾರ್ಥ ಸಿದ್ಧಿ ವಿನಾಯಕ ಎಂಬುದಾಗಿ ಖ್ಯಾತಿ ಗಳಿಸಿದ್ದಾನೆ. ಮನಸ್ಸಿನಲ್ಲಿ ಅಂದುಕೊಂಡ ಕಾರ್ಯ ಸಿದ್ಧಿಯಾದರೆ, ಗಣಪತಿ ಹಬ್ಬದಂದು ಭಕ್ತರು ಸಿಹಿ ಕಡುಬಿನ ಹಾರವನ್ನು ಭಕ್ತಿಯಿಂದ ಸಮರ್ಪಿಸುತ್ತಾರೆ. ಪ್ರತಿ ವರ್ಷದ ಸಂಪ್ರದಾಯ ಈ ಬಾರಿಯೂ ಮುಂದುವರಿಯಿತು.

ಹಲವು ದೇಗುಲಗಳಲ್ಲಿ ವಿಶೇಷ ಪೂಜೆ: ಪ್ರಸನ್ನ ಗಣಪತಿ, ಮದಕರಿ ಗಣಪತಿ, ಜೆಸಿಆರ್ ಬಡಾವಣೆ ಗಣಪತಿ, ಪಿ ಅಂಡ್ ಟಿ ಕ್ವಾಟ್ರರ್ಸ್‌ನ ಸಂಕಷ್ಟಹರ ಗಣಪತಿ ಹೀಗೆ ನಗರದ ವಿವಿಧ ಗಣೇಶ ದೇಗುಲಗಳಲ್ಲಿ ಗಣೇಶ ಚತುರ್ಥಿಯಂದು ವಿಶೇಷ ಪೂಜೆ, ಅಲಂಕಾರಗಳು ನೆರವೇರಿದವು. ನೂರಾರು ಭಕ್ತರು ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ಕಡುಬು, ಮೊದಕ ಸಮರ್ಪಣೆ: ಮೊದಕ ಪ್ರಿಯ, ವಿಘ್ನ ನಿವಾರಕ, ಏಕದಂತ, ಕರಿಮುಖ, ಮೂಷಿಕವಾಹನ ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಡುವ ವಿನಾಯಕನಿಗೆ ಕಡುಬು, ಉಂಡೆ, ವಿವಿಧ ರೀತಿಯ ಹಣ್ಣು ಹಂಪಲು, ಮೊದಕ ಹೀಗೆ ತರಹೇವಾರಿ ತಿಂಡಿ– ತಿನಿಸುಗಳನ್ನಿಟ್ಟು ಭಕ್ತರು ಸಂಭ್ರಮಿಸಿದರು.

ಆಕರ್ಷಿಸುತ್ತಿರುವ ಹಿಂದೂ ಮಹಾಗಣಪತಿ

ಗಣೇಶ ಚತುರ್ಥಿ ಅಂಗವಾಗಿ ಜೈನಧಾಮದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಮೂರ್ತಿಗೆ ವಿಶೇಷ ಪೂಜೆಗಳು ನೆರವೇರಿದವು. ಸಾವಿರಾರು ಭಕ್ತರು ಗಣಪತಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ವೈಭವಯುತವಾದ ಮಂಟಪ ಹಾಗೂ ವಿದ್ಯುತ್ ದೀಪಾಲಂಕಾರ ಕೂಡ ಹಲವರನ್ನು ಆಕರ್ಷಿಸಿತು. ಹಿಂದೂ ಮಹಾಗಣಪತಿ ಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚಾಗಿ ಶೇರ್ ಆಯಿತು.

ಗಣೇಶೋತ್ಸವದಲ್ಲಿ ಕೋವಿಡ್ ಲಸಿಕೆ

ಜೋಗಿಮಟ್ಟಿ ರಸ್ತೆಯಲ್ಲಿ ಏಕತಾ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಪ್ರತಿಷ್ಠಾಪಿಸಿರುವ ಏಕತಾ ಹಿಂದೂ ಮಹಾಗಣಪತಿಗೂ ಗಣೇಶೋತ್ಸವದ ಅಂಗವಾಗಿ ಪೂಜಾ ವಿಧಿ–ವಿಧಾನಗಳು ಜರುಗಿದವು. ಸಮಿತಿ ಮತ್ತು ಆರೋಗ್ಯ ಇಲಾಖೆ ಆಯೋಜಿಸಿದ್ದ ಲಸಿಕಾ ಕಾರ್ಯಕ್ರಮದಲ್ಲಿ ಮೊದಲ ದಿನ 101 ಜನರು ಲಸಿಕೆ ಪಡೆದರು. ಮೂರ್ತಿ ವಿಸರ್ಜನೆ ಆಗುವವರೆಗೂ ನಿತ್ಯ ಲಸಿಕಾ ಕಾರ್ಯಕ್ರಮ ಆಯೋಜಿಸಲು ಸಮಿತಿ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.