ADVERTISEMENT

ದೇವರ ವಿಚಾರ: ಎರಡು ಗುಂಪಿನ ನಡುವೆ ಘರ್ಷಣೆ

ಕ್ರಮಕ್ಕೆ ಆಗ್ರಹಿಸಿ ಕನಕಶ್ರೀ ಧರಣಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 13:32 IST
Last Updated 16 ನವೆಂಬರ್ 2018, 13:32 IST
ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿಯಲ್ಲಿ ಗುರುವಾರ ಈಶ್ವರಾನಂದಪುರಿ ಸ್ವಾಮೀಜಿ ಧರಣೆ ನಡೆಸಿದರು
ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿಯಲ್ಲಿ ಗುರುವಾರ ಈಶ್ವರಾನಂದಪುರಿ ಸ್ವಾಮೀಜಿ ಧರಣೆ ನಡೆಸಿದರು   

ಹೊಸದುರ್ಗ: ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮದ ಮುದ್ದುಲಿಂಗೇಶ್ವರ ದೇವರು ತಮಗೆ ಸೇರಿದ್ದು ಎಂಬ ವಿಷಯಕ್ಕೆ ಎರಡು ಗುಂಪಿನ ನಡುವೆ ಗುರುವಾರ ಘರ್ಷಣೆ ನಡೆದು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಸಹಳ್ಳಿ ಪಾಳ್ಯದ ಕುರುಬ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ, ತಮ್ಮ ಮನೆ ಗೃಹಪ್ರವೇಶಕ್ಕೆ ಮುದ್ದುಲಿಂಗೇಶ್ವರ ದೇವರನ್ನು ಪಲ್ಲಕ್ಕಿಯಲ್ಲಿ ಕರೆದುಕೊಂಡು ಹೊರಟಿದ್ದಾರೆ. ಈ ಸಂದರ್ಭದಲ್ಲಿ ನಾಯಕ ಸಮಾಜದವರು, ‘ಮುದ್ದುಲಿಂಗೇಶ್ವರ ದೇಗುಲದ ಆಡಳಿತದಲ್ಲಿ ನಮಗೂ ಅಧಿಕಾರವಿದೆ. ಆದರೆ, ನಮ್ಮನ್ನು ನಿರ್ಲಕ್ಷಿಸಿ ದೇವರನ್ನು ಗ್ರಾಮದ ಹೊರಗೆ ತೆಗೆದುಕೊಂಡು ಹೋಗುತ್ತಿರುವುದು ಸರಿಯಲ್ಲ’ ಎಂದು ಪ್ರಶ್ನಿಸಿದ್ದಾರೆ.

ಆಗ ಎರಡು ಕೋಮಿನ ನಡುವೆ ಮಾತಿನ ಚಕಮಕಿ ನಡೆದು ಜಗಳ ತಾರಕಕ್ಕೆ ಏರಿದೆ. ಆಗ ನಾಯಕ ಸಮುದಾಯದ ಒಂದು ಗುಂಪಿನವರು ದೇವರನ್ನು ಹೊತ್ತುಕೊಂಡು ಹೋಗುತ್ತಿದ್ದ ಗುಂಪಿನ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಹಲವರು ಗಾಯಗೊಂಡರು. ಗಾಯಗೊಂಡವರು ಹೊಸದುರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ADVERTISEMENT

ಗಲಾಟೆ ವಿಷಯ ತಿಳಿಯುತ್ತಿದ್ದಂತೆ ಕೆಲ್ಲೋಡು ಕಾಗಿನೆಲೆ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಸ್ಥಳಕ್ಕೆ ಬಂದು, ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಧರಣಿ ಕುಳಿತರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಧರಣಿ ನಡೆಸಲಾಗುವುದು ಎಂದು ಪಟ್ಟುಹಿಡಿದರು. ಆಗ ಭಕ್ತರು ಸ್ವಾಮೀಜಿ ಮನವೊಲಿಸಿದರು. ಗ್ರಾಮದಲ್ಲಿನ ಸಮಸ್ಯೆಗೆ ಎರಡು ಸಮುದಾಯದ ಮಠಾಧೀಶರು ಶಾಂತಿಸಭೆ ನಡೆಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಲಕ್ಕಿಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ. ಅರುಣ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.