ADVERTISEMENT

ಚಿತ್ರದುರ್ಗ | 145 ಅತಿಥಿ ಶಿಕ್ಷಕರ ಮಂಜೂರು

ಮೊಳಕಾಲ್ಮುರು ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯ ಭರವಸೆಯ ಸ್ಪರ್ಶ

ಕೊಂಡ್ಲಹಳ್ಳಿ ಜಯಪ್ರಕಾಶ
Published 15 ಮೇ 2022, 4:16 IST
Last Updated 15 ಮೇ 2022, 4:16 IST
ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕುಂತಿ ಸರ್ಕಾರಿ ಶಾಲೆ ಸಿಬ್ಬಂದಿ ಶನಿವಾರ ಶಾಲೆ ಆರಂಭೋತ್ಸವದ ಪ್ರಚಾರಕ್ಕೆ ಚಾಲನೆ ನೀಡಿದರು.
ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕುಂತಿ ಸರ್ಕಾರಿ ಶಾಲೆ ಸಿಬ್ಬಂದಿ ಶನಿವಾರ ಶಾಲೆ ಆರಂಭೋತ್ಸವದ ಪ್ರಚಾರಕ್ಕೆ ಚಾಲನೆ ನೀಡಿದರು.   

ಮೊಳಕಾಲ್ಮುರು: ತಾಲ್ಲೂಕಿನಾದ್ಯಂತ 2022–23ನೇ ಸಾಲಿನ ಶೈಕ್ಷಣಿಕ ಅವಧಿಗೆ ಮೇ 16ರಿಂದ ಸರ್ಕಾರಿ ಶಾಲೆಗಳು ಆರಂಭವಾಗುತ್ತಿದ್ದು, ಪೂರಕ ಸಿದ್ಧತೆಗಳು ಭರದಿಂದಸಾಗಿವೆ.

ತಾಲ್ಲೂಕಿನಲ್ಲಿ 149 ಸರ್ಕಾರಿ ಶಾಲೆಗಳಿದ್ದು, 165 ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಈ ಶೈಕ್ಷಣಿಕ ವರ್ಷಕ್ಕೆ 145 ಅತಿಥಿ ಶಿಕ್ಷಕರನ್ನು ಮಂಜೂರು ಮಾಡಿದ್ದು, ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಶಿಕ್ಷಣ ಇಲಾಖೆ ಪೂರಕ ಕ್ರಮ ಕೈಗೊಂಡಿದೆ.

ಹತ್ತಾರು ವರ್ಷಗಳಿಂದ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಶೇ 30ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಮಾಡಿಕೊಳ್ಳಲಾಗುತ್ತಿದೆ.

ADVERTISEMENT

ಅತಿಥಿ ಶಿಕ್ಷಕರನ್ನು ಸರ್ಕಾರ ಪ್ರತಿ ವರ್ಷ ಅಕ್ಟೋಬರ್, ನವೆಂಬರ್‌ನ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಅಷ್ಟೊತ್ತಿಗೆಸಾಕಷ್ಟು ಪಠ್ಯಕ್ರಮ ಪೂರ್ಣವಾಗಿರುತ್ತಿತ್ತು. ದೇವಸಮುದ್ರ ಹೋಬಳಿಯಲ್ಲಿ ಈ ಹೆಚ್ಚು ಸಮಸ್ಯೆ ಕಂಡುಬರುತ್ತಿತ್ತು. ಹೀಗಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರು.

ಈ ಶೈಕ್ಷಣಿಕ ವರ್ಷಕ್ಕೆ 145 ಅತಿಥಿ ಶಿಕ್ಷಕರನ್ನು ಮಂಜೂರು ಮಾಡಿದ್ದು,ಅವರ ಸೇವೆ ಮೇ 16ರಿಂದ ಲಭ್ಯವಾಗಲಿದೆ. ಪ್ರತಿ ವರ್ಷ ಶಾಲೆ ಆರಂಭವಾದರೆ ಸಾಕು ಯಾವ ಶಾಲೆಗೆ ಶಿಕ್ಷಕರ ಬೇಡಿಕೆಗಾಗಿ ಬೀಗ ಹಾಕುತ್ತಾರೋ ಎಂಬ ಆತಂಕದಲ್ಲಿ ಅಧಿಕಾರಿಗಳು ಆರಂಭೋತ್ಸವ ಮಾಡುತ್ತಿದ್ದರು. ಈ ವರ್ಷ ಈ ಆತಂಕ ಬಹುತೇಕ ಎದುರಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಎರಡು ವರ್ಷಗಳಿಂದ ಕೋವಿಡ್ ಕಾರಣ ಆಗಿರುವ ಕಲಿಕಾ ನಷ್ಟವನ್ನು ತುಂಬಲು ಸರ್ಕಾರ ಹೊಸದಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮ ಜಾರಿಗೆ ತಂದಿದೆ.ಒಂದು ವರ್ಷ ಪೂರ್ಣ ಇದು ಜಾರಿಯಲ್ಲಿ ಇರುತ್ತದೆ. ಈ ಬಗ್ಗೆ 392 ಶಿಕ್ಷಕರ ಪೈಕಿ 355 ಜನರಿಗೆ ತಾಲ್ಲೂಕು ಹಂತದಲ್ಲಿ ಉಳಿದವರಿಗೆ ಜಿಲ್ಲಾ ಹಂತದಲ್ಲಿವಿಶೇಷ ತರಬೇತಿ ನೀಡಲಾಗಿದೆ. ಬರಲಿರುವ ಅತಿಥಿ ಶಿಕ್ಷಕರಿಗೆ ಚೇತರಿಕೆ ಕಾರ್ಯಕ್ರಮದ ತರಬೇತಿ ಕೊಡಿಸಲಾಗುವುದುಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶಪ್ಪ ಮಾಹಿತಿ ನೀಡಿದರು.

ಶಾಲೆ ಆರಂಭೋತ್ಸವ ಹಬ್ಬದ ರೀತಿ ಮಾಡಲು ಮತ್ತು ಪ್ರಥಮ ದಿನದಿಂದಲೇ ಪಠ್ಯಕ್ರಮ ಆರಂಭಿಸಲು ಸೂಚಿಸಲಾಗಿದೆ. ತಾಲ್ಲೂಕಿನಲ್ಲಿ 4ಮಿಂಚಿನ ತಂಡವನ್ನು ರಚಿಸಲಾಗಿದ್ದು. ಅರಂಭೋತ್ಸವ ಹಾಗೂ ನಂತರದ ಆಗು–ಹೋಗುಗಳನ್ನು ವೀಕ್ಷಿಸಲು ಸಮಿತಿ ರಚಿಸಲಾಗಿದೆ. ಆವರಣ ಸ್ವಚ್ಛತೆ.ಕೊಠಡಿಗಳಿಗೆ ಸುಣ್ಣ, ಬಣ್ಣ, ಬಿಸಿಯೂಟ ಕೊಠಡಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶೇ 45ರಷ್ಟು ಪಠ್ಯಪುಸ್ತಕ ಸರಬರಾಜಾಗಿದೆ ಎಂದು ಅವರು ತಿಳಿಸಿದರು.

ಪ್ರತಿ ಶಾಲೆ ಬಳಿ ಲಭ್ಯವಿರುವ ಸೌಲಭ್ಯಗಳ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿಸಲಾಗುತ್ತಿದೆ. ಆಂಗನವಾಡಿ ಮಾಹಿತಿಆಧರಿಸಿ ಮನೆ ಭೇಟಿ ಸೇರ್ಪಡೆಗೆ ಕ್ರಮ ವಹಿಸಲಾಗಿದೆ. ಕಳೆದ ವರ್ಷದವರೆಗೆ 1ರಿಂದ 10ನೇ ತರಗತಿವರೆಗೆ ಶಾಲೆಗಳಲ್ಲಿ 20,225ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಗಿದೆ ಎಂದು ಸಮನ್ವಯ ಅಧಿಕಾರಿ ಎಂ.ಹನುಮಂತಪ್ಪ ತಿಳಿಸಿದರು.

*

ಕೋವಿಡ್‌ನಿಂದಾಗಿ ಆಗಿರುವ ಶೈಕ್ಞಣಿಕ ನಷ್ಟ ತುಂಬಿಸಲು ಸರ್ಕಾರ ಈ ವರ್ಷ ವಿಶೇಷ ಒತ್ತು ನೀಡಿದೆ. ಪೋಷಕರು ಇದಕ್ಕೆ ಸಹಕಾರ ನೀಡಬೇಕು. ಸರ್ಕಾರಿಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ನೀಡುವ ವಿಶ್ವಾಸ ವೃದ್ಧಿಸಲಾಗುವುದು.
-ಸಿ.ಎಸ್. ವೆಂಕಟೇಶಪ್ಪ, ಬಿಇಒ

*

ಶಾಲೆಗಳಲ್ಲಿ ಬುಕ್ ಬ್ಯಾಂಕ್ ತೆರೆಯಲಾಗಿದ್ದು, ಕಳೆದ ವರ್ಷದ ವಿದ್ಯಾರ್ಥಿಗಳ ಪಠ್ಯಪುಸ್ತಕ ಸಂಗ್ರಹಿಸಲಾಗಿದೆ. ಹೊಸ ಪುಸ್ತಕ ಬರುವ ತನಕ ಇವುಗಳನ್ನು ಬಳಸಿಕೊಳ್ಳಲಾಗುವುದು.
-ಎಂ.ಹನುಮಂತಪ್ಪ, ಬಿಆರ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.