ADVERTISEMENT

ನಾಯಕನಹಟ್ಟಿ: ಮಾ.10ಕ್ಕೆ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ

ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 7:18 IST
Last Updated 5 ಫೆಬ್ರುವರಿ 2023, 7:18 IST
ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಸಚಿವ ಬಿ.ಶ್ರೀರಾಮುಲು ಮಾತನಾಡಿದರು.
ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಸಚಿವ ಬಿ.ಶ್ರೀರಾಮುಲು ಮಾತನಾಡಿದರು.   

ನಾಯಕನಹಟ್ಟಿ: ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ಜಾತ್ರೆ ಮಾರ್ಚ್ 10ರಂದು ನಡೆಯಲಿದ್ದು, ಅದ್ಧೂರಿಯಾಗಿ ಜಾತ್ರೆ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಚಿವ ಶ್ರೀರಾಮುಲು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ವಾರ್ಷಿಕ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಾತ್ರೆಗೆ ರಾಜ್ಯ ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಬರುತ್ತಾರೆ. ಭಕ್ತರಿಗೆ ಯಾವುದೇ ಕುಂದುಕೊರತೆಗಳು ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಸರಬರಾಜು, ಸ್ವಚ್ಛತೆ, ಬೀದಿದೀಪ, ನೈರ್ಮಲ್ಯ, ಸಂಚಾರ ವ್ಯವಸ್ಥೆ, ಆರೋಗ್ಯ ರಕ್ಷಣೆ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಅಂಗಡಿಗಳಿಗೆ ಪಟ್ಟಣ ಪಂಚಾಯಿತಿ ಜಕಾತಿ ಶುಲ್ಕ ವಿಧಿಸಬಾರದು ಎಂದರು.

ADVERTISEMENT

ಬೆಸ್ಕಾಂ ಅಧಿಕಾರಿಗಳು ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಅದಕ್ಕಾಗಿ 10 ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ಕಾಯ್ದಿರಿಸಿಕೊಳ್ಳಬೇಕು. ಪಟ್ಟಣದಿಂದ 2 ಕಿ.ಮೀ.ದೂರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವ ಬದಲು ಗ್ರಾಮಕ್ಕೆ ಹತ್ತಿರದಲ್ಲಿ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

‘ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿ, ಬೀದಿದೀಪ, ಸ್ವಚ್ಛತೆ ಸೇರಿದಂತೆ ಸಂಬಂಧಿಸಿ ಇಲಾಖೆಗಳು ಸಿದ್ಧತೆ ನಡೆಸಬೇಕು. ಮೂರು ದಿನಗಳಿಗೊಮ್ಮೆ ಬಂದು ಪರಿಶೀಲಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಜಿ.ಆರ್.ಜೆ ಹೇಳಿದರು.

ಪಟ್ಟಣಕ್ಕೆ ಹೊಂದಿಕೊಂಡಿರುವ ಖಾಸಗಿ ಜಮೀನುಗಳ ಮಾಲೀಕರು ಜಾತ್ರೆ ಪ್ರಯುಕ್ತ ವಾಹನಗಳ ನಿಲುಗಡೆಗೆ ತಾತ್ಕಾಲಿಕವಾಗಿ ಖಾಲಿ ಜಮೀನುಗಳನ್ನು ಬಿಟ್ಟು ಸಹಕರಿಸಬೇಕು. 7 ಕಡೆ ಚೆಕ್‌ಪೋಸ್ಟ್, 30 ಕಡೆ ಸಿಸಿಟಿವಿ ಕ್ಯಾಮೆರಾ, 7 ಗಸ್ತು ಕಂಬಗಳು, 22 ಸಹಾಯವಾಣಿಗಳು, 100 ಜನ ಅಪರಾಧಿ ತಡೆಸಿಬ್ಬಂದಿ, 2,550 ವಿವಿಧ ಹಂತದ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ವಿವರಿಸಿದರು.

ಕುಡಿಯುವ ನೀರಿಗೆ ವಿಶೇಷ ಆದ್ಯತೆ: ಕುಡಿಯುವ ನೀರಿಗೆ 30ರಿಂದ 40 ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು. ನೀರು ಪೂರೈಕೆ ಮತ್ತು ಮೇಲ್ವಿಚಾರಣೆಗಾಗಿ ಐವರು ‌ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಾರಿಗೆ ವ್ಯವಸ್ಥೆ: ದಾವಣಗೆರೆ, ಚಿತ್ರದುರ್ಗ ರಾಜ್ಯ ರಸ್ತೆ ಸಾರಿಗೆ ವಿಭಾಗದಿಂದ ಬಸ್‌ಗಳನ್ನು ನಿಯೋಜಿಸಲಾವುದು. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ಬೆಂಗಳೂರಿನಿಂದ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದರು‌.

‘ಚಳ್ಳಕೆರೆ ರಸ್ತೆಯಲ್ಲಿ ಪಾಳುಬಿದ್ದಿರುವ ಸೇತುವೆಯನ್ನು ದುರಸ್ತಿಗೊಳಿಸಬೇಕು, ಪಟ್ಟಣ ಸಂಪರ್ಕಿಸುವ ಎಲ್ಲ ರಸ್ತೆಗಳ ಪಕ್ಕದ ಗಿಡಗಳನ್ನು ತೆರವು ಮಾಡಿ, ಗುಂಡಿಗಳನ್ನು ಮುಚ್ಚಿಸಬೇಕು’ ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ಸೈಯದ್‌ ಅನ್ವರ್, ಜೆ.ಆರ್.ರವಿಕುಮಾರ್, ಗ್ರಾಮಸ್ಥರಾದ ತಿಪ್ಪೇರುದ್ರಪ್ಪ, ಪಾಲಾಕ್ಷಪ್ಪ, ಆರ್.ತಿಪ್ಪೇಸ್ವಾಮಿ, ಆರ್.ಶ್ರೀಕಾಂತ್, ಎನ್.ಮಾರುತಿ ಆಗ್ರಹಿಸಿದರು.

ಮುಕ್ತಿ ಬಾವುಟ ಹಾರಾಜಿಗೆ ಮಾರ್ಗಸೂಚಿ: ರಥೋತ್ಸವದಲ್ಲಿ ಮುಕ್ತಿಬಾವುಟ ಹರಾಜು ಪ್ರಕ್ರಿಯೆ ನಡೆಯಲಿದೆ. ಕೆಲವು ವರ್ಷಗಳಿಂದ ಮುಕ್ತಿ ಬಾವುಟ ಪಡೆದ ವ್ಯಕ್ತಿಗಳು ದೇವಾಲಯಕ್ಕೆ ಹಣ ಪಾವತಿಸಿಲ್ಲ. ಮುಕ್ತಿಬಾವುಟ ಪಡೆದವ
ರಿಂದ ಹಣ ವಸೂಲಿ ಮಾಡಬೇಕು ಎಂದು ಸದಸ್ಯ ತಿಪ್ಪೇಶ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಹಣ ಪಾವತಿ ಮಾಡದವರಿಗೆ ನೋಟಿಸ್ ನೀಡಲಾಗುವುದು. ಹರಾಜಿನ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗುವುದು’ ಎಂದರು.

ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್, ತಹಶೀಲ್ದಾರ್ ರೆಹಾನ್‌ಪಾಷ, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ, ಮುಖ್ಯಾಧಿಕಾರಿ ಟಿ.ಲೀಲಾವತಿ, ಬೆಸ್ಕಾಂ ಅಧಿಕಾರಿಗಳಾದ ಮುರುಗೇಶ್, ಡಿ.ಎಸ್.ಪ್ರಸನ್ನಕುಮಾರ್, ವೆಂಕಟೇಶ್, ಎನ್.ಬಿ.ಬೋರಣ್ಣ, ದೇವಾಲಯ ಸಮಿತಿ ಮಾಜಿ ಅಧ್ಯಕ್ಷರಾದ ಜಿ.ಎಸ್.ಪ್ರಭುಸ್ವಾಮಿ, ಎಂ.ವೈ.ಟಿ.ಸ್ವಾಮಿ, ಜೆ.ಪಿ.ರವಿಶಂಕರ್, ಮುಖಂಡ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಜೆ.ಆರ್.ರವಿಕುಮಾರ್, ಫಾಲಾಕ್ಷ, ಟಿ.ಬಸಣ್ಣ, ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು, ಜನರು ಇದ್ದರು.

ತಡವಾಗಿ ಬಂದ ಶ್ರೀರಾಮುಲು

ಜಾತ್ರೆ ಪೂರ್ವಭಾವಿ ಸಭೆಯು ಮಧ್ಯಾಹ್ನ 3ಕ್ಕೆ ನಿಗದಿಯಾಗಿತ್ತು. ಆದರೆ ಸಚಿವ ಬಿ.ಶ್ರೀರಾಮುಲು, 5.30ಕ್ಕೆ ಸಭೆಗೆ ಬಂದರು. ಇದಕ್ಕೂ ಮೊದಲು 4.30ಕ್ಕೆ ಸಭೆ ಆರಂಭಿಸಿದ ಜಿಲ್ಲಾಧಿಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಆಗ ಗ್ರಾಮಸ್ಥ ಫಾಲಾಕ್ಷಪ್ಪ, ‘ಸಭೆಯನ್ನು ದೀಪ ಬೆಳಗಿಸದೆ ಆರಂಭಿಸಬೇಡಿ, ಸಂಪ್ರದಾಯವನ್ನು ಮುರಿಯಬೇಡಿ, ಸಚಿವರು ಬರುವವರೆಗೂ ಕಾಯದೇ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಆರಂಭಿಸಿ’ ಎಂದು ಪಟ್ಟುಹಿಡಿದರು.

ಆದರೆ 5.30ಕ್ಕೆ ಬಂದ ಶ್ರೀರಾಮುಲು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಮೊದಲಿನಿಂದ ಆರಂಭಿಸಿದರು. ಇದರಿಂದ ಎರಡೆರಡು ಬಾರಿ ಅಧಿಕಾರಿಗಳು ಉತ್ತರ ನೀಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.