ADVERTISEMENT

ಆಸ್ಪತ್ರೆಗಳಲ್ಲಿ ಆರೋಗ್ಯ ಸಚಿವರ ವಾಸ್ತವ್ಯ

ನೆಲದ ಮೇಲೆ ಕುಳಿತು ಅಹವಾಲು ಆಲಿಸಿದ ಬಿ.ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 12:43 IST
Last Updated 11 ಸೆಪ್ಟೆಂಬರ್ 2019, 12:43 IST
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ನೆಲದ ಮೇಲೆ ಕುಳಿತು ರೋಗಿಗಳ ಅಹವಾಲು ಆಲಿಸಿದರು.
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ನೆಲದ ಮೇಲೆ ಕುಳಿತು ರೋಗಿಗಳ ಅಹವಾಲು ಆಲಿಸಿದರು.   

ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು, ನೆಲದ ಮೇಲೆ ಕುಳಿತು ರೋಗಿಗಳ ಅಹವಾಲು ಆಲಿಸಿದರು.

ಹೆರಿಗೆ, ಮಕ್ಕಳ ವಾರ್ಡ್‌, ತುರ್ತು ನಿಗಾ ಘಟಕ, ಪ್ರಯೋಗಾಲಯ ವೀಕ್ಷಿಸಿ ಹೊರಡಲು ಅಣಿಯಾದ ಸಚಿವರನ್ನು ರೋಗಿಗಳು ತಡೆದು ಕಷ್ಟಗಳನ್ನು ತೋಡಿಕೊಳ್ಳಲು ಮುಂದಾದರು. ಆಸ್ಪತ್ರೆಯ ಹೊರ ಆವರಣದಲ್ಲಿ ಕಾರು ನಿಂತಿದ್ದ ಸ್ಥಳದಲ್ಲೇ ಕುಳಿತ ಸಚಿವರು, ರೋಗಿಗಳೊಂದಿಗೆ ಮಾತನಾಡತೊಡಗಿದರು. ಜಿಲ್ಲಾ ಆರೋಗ್ಯಾಧಿಕಾರಿ ಸೇರಿ ಎಲ್ಲ ವೈದ್ಯರು ನೆಲದ ಮೇಲೆ ಆಸೀನರಾದರು.

‘ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡಲು ತೀರ್ಮಾನಿಸಿದ್ದೇನೆ. ಅನಿರೀಕ್ಷಿತವಾಗಿ ಆಸ್ಪತ್ರೆಗೆ ಭೇಟಿ ನೀಡಿ ರಾತ್ರಿ ತಂಗುತ್ತೇನೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡಲಿದ್ದೇನೆ. ಇದು ಹೊಸ ಬದಲಾವಣೆಗೆ ಮುನ್ನುಡಿ ಬರೆಯಲಿದೆ’ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ADVERTISEMENT

‘ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಪಡೆಯುವ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಖಾಸಗಿ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಉಂಟಾಗುತ್ತಿರುವ ತೊಂದರೆಯನ್ನು ಸರ್ಕಾರ ನಿವಾರಿಸಲಿದೆ’ ಎಂದು ಹೇಳಿದರು.

ಕಾನೂನು ಬದಲಾಯಿಸಲು ಸಾಧ್ಯವಿಲ್ಲ:ಕಾನೂನು ಎಲ್ಲರಿಗೂ ಒಂದೆ. ಅದು ಯಾರಿಗೂ ತಾರತಮ್ಯ ಮಾಡುವುದಿಲ್ಲ. ಡಿ.ಕೆ.ಶಿವಕುಮಾರ್‌ ಅವರಿಗಾಗಿ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

‘ಎಲ್ಲ ಪ್ರಧಾನಿಗಳ ಕಾಲದಲ್ಲೂ ಜಾರಿ ನಿರ್ದೇಶನಾಲಯ (ಇ.ಡಿ) ಹಲವರ ಮೇಲೆ ದಾಳಿ ಮಾಡಿದೆ. ಇತಿಹಾಸವನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಶಿವಕುಮಾರ್‌ ಹಿಂಬಾಲಕರು ನಡೆಸುತ್ತಿರುವ ಹೋರಾಟಕ್ಕೆ ವಿರೋಧವಿಲ್ಲ. ಆದರೆ, ಸರ್ಕಾರದ ಆಸ್ತಿಗೆ ನಷ್ಟವುಂಟು ಮಾಡುವುದು ತಪ್ಪು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.