ಹೃದಯಾಘಾತ
ಚಿತ್ರದುರ್ಗ: ಕಳೆದ 3 ತಿಂಗಳಲ್ಲಿ ಜಿಲ್ಲೆಯಾದ್ಯಂತ 47 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಂಬಾಕು ಸೇವನೆಯಿಂದ ಜಿಲ್ಲೆಯಲ್ಲಿ 50 ವರ್ಷದೊಳಗಿನ ಹೆಚ್ಚಿನವರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.
ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ಹೃದಯಾಘಾತದಿಂದ 31 ಪುರುಷರು ಸಾವನ್ನಪ್ಪಿದ್ದರೆ 16 ಮಹಿಳೆಯರು ಮೃತಪಟ್ಟಿದ್ದಾರೆ. ಜೂನ್ ತಿಂಗಳೊಂದರಲ್ಲೇ 23 ಮಂದಿ ಜೀವಕಳೆದುಕೊಂಡಿರುವುದು ಆತಂಕ ಸೃಷ್ಟಿಸಿದೆ. ಎದೆ ನೋವು ಸೇರಿ ಹೃದಯಸಂಬಂಧಿ ಸಮಸ್ಯೆಗಳಿಂದ 185 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 47 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲಾ ಆಸ್ಪತ್ರೆ ಸೇರಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಇಸಿಜಿ ಹೊರತುಪಡಿಸಿದರೆ ಇಕೊ, ಟಿಎಂಟಿ ಸೌಲಭ್ಯಗಳಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಹೃದ್ರೋಗ ತಜ್ಞರಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು ಇದ್ದರೂ ಸ್ನಾತಕೋತ್ತರ ಪದವಿ ತರಗತಿಗಳು ಆರಂಭಗೊಳ್ಳದ ಕಾರಣ ಕ್ಯಾತ್‌ಲ್ಯಾಬ್ ಸೌಲಭ್ಯ ಒದಗಿಸಿಲ್ಲ. ಹೃದ್ರೋಗ ಸಮಸ್ಯೆಗಳಿಗೆ ಜನರು ಬೆಂಗಳೂರು, ದಾವಣಗೆರೆ, ಶಿವಮೊಗ್ಗ ಆಸ್ಪತ್ರೆಗೆ ತೆರಳುವುದು ಸಾಮಾನ್ಯವಾಗಿದೆ.
ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು– ಆಸ್ಪತ್ರೆಯಲ್ಲಿರುವ ಇಂಡಿಯಾನ– ಎಸ್‌ಜೆಎಂ ಹಾರ್ಟ್ ಸೆಂಟರ್ ಜಿಲ್ಲೆಯ ಜನರಿಗೆ ಹೃದ್ರೋಗ ಚಿಕಿತ್ಸೆ ನೀಡುವ ಏಕೈಕ ಆಸ್ಪತ್ರೆಯಾಗಿದೆ. ಹೃದಯಾಘಾತ ಸಮಸ್ಯೆ ಹೆಚ್ಚಳವಾಗುತ್ತಿರುವ ಸುದ್ದಿ ಹರಡಿದ ನಂತರ ಇಲ್ಲಿ ಹೃದಯ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾನ್ಯ ದಿನಗಳಲ್ಲಿ 4–5 ಇದ್ದ ಟಿಎಂಟಿ ಪರೀಕ್ಷೆ ಈಗ 15–18ಕ್ಕೆ ಏರಿಕೆಯಾಗಿದೆ.
‘ಈಚೆಗೆ 15 ವರ್ಷದ ಬಾಲಕನಿಗೂ ಸ್ಟೆಂಟ್ ಅಳವಡಿಸಿದ್ದೇನೆ, ಇತಿಹಾಸ ಗಮನಿಸಿದಾಗ ಆತ ತಂಬಾಕಿಗೆ ದಾಸನಾಗಿದ್ದ. ಹೃದಯಾಘಾತ ಪ್ರಕರಣಗಳಲ್ಲಿ ಶೇ 50ರಷ್ಟು ಸಾವುಗಳು ತಂಬಾಕು ಸೇವನೆಯಿಂದಲೇ ಆಗಿರುವುದು ಗೊತ್ತಾಗಿದೆ. 50 ವರ್ಷದೊಳಗಿನ ಜನರಿಗೆ ಹೃದಯಾಘಾತವಾದಾಗ ಬದುಕುವುದು ತೀರಾ ಕಡಿಮೆ. ಸಮಸ್ಯೆ ಎದುರಿಸಲು ಸಿದ್ಧವಾಗಿರದ ಹೃದಯ ವಿದ್ಯುತ್ ಶಾಕ್‌ಗೆ ಒಳಗಾದಂತೆ ಏಕಾಏಕಿ ಸ್ತಂಭನಗೊಳ್ಳುತ್ತಿದೆ’ ಎಂದು ಹೃದ್ರೋಗ ತಜ್ಞ ಡಾ.ಆರ್.ಎಸ್.ಕಾರ್ತಿಕ್ ತಿಳಿಸಿದರು.
ರೈತರಲ್ಲೂ ಹೃದಯಾಘಾತ ಹೆಚ್ಚಳ ‘ಸದಾ ಕೃಷಿಭೂಮಿಯಲ್ಲಿ ಕೆಲಸ ಮಾಡಿ ದೈಹಿಕ ಚಟುವಟಿಕೆಯಲ್ಲಿರುವ ರೈತರಿಗೆ ಹೃದಯಾಘಾತ ಆಗುವುದಿಲ್ಲ ಎಂಬ ಭಾವನೆ ಸಮುದಾಯದಲ್ಲಿತ್ತು. ಆದರೆ ಈಚೆಗೆ ಹೆಚ್ಚಿನ ರೈತರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅಧಿಕ ರಕ್ತದೊತ್ತಡ ಮಧುಮೇಹದಿಂದಲೂ ಬಳಲುತ್ತಿದ್ದಾರೆ’ ಎಂದು ಮಧುಮೇಹ ತಜ್ಞ ಡಾ.ಕೆ.ಮಂಜುನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.