ಹಿರಿಯೂರು: ಅಗತ್ಯ ಸೌಲಭ್ಯಗಳನ್ನು ನೀಡದೇ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳು ತಾಲ್ಲೂಕು ಕಚೇರಿ ಮುಂದೆ ಗುರುವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯು ತಾಂತ್ರಿಕ ಹುದ್ದೆ ಆಗಿರದಿದ್ದರೂ ಸರ್ಕಾರದಿಂದ ಹಲವಾರು ವೆಬ್ ಅಪ್ಲಿಕೇಷನ್ ನಿರ್ವಹಿಸುವ ಒತ್ತಡವಿದೆ. ಸಿಬ್ಬಂದಿಗೆ ಮಾನಸಿಕ ಯಾತನೆ ಆಗುತ್ತಿದೆ. ಸಿಬ್ಬಂದಿಗೆ ಸುಸಜ್ಜಿತ ಕಚೇರಿ, ಪೀಠೋಪಕರಣ, ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್ ನೀಡದಿರುವುದು ಬೇಸರದ ಸಂಗತಿ. ಗ್ರಾಮ ಆಡಳಿತ ಅಧಿಕಾರಿ ಹುದ್ದೆಯಲ್ಲಿರುವವರಿಗೆ ತಾಂತ್ರಿಕ ಹುದ್ದೆಗಳಿಗೆ ನೀಡುತ್ತಿರುವ ಸಮಾನ ವೇತನ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರಬಾರದು, ಕೆಲಸದ ಅವಧಿ ಮುಗಿದ ನಂತರ ನಡೆಸುವ ಎಲ್ಲಾ ವರ್ಚ್ಯುವಲ್ ಸಭೆಗಳನ್ನು ನಿಷೇಧಿಸಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ತಹಶೀಲ್ದಾರರಿಗೆ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಬಿ. ಗಂಗಾಧರ್, ಗೌರವಾಧ್ಯಕ್ಷ ವರದರಾಜು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.