ಹಿರಿಯೂರು: ‘ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಬೇಕಾದರೆ ಮೊದಲು ಗುರಿ ಹೊಂದಿರಬೇಕು. ಗುರಿ ತಲುಪಲು ಗುರುವಿನ ಮಾರ್ಗದರ್ಶನದ ಜೊತೆ ನಮ್ಮ ಪ್ರಾಮಾಣಿಕ ಪರಿಶ್ರಮ ಇರಬೇಕು’ ಎಂದು ನಿತ್ಯಾನಂದ ಆಶ್ರಮದ ಪೂರ್ಣಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಸ್ತೂರಿರಂಗಪ್ಪನಹಳ್ಳಿ ಗೇಟ್ ಸಮೀಪ ಇರುವ ನಿತ್ಯಾನಂದ ಆಶ್ರಮದಲ್ಲಿ ಗುರುವಾರ ನಿತ್ಯಾನಂದ ಸೇವಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಗುರು ದ್ರೋಣಾಚಾರ್ಯರನ್ನು ಮಾನಸ ಗುರುವನ್ನಾಗಿಸಿಕೊಂಡು ಏಕಲವ್ಯ ಅದ್ಭುತವಾದ ಬಿಲ್ವಿದ್ಯೆ ಕಲಿತದ್ದು ಇಂದಿನ ವಿದ್ಯಾರ್ಥಿಗಳಿಗೆ ನಿದರ್ಶನವಾಗಬೇಕು. ಸಂಸಾರ ಎಂಬ ಭವಸಾಗರವನ್ನು ದಾಟಿ ಮೋಕ್ಷದ ಕಡೆ ಸಾಗಲು ಗುರುವಿನ ಅಗತ್ಯ ಬೇಕೇಬೇಕು. ಹಿಡಿದ ಕೆಲಸವನ್ನು ಸಾಧಿಸುವ ಛಲ ಇರಬೇಕು. ಒಮ್ಮೆ ತೆಗೆದುಕೊಂಡ ತೀರ್ಮಾನದಿಂದ ಹಿಂದೆ ಸರಿಯದ ದೃಢ ಮನಸ್ಸು ಹೊಂದಿರಬೇಕು. ಇದರ ನಂತರ ದೈವ ಕೃಪೆ ಇರಲಿ ಎಂದು ಬೇಡಿಕೊಳ್ಳಬೇಕು. ಪ್ರಯತ್ನ ಇಲ್ಲದೆಯೇ ಫಲ ಕೊಡು ಎಂದರೆ ದೇವರೂ ಕೂಡ ನಮ್ಮ ಕೈಹಿಡಿಯುವುದಿಲ್ಲ’ ಎಂದು ಅವರು ಎಚ್ಚರಿಸಿದರು.
‘ಪ್ರತಿ ಮನುಷ್ಯನು ತನಗೆ ಮುಕ್ತಿ ಬೇಕೆಂದು ಬಯಸುತ್ತಾನೆ. ನಮ್ಮ ಬದುಕಿನಲ್ಲಿ ನಾವು ಮಾಡುವ ಸತ್ಕಾರ್ಯಗಳು ನಮ್ಮನ್ನು ಮುಕ್ತಿಯ ಕಡೆಗೆ ಒಯ್ಯುತ್ತವೆ. ಯಾವುದು ಸತ್ಕಾರ್ಯ ಎನ್ನುವುದನ್ನು ಗುರುಗಳ ಮೂಲಕ ಅರಿಯಬೇಕು. ಗುರುಗಳು ನಮ್ಮ ಬದುಕಿನ ಪ್ರತ್ಯಕ್ಷ ದೇವರು ಎಂದು ಭಾವಿಸಿದಲ್ಲಿ ಜೀವನ ಸಾರ್ಥಕವಾಗುತ್ತದೆ’ ಎಂದು ಗೋಕಾಕ ತಾಲ್ಲೂಕಿನ ಹಡಗಿನಹಾಳದ ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು ತಿಳಿಸಿದರು.
‘ನಾವು ಮಾಡುವ ಕೆಲಸದ ಬಗ್ಗೆ ಶ್ರದ್ಧೆ, ಪ್ರೀತಿ ಇದ್ದಲ್ಲಿ ಖಂಡಿತ ಯಶಸ್ಸು ದೊರೆಯುತ್ತದೆ. ಮಾಡಬೇಕು ಎಂಬ ಕಾರಣಕ್ಕೆ ಕೆಲಸ ಮಾಡಿದಲ್ಲಿ ಕಾಟಾಚಾರ ಆಗುತ್ತದೆ. ಕಾಟಾಚಾರದ ಭಕ್ತಿ ಭಗವಂತನಿಗೂ ಇಷ್ಟವಾಗದು’ ಎಂದು ಶಿರಾ ತಾಲ್ಲೂಕಿನ ಸಿದ್ದಾರೂಢ ಮಠದ ಸದ್ಗುರು ಚಿದಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದ ಮೂಡಲಗಿರಿಯಪ್ಪ ಮಾತನಾಡಿದರು. ಬುಧವಾರ ರಾತ್ರಿ ನಿತ್ಯಾನಂದ ಭಕ್ತ ಮಂಡಳಿಯವರಿಂದ ಅಖಂಡ ಭಜನೆ, ಗುರುವಾರ ಬೆಳಿಗ್ಗೆ ಅಭಿಷೇಕ, ಮಹಾಮಂಗಳಾರತಿ, ಪೂರ್ಣಾನಂದ ಸ್ವಾಮೀಜಿಯಿಂದ ‘ಓಂ ನಮೋ ಭಗವತೇ ನಿತ್ಯಾನಂದಾಯ’ ಅಖಂಡ ನಾಮಸ್ಮರಣೆ ನಡೆಯಿತು.
ಆಶ್ರಮದ ಸಮೀಪದಲ್ಲಿರುವ ಕೆ.ಆರ್.ಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರನ್ನು ಸನ್ಮಾನಿಸಿದ ಪೂರ್ಣಾನಂದ ಸ್ವಾಮೀಜಿ, 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿ ಹಾಗೂ ಶಾಲಾ ಬ್ಯಾಗ್ ವಿತರಿಸಿದರು. ಸಮಾರಂಭದ ನಂತರ ಗುರುತ್ರಯರ ಅದ್ದೂರಿ ಮೆರವಣಿಗೆ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.