ಹಿರಿಯೂರು: ಐಎಎಸ್, ಐಪಿಎಸ್, ಐಎಫ್‌ಎಸ್ ನಂತಹ ಹುದ್ದೆಗಳಲ್ಲಿ ಇರುವ ಹಲವು ಮಂದಿ ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿ ಓದಿದವರಾಗಿದ್ದಾರೆ. ಗ್ರಾಮೀಣ–ನಗರ ಎಂಬ ವ್ಯತ್ಯಾಸವಿಲ್ಲ. ಆಸಕ್ತಿ–ಶ್ರಮ ಇದ್ದಲ್ಲಿ ಯಶಸ್ಸು ಖಚಿತ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ ಹೇಳಿದರು.
ತಾಲ್ಲೂಕಿನ ಕರಿಯಾಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ತ್ಯಾಗ, ಬಲಿದಾನ ಇಲ್ಲದೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಆಗುತ್ತಿರಲಿಲ್ಲ. ನಮ್ಮ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಒಂದಿಷ್ಟು ತ್ಯಾಗಕ್ಕೆ ಸಿದ್ಧರಾಗಬೇಕು. ಗುರುಗಳ ಮಾರ್ಗದರ್ಶನ, ಸ್ವಂತ ಪರಿಶ್ರಮ ಬಹಳ ಮುಖ್ಯ. ನಗರದ ಶಾಲೆಗೆ ಕಳಿಸಿದ್ದರೆ ಗರಿಷ್ಟ ಅಂಕ ಪಡೆಯುತ್ತಿದ್ದೆ ಎಂಬ ಮನೋಭಾವ ಬೇಡ. ಬಡತನವನ್ನೇ ಸವಾಲಾಗಿ ಸ್ವೀಕರಿಸಿ ಉನ್ನತ ಸಾಧನೆ ಮಾಡಿರುವ ಬಾಬಾಸಾಹೇಬ್ ಅಂಬೇಡ್ಕರ್, ಅಬ್ದುಲ್ ಕಲಾಂ, ಸರ್. ಎಂ. ವಿಶ್ವೇಶ್ವರಯ್ಯನಂತಹವರು ನಮಗೆ ಆದರ್ಶರಾಗಬೇಕು. ಶಾಲೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸುತ್ತಿರುವುದು ಓದುವವರಿಗೆ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕರಿಯಾಲ ಗ್ರಾಮದ ಮುಖಂಡ ವನ್ನಾಟ್ ಹಾಲೇಗೌಡ ಅವರು, ಜವನಗೊಂಡನಹಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಂ. ಕಾವ್ಯ, ಎಂ. ರಾಮ್ ಸಂದೀಪ್, ಜೆ. ಕೇಶವ ಹಾಗೂ ಈ. ಕವನ ಅವರಿಗೆ ತಲಾ ಐದು ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಟಿ. ರಮೇಶ್ ಧ್ವಜಾರೋಹಣ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರೇಶ್, ಮಾಜಿ ಅಧ್ಯಕ್ಷೆ ವಿಜಯಮ್ಮ, ಓಲೇ ರಾಮಣ್ಣ, ಈರಣ್ಣ, ಜನಕರಾಯಪ್ಪ, ಮಹೇಶ್, ನಾಗರಾಜ್, ಮುಖ್ಯ ಶಿಕ್ಷಕಿ ಕೆ.ಸಿ. ಸುಧಾ, ಸಹ ಶಿಕ್ಷಕರಾದ ಎನ್. ಬಸವರಾಜ್, ಆರ್. ಶ್ರೀನಿವಾಸ್, ಸಿ. ಬಸವರಾಜಪ್ಪ, ನಫೀಸಾಬಾನು, ಪಾವನ, ಗುರುಪ್ರಸಾದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.