ಸಾಂದರ್ಭಿಕ ಚಿತ್ರ
ಹಿರಿಯೂರು: ತಾಲ್ಲೂಕಿನ ಐಮಂಗಲ ಹೋಬಳಿಯ ರಾಮಜೋಗಿಹಳ್ಳಿ– ಸೊಂಡೆಕೆರೆ ಗ್ರಾಮಗಳ ಸರಹದ್ದಿನಲ್ಲಿರುವ ಅಂಗಡಿ ಜಯಣ್ಣ ಅವರ ಜಮೀನಿನ ಬಳಿ ಶುಕ್ರವಾರ ಬೆಳಿಗ್ಗೆ ಮೂರು ಮರಿಗಳೊಂದಿಗೆ ಚಿರತೆ ಪ್ರತ್ಯಕ್ಷವಾಗಿದೆ.
ಹೊಲದಲ್ಲಿ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡುತ್ತಿದ್ದುದನ್ನು ಸ್ವಲ್ಪ ಹೊತ್ತು ವೀಕ್ಷಿಸಿದ ಚಿರತೆ ಜಮೀನಿಗೆ ಹೊಂದಿಕೊಂಡಿರುವ ಪೊದೆಯ ಮೂಲಕ ಕಣ್ಮರೆಯಾಗಿದೆ.
ಕಾಣದ ಹೆಜ್ಜೆಗುರುತು: ‘ಜಮೀನಿನಲ್ಲಿ ಉಳುಮೆ ಮಾಡಿರುವ ಕಾರಣ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಕಾಣುತ್ತಿಲ್ಲ. ಮರಿಗಳೊಂದಿಗೆ ಬಂದಿರುವುದು ರೈತ ತೆಗೆದಿರುವ ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ. ಅದು ಕಾಡುಬೆಕ್ಕು ಕೂಡ ಆಗಿರುವ ಸಾಧ್ಯತೆ ಇದೆ. ಆದರೂ ರೈತರು ಆತಂಕ ಪಡಬಾರದು ಎಂಬ ಕಾರಣಕ್ಕೆ ಅವರು ಹೇಳಿದ ಜಾಗಗಳಿಗೆಲ್ಲ ಹೋಗಿ ಪರಿಶೀಲನೆ ನಡೆಸಿದೆವು’ ಎಂದು ವಲಯ ಅರಣ್ಯಾಧಿಕಾರಿ ಶಶಿಧರ್ ತಿಳಿಸಿದ್ದಾರೆ.
‘ಕಾಡು ಬೆಕ್ಕುಗಳು ಸಹಜವಾಗಿ ಪುಕ್ಕಲು ಜೀವಿಗಳು. ಆದರೆ ಚಿರತೆ ಬಗ್ಗೆ ಎಚ್ಚರದಿಂದ ಇರಬೇಕು. ಮರಿಗಳು ಜೊತೆಯಲ್ಲಿದ್ದರೆ ಚಿರತೆಯಲ್ಲಿ ರೋಷ ಮತ್ತಷ್ಟು ಹೆಚ್ಚಿರುತ್ತದೆ. ಆದ್ದರಿಂದ ರೈತರು ಹಗಲು ಅಥವಾ ರಾತ್ರಿ ವೇಳೆ ಒಂಟಿಯಾಗಿ ಸಂಚರಿಸಬಾರದು. ಸಾಕುಪ್ರಾಣಿಗಳನ್ನು ಸಾಧ್ಯವಾದಷ್ಟು ಸುರಕ್ಷತೆ ಇರುವ ಕಡೆ ಕಟ್ಟಿಹಾಕಬೇಕು’ ಎಂದು ಶಶಿಧರ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.