ADVERTISEMENT

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಒತ್ತು

ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:23 IST
Last Updated 8 ಜೂನ್ 2025, 16:23 IST
ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಭಾನುವಾರ ಸಿ.ಸಿ. ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭೂಮಿ ಪೂಜೆ ನೆರವೇರಿಸಿದರು
ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಭಾನುವಾರ ಸಿ.ಸಿ. ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭೂಮಿ ಪೂಜೆ ನೆರವೇರಿಸಿದರು   

ಹಿರಿಯೂರು: ಚುನಾವಣೆ ಪೂರ್ವದಲ್ಲಿ ಮತದಾರರಿಗೆ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ನಂತರ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭರವಸೆ ನೀಡಿದರು.

ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಭಾನುವಾರ ಸಿ.ಸಿ. ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

2008ರಲ್ಲಿ ಹಿರಿಯೂರು ಕ್ಷೇತ್ರದಿಂದ ಪ್ರಥಮ ಬಾರಿಗೆ ಶಾಸಕನಾಗಿ ಆಯ್ಕೆಯಾದಾಗಿನಿಂದಲೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಗಮನ ಹರಿಸಿದ್ದೇನೆ. ಇನ್ನುಮುಂದೆ ಗ್ರಾಮೀಣ ರಸ್ತೆಗಳ ಸುಧಾರಣೆ, ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಆದ್ಯತೆ ನೀಡುತ್ತೇನೆ. 2017ರಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಒಂದು ಕೋಟಿ ರೂಪಾಯಿ ಅನುದಾನ ಒದಗಿಸಲಾಗಿತ್ತು. ಈಗ ಕಾಮಗಾರಿಗೆ ಅಂದಾಜು ₹50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ADVERTISEMENT

ಗ್ರಾಮದ ಅಭಿವೃದ್ಧಿಯ ಕುರಿತು ಗ್ರಾಮಸ್ಥರು ಸಲ್ಲಿಸಿರುವ ಬೇಡಿಕೆಯ ಪಟ್ಟಿ ದೊಡ್ಡದಿದೆ. ಆದ್ಯತೆ ಮೇಲೆ ಹಂತ ಹಂತವಾಗಿ ಅನುದಾನ ನೀಡುವ ಮೂಲಕ ಬೇಡಿಕೆ ಈಡೇರಿಸಲಾಗುವುದು. 30 ವರ್ಷದಿಂದ ರುದ್ರಭೂಮಿ ಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದರು. ಖಾಸಗಿ ಜಮೀನನ್ನು ಖರೀದಿಸಲಾಗಿದ್ದು, ಪ್ರಮುಖ ಸಮಸ್ಯೆ ಬಗೆಹರಿದಿದೆ. ಗ್ರಾಮದ ದೇವಸ್ಥಾನಗಳಿಗೂ ಅನುದಾನ ನೀಡಲಾಗಿದೆ ಎಂದು ಸುಧಾಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಸುಭಾನ್ ಖಾನ್, ವಿನೋದ ದೇವರಾಜು, ಸಾಕಮ್ಮ ಚಂದ್ರಶೇಖರ್, ಯರಗುಂಟಪ್ಪ, ರೇಣುಕಾಪ್ರಸಾದ್, ನಾಗಪ್ಪ, ಚಮನ್ ಷರೀಫ್, ಈರಲಿಂಗೇಗೌಡ, ಜ್ಞಾನೇಶ್, ಕಿರಣ್ ಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.