ಹಿರಿಯೂರು: ನಗರದ ಮೂರನೇ ವಾರ್ಡ್‌ನಲ್ಲಿ ನಡೆಸಬೇಕಾದ ರಸ್ತೆ ಕಾಮಗಾರಿಯನ್ನು ಬೇರೊಂಡು ವಾರ್ಡ್‌ನಲ್ಲಿ ಮಾಡಲಾಗಿದ್ದು, ಎಸ್‌ಟಿ ಸಮುದಾಯದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷೆ ಶಿವರಂಜನಿ ಅವರು ಆರೋಪಿಸಿದ್ದಾರೆ.
ವಿಶ್ವೇಶ್ವರಯ್ಯ ಜಲ ನಿಗಮದ ವತಿಯಿಂದ ಟಿಎಸ್‌ಪಿ ಅನುದಾನದಲ್ಲಿ ಎಸ್‌ಟಿ ಸಮುದಾಯದ ಕಾಲೋನಿಯಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಬೇಕಿತ್ತು. ಕಾಮಗಾರಿಗೆ ಅನುಮೋದನೆಯೂ ಸಿಕ್ಕಿತ್ತು. ಆದರೆ ಎಸ್‌ಟಿ ಸಮುದಾಯದವರೇ ಇಲ್ಲದ ಕಡೆ ಕಾಮಗಾರಿ ನಡೆಸಿರುವುದು ಸಂದೇಹಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
‘ಗುತ್ತಿಗೆದಾರರೊಬ್ಬರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪ್ರಭಾವ ಬಳಸಿಕೊಂಡು ಈ ಕಾಮಗಾರಿ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಕಾಮಗಾರಿಯು ಅಂದಾಜು ಪಟ್ಟಿಗೆ ಅನುಗುಣವಾಗಿ ಇಲ್ಲ. ಜೊತೆಗೆ ತುಂಬಾ ಕಳಪೆ ಗುಣಮಟ್ಟದಿಂದ ಕೂಡಿದೆ. ಈ ಮೂಲಕ ಎಸ್‌ಟಿ ಸಮುದಾಯವನ್ನು ವಂಚಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಿ ಸಮುದಾಯದವರಿಗೆ ನ್ಯಾಯ ಒದಗಿಸಬೇಕು ಎಂದು ಶಿವರಂಜನಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.