ADVERTISEMENT

ಹಿರಿಯೂರು: ಗ್ರಾಮ ಪಂಚಾಯಿತಿಗಳ ಪಿಡಿಒಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 13:58 IST
Last Updated 3 ಮಾರ್ಚ್ 2024, 13:58 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹಿರಿಯೂರು: ತಾಲ್ಲೂಕಿನ ಇಕ್ಕನೂರು, ಯರಬಳ್ಳಿ, ಗೌಡನಹಳ್ಳಿ ಹಾಗೂ ಕರಿಯಾಲ ಗ್ರಾಮ ಪಂಚಾಯಿತಿಗಳ ಪಿಡಿಒಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕರಿಯಾಲ ಪಿಡಿಒ ಅಮಾನತು: ಕರಿಯಾಲ ಗ್ರಾಮ ಪಂಚಾಯಿತಿ ಪಿಡಿಒ ಚಂದ್ರಕಲಾ ಅವರನ್ನು ಮಾರ್ಚ್ 2 ರಿಂದ ಸೇವೆಯಿಂದ ಅಮಾನತು ಮಾಡಿರುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಜನಪ್ರತಿನಿಧಿಗಳೊಂದಿಗೆ ಸೌಜನ್ಯದಿಂದ ವರ್ತಿಸದ, ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಿದ, ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದ, 2023–24 ನೇ ಸಾಲಿನ ಕಂದಾಯ ಬೇಡಿಕೆಯಂತೆ ಕಂದಾಯ ವಸೂಲಿ ಮಾಡದ ಆರೋಪಗಳ ಮೇಲೆ ಕ್ರಮ ಜರುಗಿಸಲಾಗಿದೆ. 

ಚಂದ್ರಕಲಾ ವರ್ತನೆ ಖಂಡಿಸಿ ಕರಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷರು ಹಾಗೂ ಸದಸ್ಯರು ಮಾರ್ಚ್ 1 ರಂದು ಸಾಮೂಹಿಕ ರಾಜೀನಾಮೆ ಸಲ್ಲಿಸಲು ಚಿತ್ರದುರ್ಗದ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಹೋಗಿದ್ದರು.

ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ಅಧ್ಯಕ್ಷ ಕೆ. ಜಗದೀಶ್ ಸಲ್ಲಿಸಿದ್ದ ದೂರು ಆಧರಿಸಿ, ತನಿಖೆ ನಡೆಸಿ ಯರಬಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎಸ್. ಬಸವರಾಜ್ ಅವರನ್ನು ಶನಿವಾರ ಅಮಾನತು ಮಾಡಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಗೊಲ್ಲಹಳ್ಳಿಯ ಶಿಕ್ಷಣ ಸಂಸ್ಥೆಯೊಂದರ ಇ–ಸ್ವತ್ತನ್ನು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಹಾಗೂ ಸರ್ಕಾರಕ್ಕೆ ಮತ್ತು ಗ್ರಾಮ ಪಂಚಾಯಿತಿಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. 

ಇಕ್ಕನೂರು–ಗೌಡನಹಳ್ಳಿ ಪಿಡಿಒಗಳ ಅಮಾನತು:

ನರೇಗಾದಲ್ಲಿ ಶೇ 60–40 ನಿಯಮ ಪಾಲಿಸದ ಆರೋಪದ ಮೇಲೆ ಇಕ್ಕನೂರು ಗ್ರಾಮ ಪಂಚಾಯಿತಿ ಪಿಡಿಒ ಎಚ್.ಎನ್. ಮಹಂತೇಶ್ ಹಾಗೂ ಗೌಡನಹಳ್ಳಿ ಪಂಚಾಯಿತಿ ಪಿಡಿಒ ತಿಪ್ಪೇಸ್ವಾಮಿ ಅವರನ್ನು ಫೆ.28 ರಂದು ಅಮಾನತು ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.