ಹೊಳಲ್ಕೆರೆ: ಧರ್ಮಸ್ಥಳ ಸಂಸ್ಥೆಯ ನೆರವಿನಿಂದ ಸುಮಾರು 40 ಲಕ್ಷ ಜನ ಸ್ವ ಉದ್ಯೋಗ ಕೈಗೊಂಡಿದ್ದಾರೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದರು.
ಪಟ್ಟಣದಲ್ಲಿ ₹4 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯ ಕಚೇರಿ ವಿಕಾಸ ಸೌಧ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಸಂಸ್ಥೆ ಅನ್ನದಾನ, ವಿದ್ಯಾದಾನ, ಆರೋಗ್ಯ ದಾನ, ಅಭಯದಾನ ಎಂಬ ಚತುರ್ದಾನಗಳ ಮೂಲಕ ಜನಸೇವೆ ಮಾಡುತ್ತಿದೆ. ಅಭಯದಾನದ ಮೂಲಕ ಗ್ರಾಮೀಣಾಭಿವೃದ್ಧಿ ಮಾಡುತ್ತಿದ್ದು, ದೇಶದ 600 ಕಡೆ ಕಡೆ ತರಬೇತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ₹1.25 ಲಕ್ಷ ಕೋಟಿ ಸಾಲ ವಿತರಣೆ ಮಾಡಿದ್ದು, ಜನರ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿದೆ. ಜೀವನದಲ್ಲಿ ಕೇವಲ ದುಡ್ಡೇ ಪ್ರಮುಖ ಅಲ್ಲ. ದುಡ್ಡಿನ ಜತೆಗೆ ಸ್ವಂತಿಕೆ, ಶ್ರಮ, ಸಾಧನೆ ಅಗತ್ಯ ಎಂದರು.
ಜನರ ಪಾಲುದಾರಿಕೆಯಿಂದ ಮಾತ್ರ ಒಂದು ಸಂಸ್ಥೆ ಬೆಳೆಯಲು ಸಾಧ್ಯ. ಬೆಟ್ಟ ಹತ್ತಲು ಊರುಗೋಲು ನೀಡಿದಂತೆ ನೆರವು ನೀಡುವ ಉದ್ದೇಶ ನಮ್ಮದು. ಆದ್ದರಿಂದ ಪಡೆದ ಸಾಲವನ್ನು ದುಡಿದು ಮರುಪಾವತಿ ಮಾಡುವ ಮೂಲಕ ಸಂಸ್ಥೆ ಇತರರಿಗೂ ನೆರವಾಗಲು ಸಹಕರಿಸಬೇಕು. ನಮ್ಮ ಸಂಸ್ಥೆಯಿಂದ ಸಾಲ ಪಡೆದವರಿಗೆ ವಿಮೆ ಸೌಲಭ್ಯ ಜಾರಿಮಾಡಿದ್ದು, ಸಾಲಗಾರ ಮರಣ ಹೊಂದಿದರೆ ಸಾಲದ ಮೊತ್ತವನ್ನು ವಿಮಾ ಕಂಪನಿ ಪಾವತಿಸುತ್ತದೆ. ನಮ್ಮದು ಲಾಭಾಂಶವನ್ನು ಸದಸ್ಯರಿಗೆ ಹಂಚುವ ಏಕೈಕ ಸಂಸ್ಥೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಧರ್ಮಸ್ಥಳ ಸಂಸ್ಥೆಯಲ್ಲಿ ಸದಸ್ಯರಾಗಿರುವ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಸಂಸ್ಥೆಯು ನಮಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದೆ, ಸಂಸ್ಥೆಯು ನಮಗೆ ಆರ್ಥಿಕವಾಗಿ ಬೆಂಬಲ ನೀಡುವುದರ ಜತೆಗೆ ಸಂಸ್ಕಾರ ಕಲಿಸಿದೆ ಎಂದು ಮಹಿಳೆಯರು ಹೆಮ್ಮೆಯಿಂದ ಹೇಳುತ್ತಾರೆ. ವೀರೇಂದ್ರ ಹೆಗ್ಗಡೆ ಅವರು ಸಮಾಜ ಸೇವೆಯ ಜತೆಗೆ ಧರ್ಮ ಉಳಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಅವರ ಧರ್ಮ ಕಾರ್ಯವನ್ನು ಮೆಚ್ಚಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ದೇಶಕ್ಕೇ ಪರಿಚಯಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್.ಅನಿಲ್ ಕುಮಾರ್, ಪುರಸಭೆ ಅಧ್ಯಕ್ಷ ವಿಜಯ ಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನಾ ವೇದಮೂರ್ತಿ, ಸುಮಿತ್ರಾ, ತಹಶೀಲ್ದಾರ್ ಬೀಬಿ ಫಾತಿಮಾ, ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಯೋಜನಾಧಿಕಾರಿ ಪ್ರಭಾಕರ್, ವಸಂತ್, ಎನ್.ಶಿವಮೂರ್ತಿ, ಪುರಸಭೆ ಸದಸ್ಯರು, ಜನಜಾಗೃತಿ ವೇದಿಕೆಯ ಸದಸ್ಯರು ಇದ್ದರು.
‘ಕೆಟ್ಟ ಹುಳುಗಳನ್ನು ನಿರ್ಲಕ್ಷ ಮಾಡಿ’
‘ಧರ್ಮಸ್ಥಳ ಸಂಸ್ಥೆಯ ಬಗ್ಗೆ ಕೆಲವು ಕೆಟ್ಟ ಹುಳುಗಳು ಇಲ್ಲಸಲ್ಲದ ಆರೋಪ ಮಾಡುತ್ತವೆ. ಹೆಚ್ಚು ಬಡ್ಡಿ ಹಾಕುತ್ತಾರೆ ಸಾಲ ಮರುಪಾವತಿಗೆ ಪೀಡುಸುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಇಂತವರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ’ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
‘ಧರ್ಮಸ್ಥಳ ಸಂಸ್ಥೆ ಕೇವಲ ಸಾಲ ಕೊಡುವ ಸಂಸ್ಥೆ ಅಲ್ಲ. ಸಂಸ್ಥೆಯನ್ನು ಚಾರಿಟಬಲ್ ಟ್ರಸ್ಟ್ ಮಾಡುವ ಮೂಲಕ ಲಾಭವನ್ನು ಸಮಾಜಸೇವೆಗೆ ಬಳಸಲಾಗುತ್ತಿದೆ. ಕೆರೆ ಅಭಿವೃದ್ಧಿ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ದೇವಾಲಗಳಿಗೆ ನೆರವು ಮದ್ಯವರ್ಜನಾ ಶಿಬಿರಗಳನ್ನು ಹಮ್ಮಿಕೊಂಡು ಸಮಾಜಕ್ಕೆ ನೆರವಾಗುತ್ತಿದೆ. ವೀರೇಂದ್ರ ಹೆಗ್ಗಡೆ ಅವರನ್ನು ಜನ ನಡೆದಾಡುವ ದೇವರೆಂದೇ ನಂಬಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
ಒಬ್ಬ ಮಹಿಳೆಯಾಗಿ ನಿರ್ಮಲಾ ಸೀತಾರಾಮನ್ ದೇಶದ ಹಣಕಾಸು ಮಂತ್ರಿಯಾಗಿರುವುದು ಹೆಮ್ಮೆಯ ಸಂಗತಿ. ಆದರೆ ಧರ್ಮಸ್ಥಳ ಸಂಸ್ಥೆ ಪ್ರತೀ ಮನೆಯಲ್ಲೂ ಒಬ್ಬ ಮಹಿಳೆಯನ್ನು ಆರ್ಥಿಕ ಮಂತ್ರಿಯನ್ನಾಗಿ ಮಾಡಿದೆ.–ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ
ಧರ್ಮಸ್ಥಳ ಸಂಸ್ಥೆ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸುವ ಮೂಲಕ ರಾಜ್ಯದ ಸಾವಿರಾರು ಬಡ ಕುಟುಂಬಗಳಿಗೆ ನೆರವಾಗಿದೆ. ಈ ಮೂಲಕ ಜಾತಿ, ಧರ್ಮಗಳನ್ನು ಮೀರಿ ಸೌಹಾರ್ದ ಮೆರೆದಿದೆ.–ಗೋವಿಂದ ಕಾರಜೋಳ, ಸಂಸದ
ಸರ್ಕಾರ ಮಾಡುವ ಕಾರ್ಯವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ರೈತರು, ಮಹಿಳೆಯರು, ದುರ್ಬಲರನ್ನು ಮುಖ್ಯವಾಹಿನಿಗೆ ತರುವ ಈ ಸಂಸ್ಥೆಯ ಕಾರ್ಯಗಳು ವಿಶ್ವಕ್ಕೇ ಮಾದರಿ.–ಎಚ್.ಆಂಜನೇಯ, ಮಾಜಿ ಸಚಿವ
ಧರ್ಮಸ್ಥಳ ಸಂಸ್ಥೆ ಸಾವಿರಾರು ಕುಟುಂಬಗಳಿಗೆ ಬೆಳಕಾಗಿದೆ. ಪ್ರಸಾದ ರೂಪದಲ್ಲಿ ಪಡೆದ ಸಾಲವನ್ನು ಪುಷ್ಪಾರ್ಚನೆಯಂತೆ ಮರುಪಾವತಿ ಮಾಡಬೇಕು.–ಕೆ.ಎಸ್.ನವೀನ್, ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.