ADVERTISEMENT

ಹೊಳಲ್ಕೆರೆ: ಟೆರೇಸ್ ಮೇಲೆ ಜೇನು ಕೃಷಿ

30 ಜೇನು ಪೆಟ್ಟಿಗೆ ಇಟ್ಟು ವಿನೂತನ ಪ್ರಯೋಗ ಮಾಡಿದ ಮಂಜುನಾಥ್

ಸಾಂತೇನಹಳ್ಳಿ ಸಂದೇಶ ಗೌಡ
Published 3 ಆಗಸ್ಟ್ 2022, 6:17 IST
Last Updated 3 ಆಗಸ್ಟ್ 2022, 6:17 IST
ಹೊಳಲ್ಕೆರೆಯ ತಾಲ್ಲೂಕಿನ ಕುಡಿನೀರಕಟ್ಟೆಯ ಮಂಜುನಾಥ್ ಮನೆಯ ಮೇಲೆ ಜೇನು ಸಾಕಾಣಿಕೆ ಮಾಡಿರುವ ದೃಶ್ಯ.
ಹೊಳಲ್ಕೆರೆಯ ತಾಲ್ಲೂಕಿನ ಕುಡಿನೀರಕಟ್ಟೆಯ ಮಂಜುನಾಥ್ ಮನೆಯ ಮೇಲೆ ಜೇನು ಸಾಕಾಣಿಕೆ ಮಾಡಿರುವ ದೃಶ್ಯ.   

ಹೊಳಲ್ಕೆರೆ: ತಾಲ್ಲೂಕಿನ ಕುಡಿನೀರ ಕಟ್ಟೆಯ ಕೆ.ಬಿ. ಮಂಜುನಾಥ್ ಜೇನು ಕೃಷಿಯಲ್ಲಿ ವಿನೂತನ ಪ್ರಯೋಗ
ಗಳನ್ನು ಮಾಡುತ್ತಿದ್ದಾರೆ.

ತೋಟದಲ್ಲೇ ಮನೆ ಕಟ್ಟಿಕೊಂಡು ವಾಸವಾಗಿರುವ ಇವರು ಮನೆಯ ಟೆರೇಸ್ ಮೇಲೆ ಹಾಗೂ ಮನೆಯ ಸುತ್ತ 30 ಜೇನು ಪೆಟ್ಟಿಗೆ
ಗಳನ್ನು ಇಟ್ಟಿದ್ದಾರೆ. ಇವರು ಜೇನು ಪೆಟ್ಟಿಗೆಗಳಿಂದ ಜೇನುತುಪ್ಪ ತೆಗೆದು ಮಾರಾಟ ಮಾಡುವುದಲ್ಲದೇ, ಸೋಪ್ ತಯಾರಿಸುತ್ತಿದ್ದಾರೆ. ಮನೆಯಲ್ಲಿಯೇ ಮುಖ ಮತ್ತು ದೇಹಕ್ಕೆ ಬಳಸುವ ಎರಡು ಬಗೆಯ ಸೋಪ್ ತಯಾರಿಸುತ್ತಿದ್ದಾರೆ.

ಜೇನು ತುಪ್ಪ ಬಳಸಿಯೇ ಮುಖಕ್ಕೆ ಹಚ್ಚುವ ಸೋಪ್ ತಯಾರಿಸುತ್ತಾರೆ. ಗ್ಲಿಸರಿನ್, ತೆಂಗಿನ ಎಣ್ಣೆ, ಸೋಡಿಯಂ ಹೈಡ್ರಾಕ್ಸೈಡ್, ಎಥೆನಾಲ್, ಶುಗರ್ ಸಿರಪ್ ಜತೆಗೆ ಜೇನುತುಪ್ಪ ಬೆರೆಸಿ ಅಚ್ಚಿನ ಮೂಲಕ ಮೊಟ್ಟೆಯಾಕಾರದ ಸೋಪ್ ತಯಾರಿಸುತ್ತಾರೆ. ಇದೇ ರೀತಿ ಜೇನು ಮೇಣ ಬಳಸಿ ಮತ್ತೊಂದು ಬಗೆಯ ಸೋಪ್ ಕೂಡ ತಯಾರಿಸುತ್ತಿದ್ದಾರೆ.

ADVERTISEMENT

‘ಬರೀ ಜೇನು ತುಪ್ಪ ಮಾರಾಟದಿಂದ ಹೆಚ್ಚು ಲಾಭ ಬರುವುದಿಲ್ಲ. ಮೌಲ್ಯವರ್ಧಿತ ಕೃಷಿಯಿಂದ ಹೆಚ್ಚು ಲಾಭ ಪಡೆಯಬಹುದು. ಕೆಲವು ಉತ್ಪನ್ನ
ಗಳನ್ನು ಮನೆಯಲ್ಲಿಯೇ ತಯಾರಿಸುತ್ತಿದ್ದೇವೆ. ಹೆಚ್ಚು ನೊರೆ ಬರಲಿ ಎಂದು ಬ್ರಾಂಡೆಡ್ ಸೋಪ್‌ಗಳಿಗೆ ಪ್ರಾಣಿಗಳ ಕೊಬ್ಬು ಬಳಸುತ್ತಾರೆ. ಆದರೆ ನಾವು ಶುದ್ಧ ಕೊಬ್ಬರಿ ಎಣ್ಣೆ ಬಳಸಿ ಸೋಪ್ ತಯಾರಿಸುತ್ತೇವೆ. ತಲೆ ನೋವು, ಕೀಲು ನೋವು, ಮೈ, ಕೈ ನೋವಿಗೆ ಬಾಮ್ ಕೂಡ ತಯಾರಿಸುತ್ತೇವೆ’ ಎನ್ನುತ್ತಾರೆ ಮಂಜುನಾಥ್.

‘ನಾವು ಯಾವುದೇ ಬ್ರಾಂಡ್ ಹೆಸರು ಇರಿಸಿಲ್ಲ. ಸೋಪ್‌ಗಳನ್ನು ಅಂಗಡಿಯಲ್ಲಿ ಮಾರಾಟ ಮಾಡುತ್ತಿಲ್ಲ. ಪರಿಚಯದವರು ಮನೆಗೇ ಬಂದು ಖರೀದಿಸುತ್ತಾರೆ. ಒಂದು ಸೋಪ್ ತಯಾರಿಸಲು ₹ 60 ಖರ್ಚಾಗುತ್ತಿದ್ದು, ₹ 80ಕ್ಕೆ ಮಾರಾಟ ಮಾಡುತ್ತೇವೆ. ಚರ್ಮದ ಕಾಂತಿ ಹಾಗೂ ಚರ್ಮ ರೋಗಗಳಿಗೆ ಜೇನಿನ ಸೋಪ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮುಂದೆ ಜೇನಿನ ಶಾಂಪೂ, ಟೂತ್ ಪೇಸ್ಟ್ ತಯಾರಿಸುವ ಉದ್ದೇಶ ಇದೆ’ ಎಂದು ಅವರು ಯೋಜನೆಗಳ ಕುರಿತು ವಿವರಿಸಿದರು.

‘ನಾವು ಜೇನು ಉಟ್ಟಿ, ರಾಣಿ ಜೇನು ಹಾಗೂ ಜೇನು ಹುಳುಗಳನ್ನೂ ಮಾರಾಟ ಮಾಡುತ್ತೇವೆ. ಒಂದು ಜೇನು ಪೆಟ್ಟಿಗೆಯಿಂದ ಎರಡನೇ
ರಾಣಿ ಜೇನುಹುಳು ತೆಗೆದು ಮತ್ತೊಂದು ಪೆಟ್ಟಿಗೆಗೆ ಹಾಕುವ ಮೂಲಕ ಹೊಸ ಜೇನುಗೂಡು ಮಾಡುತ್ತೇವೆ. ಉಟ್ಟಿ ಸಮೇತ ರಾಣಿಜೇನು ಹಾಗೂ ಕೆಲಸಗಾರ ಜೇನುಹುಳುಗಳನ್ನು ಜೇನು ಸಾಕಣೆ ಮಾಡುವ ರೈತರಿಗೆ ಮಾರಾಟ ಮಾಡುತ್ತೇವೆ. 2 ವರ್ಷಗಳಲ್ಲಿ 130 ಹೊಸ ಜೇನುಗಳನ್ನು ಮಾರಾಟ ಮಾಡಿದ್ದೇವೆ. ಒಂದು ಹೊಸ ಜೇನಿಗೆ ₹ 1,500 ಬೆಲೆ ಇದೆ. ಇದರಿಂದಲೂ ಹೆಚ್ಚು ಲಾಭ ಗಳಿಸಬಹುದು’ ಎಂಬುದು ಮಂಜುನಾಥ್ ಅವರ ಲೆಕ್ಕಾಚಾರ.

‘ಜೇನುಗಳು ಅಡಿಕೆ, ತೆಂಗಿನ ಹೂಗಳಿಂದ ಹೆಚ್ಚು ಮಕರಂದ ಸಂಗ್ರಹಿಸುತ್ತವೆ. ನಮ್ಮ ಭಾಗದಲ್ಲಿ ಅಡಿಕೆ ತೋಟಗಳು ಹೆಚ್ಚಿದ್ದು,
ಅಡಿಕೆ ಹೊಂಬಾಳೆ ಒಡೆಯುವ ಸಮಯದಲ್ಲಿ ಹೆಚ್ಚು ಜೇನುತುಪ್ಪ ಸಿಗುತ್ತದೆ. ಕಳೆ ಹುಲ್ಲಿನ ಹೂಗಳಿಂದಲೂ ಜೇನು ಹುಳುಗಳು ಮಕರಂದ ಸಂಗ್ರಹಿಸುತ್ತವೆ. ₹ 600ಕ್ಕೆ ಒಂದು ಕೆ.ಜಿ.ಯಂತೆ ನಾವು ಶುದ್ಧ ಜೇನು ತುಪ್ಪ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಮಂಜುನಾಥ್.
(ಮೊಬೈಲ್- 7338023686
ಸಂಪರ್ಕಿಸಬಹುದು).

.........

ಜೇನಿಗೆ ಕರಡಿ ಕಾಟ ಜಾಸ್ತಿ. ಆದ್ದರಿಂದ ಮನೆಯ ಟೆರೇಸ್ ಮೇಲೆ ಜೇನುಪೆಟ್ಟಿಗೆ ಇಟ್ಟಿದ್ದೇವೆ.

-ಕೆ.ಬಿ. ಮಂಜುನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.