ಹೊಸದುರ್ಗ: ಸ್ಮಾರ್ಟ್ ಮೀಟರ್ ಅಳವಡಿಸುವ ಆದೇಶ ಹಿಂಪಡೆದು, ಕಾರ್ಯ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಹೊಸದುರ್ಗ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲ್ಲೂಕಿನ ರೈತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
‘ವಿದ್ಯುತ್ ಮಾಪಕಗಳನ್ನು ಬದಲಾಯಿಸುವ ಬಗ್ಗೆ ಸ್ಪಷ್ಟನೆ ನೀಡಿ ನೋಟಿಸ್ ಜಾರಿಗೊಳಿಸಿ, ಗ್ರಾಹಕರ ಒಪ್ಪಿಗೆ ಪಡೆದುಕೊಳ್ಳಿ. ಏಕಮುಖ ತೀರ್ಮಾನ ಬೇಡ. ತಾಲ್ಲೂಕಿನಲ್ಲಿ ಕೃಷಿಗೆ ಸರ್ಕಾರ ಘೋಷಿಸಿರುವ ಅವಧಿಗಿಂತ ಕಡಿಮೆ ವಿದ್ಯುತ್ ಸರಬರಾಜು ಮಾಡಿರುವ ಪ್ರದೇಶದಲ್ಲಿನ ಆರ್ಥಿಕ ನಷ್ಟವನ್ನು ಇಲಾಖೆ ಭರಿಸಬೇಕು. ಟಿ.ಸಿ. ಮತ್ತು ಸಮರ್ಪಕ ವಿದ್ಯುತ್ ನೀಡುವಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಲ್ಲಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವಯಂ ವೆಚ್ಚ ಯೋಜನೆ ರದ್ದುಗೊಳಿಸಿ, ಅಕ್ರಮ– ಸಕ್ರಮ ಯೋಜನೆಯನ್ನು ಜಾರಿಗೆ ತರಬೇಕು. ಕೃಷಿ ಕ್ಷೇತ್ರಗಳನ್ನು ವಿದ್ಯುತ್ ಜಾಗೃತದಳದ ಕಾರ್ಯವ್ಯಾಪ್ತಿಯಿಂದ ಮುಕ್ತಗೊಳಿಸಬೇಕು’ ಎಂದು ಮನವಿ ಮಾಡಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ‘ಪಕ್ಕದ ಕೇರಳ ಮತ್ತು ಆಂಧ್ರ ಪ್ರದೇಶದಲ್ಲಿ ₹ 900ಕ್ಕೆ ಸ್ಮಾರ್ಟ್ ಮೀಟರ್ ಸಿಗುತ್ತದೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ₹10 ಸಾವಿರಕ್ಕೆ ಸ್ಮಾರ್ಟ್ ಮೀಟರ್ ಅಳವಡಿಸುತ್ತಿದ್ದಾರೆ. ಸರ್ಕಾರ ಉಚಿತ ವಿದ್ಯುತ್ ಜಾರಿಗೆ ತಂದು ಇತರೆ ಬೆಲೆಗಳ ಏರಿಕೆ ಮಾಡುತ್ತಿದೆ. ಹೊಸದುರ್ಗ ತಾಲ್ಲೂಕಿನ ಯಾವಹಳ್ಳಿಗೂ ಸ್ಮಾರ್ಟ್ ಮೀಟರ್ ಅಳವಡಿಸಲು ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸ್ಮಾರ್ಟ್ ಮೀಟರ್ ಅಳವಡಿಸಿದರೆ ಬಿಲ್ ಕಲೆಕ್ಟರ್ ಅವಶ್ಯಕತೆ ಇಲ್ಲ. ಕರೆನ್ಸಿ ಹಾಕಿಕೊಂಡು ವಿದ್ಯುತ್ ಪೂರೈಕೆ ಮಾಡಿಕೊಳ್ಳಬೇಕು. ಕೃಷಿ ಬೆಲೆ ಆಯೋಗದ 26 ಬೆಳೆಗಳಿಗೆ ಉತ್ಪಾದನೆ ವೆಚ್ಚ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ, 7 ವರ್ಷವಾದರೂ ಯಾವುದೇ ಪ್ರತಿಕ್ರಿಯೆಯಿಲ್ಲ. ರೈತರ ಅನುಮತಿಯಿಲ್ಲದೆ ಸ್ಮಾರ್ಟ್ ಮೀಟರ್ ಅಳವಡಿಸುವ ಬಿಡುವುದಿಲ್ಲ. ಮೀಟರ್ ಅಳವಡಿಸಲು ಬರುವವರು ಸೋಮವಾರ ಅಥವಾ ಸಂಜೆ 6ರಿಂದ 8 ಒಳಗೆ ಬನ್ನಿ. ರೈತರಿಗೂ ಸಹ ಅವರದ್ದೇ ಕೆಲಸಗಳಿರುತ್ತವೆ. ಅವರು ಶ್ರಮ ಜೀವಿಗಳು ದೇಶಕ್ಕೆ ಅನ್ನ ನೀಡುತ್ತಿದ್ದಾರೆ’ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಹೇಳಿದರು.
ರೈತ ಸಂಘದ ಜಿಲ್ಲಾ ಘಟಕದಪ್ರಧಾನ ಕಾರ್ಯದರ್ಶಿ ಕೆ.ಸಿ ಮಹೇಶ್ವರಪ್ಪ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಬೋರೇಶ್, ಅಧ್ಯಕ್ಷ ಚಿತ್ತಪ್ಪ, ಪ್ರಧಾನ ಕಾರ್ಯದರ್ಶಿ ನಿರಂಜನ್ ಮೂರ್ತಿ, ಮುಖಂಡರಾದ ರಘು ನೀರಗುಂದ, ಕರಿಸಿದ್ದಯ್ಯ ತಾರಿಕೆರೆ, ಮಲ್ಲಿಕಾರ್ಜುನ್, ಪ್ರಸನ್ನಕುಮಾರ್, ಸದಾಶಿವಪ್ಪ, ಮಾರುತಿ ಅಜ್ಜಯ್ಯನಹಟ್ಟಿ, ಸೂಜಿಕಲ್ ರವಿಕುಮಾರ್ ಸೇರಿದಂತೆ ಹಲವರು ಇದ್ದರು.
ಹಳೆಯ ಮೀಟರ್‌ಗಳು ಕೆಲವು ಬಾರಿ ಶಾಕ್ ಆಗ್ತಿದೆ. ಹಳೆ ಮೀಟರ್‌ಗಳನ್ನು ಸರ್ಕಾರದಿಂದಲೇ ಬದಲಾಯಿಸಲಾಗುತ್ತಿದೆ. ಇದಕ್ಕೆ ರೈತರು ಹಣ ಪಾವತಿಸುವಂತಿಲ್ಲ. ಒಂದು ವೇಳೆ ಯಾರಾದರೂ ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದುಅನಿಲ್ಕುಮಾರ್ ಎಇಇ ಬೆಸ್ಕಾಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.