ಸಿರಿಗೆರೆ: ‘ಪ್ರಧಾನಿ ನರೇಂದ್ರ ಮೋದಿಯವರು ಉಜ್ವಲ ಯೋಜನೆ ಜಾರಿಗೆ ತಂದು ಅಗತ್ಯ ಇರುವವರಿಗೆ ಉಚಿತ ಅಡಿಗೆ ಅನಿಲ ಸಂಪರ್ಕ ಒದಗಿಸುವುದಕ್ಕಿಂದ 20 ವರ್ಷಗಳ ಹಿಂದೆಯೇ ನಾನು ಆ ಕೆಲಸ ಮಾಡಿರುವೆ’ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.
ಸಮೀಪದ ದೊಡ್ಡಿಗನಾಳ್- ಹೊಸಹಟ್ಟಿ ಗ್ರಾಮದಲ್ಲಿ ₹ 4 ಕೋಟಿ ಅನುದಾನದ ಸಿಸಿ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ದೊಡ್ಡಿಗನಾಳ್ ಹೊಸಟ್ಟಿ ಗ್ರಾಮದ ಎಲ್ಲಾ ಮನೆಗಳಿಗೂ 20 ವರ್ಷಗಳ ಹಿಂದೆಯೇ ಉಚಿತ ಗ್ಯಾಸ್ ಸಿಲಿಂಡರ್, ಸ್ಟೌಗಳನ್ನು ವಿತರಣೆ ಮಾಡಿ ಮಹಿಳೆಯರ ಸಂಕಷ್ಟದಲ್ಲಿ ನೆರವಾಗಿದ್ದೇನೆ’ ಎಂದರು.
‘ನಿಮ್ಮ ಗ್ರಾಮದಲ್ಲಿ ಹಲವು ಜನರು ವಿದ್ಯಾವಂತರು ಇರುವಂತೆ ಬಡವರೂ ಇದ್ದಾರೆ. ಅಂತವರು ತೋಟ, ಕೃಷಿಯ ಕಡೆಗೆ ಬನ್ನಿ. ಗಂಗಾಕಲ್ಯಾಣ ಯೋಜನೆಯಲ್ಲಿ ಅನುಕೂಲ ಪಡೆದುಕೊಳ್ಳಿ, ವ್ಯಾಪಾರ ಮಾಡಿ, ಅಭಿವೃದ್ಧಿಯ ಕಡೆ ಸಾಗಿರಿ’ ಎಂದು ಚಂದ್ರಪ್ಪ ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಾಕ್ಷಿ, ಸಿರಿಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಬಿ. ಮೋಹನ್, ಭರಮಸಾಗರ ಬಿಜೆಪಿ. ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ಡಿ.ಮೆದಿಕೇರಿಪುರದ, ವಿಷ್ಣು, ಮೂರ್ತಿ, ನಾಗರಾಜ, ಆನಂದನಾಯ್ಕ, ತಿಪ್ಪೇಸ್ವಾಮಿ, ಪಂಚಾಕ್ಷರಿ, ಹಿರೇಬೆನ್ನೂರು ನಾಗರಾಜ್, ಶಿವಣ್ಣ, ಕರಿಯಪ್ಪ ಹಾಗೂ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.