ADVERTISEMENT

ಕಾನೂನು ಚೌಕಟ್ಟಿನಲ್ಲಿ ಪ್ರಕರಣ ಬಗೆಹರಿಸಿಕೊಳ್ಳುತ್ತೇನೆ

bjp district president

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 15:57 IST
Last Updated 28 ಅಕ್ಟೋಬರ್ 2018, 15:57 IST
ನವೀನ್
ನವೀನ್   

ಚಿತ್ರದುರ್ಗ: ನನ್ನ ವಿರುದ್ಧದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿಯೇ ಬಗೆಹರಿಸಿಕೊಳ್ಳಲು ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದೇನೆ ಎಂದುಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌. ನವೀನ್‌ ತಿಳಿಸಿದರು.

ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಈಚೆಗೆ ದಂಡ ಹಾಗೂಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಜಾಮೀನು ಸಿಗುವಂಥ ಪ್ರಕರಣವಾದ್ದರಿಂದ ತಕ್ಷಣವೇ ಜಾಮೀನಿಗೆ ಕೋರಿಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಡಲಾಗಿದ್ದು, ನಾನೂ ಬಂಧನಕ್ಕೆ ಒಳಗಾಗಿಲ್ಲ ಎಂದು ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಏನಿದು ಪ್ರಕರಣ?

ADVERTISEMENT

‘ರಾಜ್ಯ ಕಾರ್ಮಿಕ ವಿಮಾ ನಿಗಮಕ್ಕೆ 2012-13ನೇ ಸಾಲಿನಲ್ಲಿ ನಾಲ್ಕು ತಿಂಗಳ ವಂತಿಗೆ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ನಮ್ಮ ಸಂಸ್ಥೆಯಾದ ಹೋಟೆಲ್‌ ನವೀನ್‌ ರೀಜೆನ್ಸಿ ಹಾಗೂ ಅದರ ನಿರ್ದೇಶಕನಾದ ನನ್ನ ವಿರುದ್ಧ 2015ರಲ್ಲಿ ನಿಗಮದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು’ ಎಂದು ತಿಳಿಸಿದರು.

ಜೆಎಂಎಫ್‌ಸಿ ನ್ಯಾಯಾಲಯ ವಿಧಿಸಿದ್ದ₹10 ಸಾವಿರ ದಂಡವನ್ನು ಈಗಾಗಲೇ ಕಟ್ಟಿದ್ದೇನೆ.₹ 1.54 ಲಕ್ಷ ವಂತಿಗೆಯ ಅರ್ಧದಷ್ಟು ಹಣ ₹ 77 ಸಾವಿರವನ್ನು 10 ದಿನದೊಳಗೆ ಕಟ್ಟಲುಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಆದೇಶಿಸಿದ್ದು, ಅ. 29ರಂದು ಕಟ್ಟಲಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲಾ ನ್ಯಾಯಾಲಯದಲ್ಲೇ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಒಂದು ರಾಷ್ಟ್ರೀಯ ಪಕ್ಷದ ಜಿಲ್ಲಾ ಘಟಕದ ಜವಾಬ್ದಾರಿ ಹಾಗೂ ಸಾರ್ವಜನಿಕ ವಲಯದಲ್ಲಿ ಇರುವ ಕಾರಣ ನ್ಯಾಯಾಲಯದ ಮೂಲಕವೇ ಬಗೆಹರಿಸಿಕೊಳ್ಳುತ್ತೇನೆ. ಸ್ವಂತ ಉದ್ಯಮದಲ್ಲಿ ಇರುವಂಥ ಅನೇಕರು 10 ರಿಂದ 12 ಇಲಾಖೆಯ ನಿಯಮಗಳಿಗೆ ಒಳಪಟ್ಟು ಕೆಲಸ ಮಾಡಬೇಕಾಗುತ್ತದೆ. ನನ್ನಂತೆಯೇ ಅನೇಕರು ಒಂದಿಲ್ಲೊಂದು ರೀತಿಯಲ್ಲಿ ಪ್ರಕರಣ ಎದುರಿಸುತ್ತಿದ್ದಾರೆ ಎಂದರು.

ನವೀನ್‌ಗೆ ಶಿಕ್ಷೆಯಾಗಿದೆ ಎಂಬ ಭಾವನೆ ಪಕ್ಷದ ಕೆಲ ಕಾರ್ಯಕರ್ತರಲಿದ್ದು, ಆತಂಕ ಪಡುವ ಅಗತ್ಯವಿಲ್ಲ. ನ್ಯಾಯಾಲಯದ ಮೇಲೆ ಗೌರವವಿದ್ದು, ವಿಶ್ರಾಂತಿ ಹಾಗೂ ವಿನಾಯಿತಿಯನ್ನೂ ನಾನೂ ಕೇಳಿಲ್ಲ. ಕಾನೂನಿನ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳಲು ಕೆಲ ಮುಖಂಡರು ಸಲಹೆ ನೀಡಿದ್ದಾರೆ. ಅದರಂತೆಯೇ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ವಕೀಲ ಉಮೇಶ್, ಬಿಜೆಪಿ ಮುಖಂಡರಾದ ಮುರುಳಿ, ರತ್ನಮ್ಮ, ದಗ್ಗೆ ಶಿವಪ್ರಕಾಶ್, ರಾಜೇಶ್, ನಾಗರಾಜ್ ಬೇದ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.