ADVERTISEMENT

ರಾಜ್ಯ ಬಜೆಟ್‌ಗೆ ಹೆಚ್ಚಿದ ಜಿಲ್ಲೆಯ ನಿರೀಕ್ಷೆ

ಭದ್ರಾ ಮೇಲ್ದಂಡೆ, ನೇರ ರೈಲು ಮಾರ್ಗ ಸಾಕಾರಗೊಳ್ಳಬಹುದೇ?

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:23 IST
Last Updated 8 ಮಾರ್ಚ್ 2021, 5:23 IST

ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬಜೆಟ್‌ ಮಂಡನೆಗೆ ಸಿದ್ಧವಾಗಿದ್ದಾರೆ. ಬಿಜೆಪಿಗೆ ಬಲ ತುಂಬಿದ ಜಿಲ್ಲೆಯ ಜನರು ರಾಜ್ಯ ಸರ್ಕಾರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚುನಾವಣೆಗೂ ಮುನ್ನ ನೀಡಿದ ಆಶ್ವಾಸನೆಗಳು ಬಜೆಟ್‌ನಲ್ಲಿ ಈಡೇರಬಹುದೇ ಎಂಬ ಕಾತುರ ಹೆಚ್ಚಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನ ತ್ವರಿತಗೊಳಿಸುವ ನಿರೀಕ್ಷೆ ಇದೆ. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುದಾನ ಹಂಚಿಕೆಯಾಗುವ ಕ್ಷಣಕ್ಕೆ ಜನರು ಕಾಯುತ್ತಿದ್ದಾರೆ. ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ಯೋಜನೆಯ ಜಾರಿಯ ಬಗ್ಗೆ ಜನರು ಇನ್ನೂ ಭರವಸೆ ಇಟ್ಟುಕೊಂಡಿದ್ದಾರೆ. ಹೊಸ ತಾಲ್ಲೂಕು ರಚನೆ, ಕೆರೆ ತುಂಬಿಸುವ ಯೋಜನೆ ಸೇರಿ ಹಲವು ನಿರೀಕ್ಷೆಗಳು ಗರಿಗೆದರಿವೆ.

ಕಾಂಗ್ರೆಸ್‌ ಭದ್ರಕೋಟೆ ಆಗಿದ್ದ ಚಿತ್ರದುರ್ಗ 2018ರ ವಿಧಾನಸಭಾ ಚುನಾವಣೆಯ ಬಳಿಕ ‘ಕೇಸರಿ’ಯತ್ತ ಹೊರಳಿದೆ. ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಲೋಕಸಭಾ ಚುನಾವಣೆಯಲ್ಲಿಯೂ ಮತದಾರರು ‘ಕಮಲ’ಕ್ಕೆ ಬಲ ತುಂಬಿದಿದ್ದಾರೆ. ಇದಕ್ಕೆ ತಕ್ಕಂತೆ ಜಿಲ್ಲೆಗೆ ಪ್ರತಿಫಲ ದೊರೆತಿಲ್ಲ ಎಂಬ ಕೊರಗು ಜಿಲ್ಲೆಯ ಜನರಲ್ಲಿದೆ. ಈ ಕೊರಗು 2021–22ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ನಿವಾರಣೆಯಾಗಬಹುದೇ ಎಂಬುದಕ್ಕೆ ಮಾರ್ಚ್‌ 8ರಂದು ಉತ್ತರ ದೊರೆಯಲಿದೆ.

ADVERTISEMENT

ಚಿತ್ರದುರ್ಗ ಜಿಲ್ಲೆಯ ನಿರಂತರವಾಗಿ ಬರಕ್ಕೆ ತುತ್ತಾಗುತ್ತಿದೆ. ನೀರಿನ ಬವಣೆಯನ್ನು ನೀಗಿಸಿ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಲಾಗಿದೆ. ತುಂಗಾ ಹಾಗೂ ಭದ್ರಾ ನದಿಯಿಂದ ನೀರು ಒದಗಿಸುವ ಯೋಜನೆ ಆರಂಭವಾಗಿ ದಶಕ ಕಳೆದಿದೆ. ಆದರೆ, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೃಷಿ ಜಮೀನುಗಳನ್ನು ಭದ್ರಾ ನೀರು ತಲುಪಿಲ್ಲ. ಇನ್ನಷ್ಟು ಕೆರೆಗೆ ನೀರು ಹರಿಸಬೇಕು ಎಂಬ ಕೂಗು ಜೋರಾಗಿದೆ. ಇದಕ್ಕೆ ಬಜೆಟ್‌ನಲ್ಲಿ ಪ್ರತಿಸ್ಪಂದನ ಸಿಗಬಹುದೇ ಎಂದು ಬಜೆಟ್‌ ಎದುರು ನೋಡುತ್ತಿದ್ದಾರೆ.

ಭೂಸ್ವಾಧೀನ ಚುರುಕಾಗಲಿ: ಬಿಜೆಪಿ 2008ರಲ್ಲಿ ಅಧಿಕಾರಕ್ಕೆ ಬಂದಾಗ ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗ ಯೋಜನೆ ಘೋಷಣೆಯಾಗಿತ್ತು. ರಾಜ್ಯ ಸರ್ಕಾರ ಶೇ 50 ಹಾಗೂ ಕೇಂದ್ರ ಸರ್ಕಾರ ಶೇ 50ರಷ್ಟು ವೆಚ್ಚ ಭರಿಸುವ ಒಪ್ಪಂದಕ್ಕೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಸಹಿ ಹಾಕಿದ್ದರು. ಸರ್ಕಾರ ಬದಲಾದ ಬಳಿಕ ಒಪ್ಪಂದದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಮುಂದಿಟ್ಟುಕೊಂಡು ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಹಂಚಿಕೆ ಮಾಡಲಿಲ್ಲ. ಈಗ ಮತ್ತೊಮ್ಮೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುವುದರಿಂದ ಯೋಜನೆಯ ಬಗ್ಗೆ ಆಶಾಭಾವನೆ ಮೂಡಿದೆ.

ರೈಲ್ವೆ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ತೆವಳುತ್ತ ಸಾಗುತ್ತಿದೆ. ತುಮಕೂರು ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಒಂದಷ್ಟು ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇನ್ನೂ ಬಾಕಿ ಇದೆ. ಭೂಸ್ವಾಧೀನಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರ ಒದಗಿಸಬೇಕಿದೆ.

ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್‌ ತಾಮ್ರ ಗಣಿ ಪುನಶ್ಚೇತನಕ್ಕೆ ಸರ್ಕಾರ ಒಲವು ತೋರಿರುವುದಾಗಿ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಬಹಿರಂಗಪಡಿಸಿದ್ದರು. ಇದಕ್ಕೆ ಬಜೆಟ್‌ನಲ್ಲಿ ಸ್ಥಾನ ದೊರೆತಿರುವ ಬಗ್ಗೆ ಅನುಮಾನವಿದೆ. ಈರುಳ್ಳಿ, ಹಣ್ಣು ಮತ್ತು ತರಕಾರಿಗೆ ಕೋಲ್ಡ್‌ ಸ್ಟೋರೇಜ್‌ ನಿರ್ಮಿಸುವಂತೆ ಜಿಲ್ಲೆಯ ರೈತರು ಹಲವು ವರ್ಷಗಳಿಂದ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.