ಚಳ್ಳಕೆರೆ: ‘ಮಕ್ಕಳಿಗೆ ಪಠ್ಯವಿಷಯ ಮನನ ಮಾಡಿಸಲು ಸರಳ ಬೋಧನಾ ವಿಧಾನ ಕಂಡುಕೊಳ್ಳುವುದಲ್ಲದೆ ಪ್ರತಿ ವಾರಕ್ಕೊಮ್ಮೆ ಅವರ ಕಲಿಕಾ ಪ್ರಗತಿ ತಪ್ಪದೆ ಪರಿಶೀಲಿಸಬೇಕು’ ಎಂದು ಮುಖ್ಯಶಿಕ್ಷಕ ಎ.ವೀರಣ್ಣ ಶಿಕ್ಷಕರಿಗೆ ಸೂಚನೆ ನೀಡಿದರು.
ನಗರದ ಹೆಗ್ಗೆರೆ ತಾಯಮ್ಮ ಮತ್ತು ತಿಪ್ಪೇಸ್ವಾಮಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮಾಹಿತಿ ಪೋಷಕರಿಗೆ ಕಳುಹಿಸಬೇಕು. ಕಲಿಕೆಯ ಬಗ್ಗೆ ಹೆಚ್ಚು ಕಾಳಜಿವಹಿಸಿ ಶಾಲಾ ನಂತರ ಪ್ರತಿದಿನ ಒಂದು ಗಂಟೆ ಶಿಕ್ಷಕರು ವಿಶೇಷ ತರಗತಿ ತೆಗೆದುಕೊಳ್ಳುವ ಮೂಲಕ ಆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು’ ಎಂದು ಹೇಳಿದರು.
‘ಕಥೆ, ಕಾವ್ಯ ಹಾಗೂ ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆ ಮುಂತಾದ ಚಿಕ್ಕ ಚಿಕ್ಕ ಪುಸ್ತಕಗಳನ್ನು ಮಕ್ಕಳ ಕೈಗೆ ಕೊಟ್ಟು ಈಗಿನಿಂದಲೇ ಅವರಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸಬೇಕು’ ಎಂದು ದೈಹಿಕ ಶಿಕ್ಷಣ ಶಿಕ್ಷಕ ಪ್ರಾಣೇಶ್ ತಿಳಿಸಿದರು.
ಶಿಕ್ಷಕಿಯರಾದ ಉಮಾ, ವೇಣಿ, ರೂಪಾ ಮಾತನಾಡಿದರು. ಶಿಕ್ಷಕ ಪ್ರದೀಪ್, ಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.