ADVERTISEMENT

ಮುರುಘಾ ಶ್ರೀಗಳಿಂದ ಮತ್ತಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ: ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 15:43 IST
Last Updated 14 ಅಕ್ಟೋಬರ್ 2022, 15:43 IST
   

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತಿಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌ ಬಾಲಚಂದ್ರ ನಾಯ್ಕ್‌ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ತನಿಖಾಧಿಕಾರಿ ಶುಕ್ರವಾರ ಮುರುಘಾ ಮಠಕ್ಕೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯರ ಹೇಳಿಕೆ ಪಡೆದ ಬಳಿಕ ತನಿಖೆ ಚುರುಕುಗೊಳ್ಳಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಸೆ.1ರಂದು ಪೊಲೀಸರು ಬಂಧಿಸಿದ್ದರು. ಪ್ರಕರಣ ತನಿಖಾ ಹಂತದಲ್ಲಿ ಇರುವಾಗಲೇ ಮೈಸೂರಿನ ಒಡನಾಡಿ ಸಂಸ್ಥೆ ಸಂಪರ್ಕಿಸಿದ ಇಬ್ಬರು ಮಕ್ಕಳ ತಾಯಿ, ನಜರಬಾದ್‌ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಮುರುಘಾ ಶರಣರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ADVERTISEMENT

ಬಾಲನ್ಯಾಯಮಂಡಳಿಗೆ ಶರಣು

ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸಿಲುಕಿರುವ 17 ವರ್ಷದ ಬಾಲಕ ಶುಕ್ರವಾರ ಬಾಲನ್ಯಾಯಮಂಡಳಿ ಎದುರು ಶರಣಾಗಿದ್ದಾನೆ.

ಜಿಲ್ಲಾ ಬಾಲಭವನಕ್ಕೆ ಧಾವಿಸಿದ ಬಾಲಕ, ನ್ಯಾಯಮಂಡಳಿ ಎದುರು ಶರಣಾಗಿದ್ದಾನೆ. ವಿಚಾರಣೆ ನಡೆಸಿದ ಮಂಡಳಿ ನ.4ರಂದು ಹಾಜರಾಗುವಂತೆ ಸೂಚಿಸಿದೆ.

ಆ.27ರಂದು ಪ್ರಕರಣ ದಾಖಲಾಗುತ್ತಿದ್ದಂತೆ ಬಾಲಕ ತಲೆಮರೆಸಿಕೊಂಡಿದ್ದನು. ಪ್ರಥಮ ಆರೋಪಿ ಶಿವಮೂರ್ತಿ ಮುರುಘಾ ಶರಣರು ಹಾಗೂ ಎರಡನೇ ಆರೋಪಿ ಹಾಸ್ಟೆಲ್ ವಾರ್ಡನ್‌ ಬಂಧಿತರಾಗಿದ್ದು, ಇನ್ನೂ ಇಬ್ಬರು ಆರೋಪಿಗಳು ಪತ್ತೆಯಾಗಬೇಕಿದೆ.

ಮುರುಘಾ ಮಠದಲ್ಲಿ ಬಾಲಕಿ ಪತ್ತೆ

ಚಿತ್ರದುರ್ಗದ ಮುರುಘಾ ಮಠದಲ್ಲಿ ನಾಲ್ಕೂವರೆ ವರ್ಷದ ಬಾಲಕಿ ಸಿಕ್ಕಿದ್ದು, ಪೋಷಕರ ಪತ್ತೆಗೆ ಮಕ್ಕಳ ರಕ್ಷಣಾ ಘಟಕ ಮುಂದಾಗಿದೆ.
ಮುರುಘಾ ಮಠದ ಹಾಸ್ಟೆಲ್‌ನಲ್ಲಿ ಪತ್ತೆಯಾದ ಬಾಲಕಿಗೆ ಪೋಷಕರು ಇಲ್ಲ ಎಂಬ ಸಂಗತಿ ವಿಚಾರಣೆ ವೇಳೆ ರಕ್ಷಣಾ ಘಟಕದ ಗಮನಕ್ಕೆ ಬಂದಿದೆ. ಮಗುವನ್ನು ರಕ್ಷಿಸಿ ಮಡಿಲು ದತ್ತು ಕೇಂದ್ರದಲ್ಲಿ ಪೋಷಣೆ ಮಾಡಲಾಗುತ್ತಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.