ಮೊಳಕಾಲ್ಮುರು: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಏಕಾಏಕಿ ಆರೋಗ್ಯ ಸಚಿವ ಸ್ಥಾನ ಬದಲಾವಣೆ ಮಾಡಿ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಿರುವ ಪಕ್ಷದ ಕ್ರಮಕ್ಕೆ ತಾಲ್ಲೂಕಿನಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದು ಪಕ್ಷದ ಕ್ರಮವೇ ಇರಬಹುದು. ಆದರೆ, ಕೊರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಆರೋಗ್ಯ ಖಾತೆಯನ್ನು ಯಶಸ್ವಿಯಾಗಿ ಶ್ರೀರಾಮುಲು ನಿಭಾಯಿಸಿದ್ದಾರೆ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ರಾಜ್ಯದ ಎಲ್ಲ ಜಿಲ್ಲೆಗಳ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದ್ದಾರೆ. ಸಿಬ್ಬಂದಿ, ರೋಗಿಗಳ ಸಮಸ್ಯೆ ಆಲಿಸಿ ಪರಿಹಾರ ಮಾಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಖಾತೆ ಬದಲಾವಣೆ ಮಾಡಿರುವುದು ಜನರಿಗೆ ತಪ್ಪು ಸಂದೇಶ ಹೋಗಲು ಎಡೆ ಮಾಡಿಕೊಟ್ಟಿದೆ ಎಂದು ಅಖಿಲ ಕರ್ನಾಟಕ ಶ್ರೀರಾಮುಲು ಅಭಿಮಾನಿಗಳ ಸೈನ್ಯದ ರಾಜ್ಯ ಘಟಕದ ಅಧ್ಯಕ್ಷ ಬಿ.ವಿಜಯ್ ಹೇಳಿದರು.
‘ಬದಲಾವಣೆಗೆ ಸಮಯವಿತ್ತು, ಏಕಾ-ಏಕಿ ಮಾಡಿರುವುದು ಸರಿಯಲ್ಲ. ಜತೆಗೆ ಹೆಚ್ಚುವರಿಯಾಗಿ ನೀಡಿದ್ದ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಇದು ಹಿಂದುಳಿದ ಜನಾಂಗಕ್ಕೆ ಮಾಡಿರುವ ಅವಮಾನ. ಕೂಡಲೇ ಪಕ್ಷವು ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಉಪಮುಖ್ಯಮಂತ್ರಿ ಸ್ಥಾನದ ಜತೆಗೆ ಹಿಂದುಳಿದ ವರ್ಗಗಳ ಖಾತೆಯನ್ನು ನೀಡಬೇಕು’ ಎಂದರು.
ಜಿಲ್ಲಾ ನಾಯಕ ಸಮಾಜ ಯುವ ಘಟಕದ ಬಿ.ಟಿ.ಸುಮೇಂದ್ರ, ‘ಪಕ್ಷದ ಭರವಸೆಯಂತೆ ಡಿಸಿಎಂ ಜತೆ ಹಿಂದುಳಿದ ವರ್ಗಗಳ ಖಾತೆಯನ್ನೂ ನೀಡಬೇಕು. ಈ ಹುನ್ನಾರ ಸರಿಪಡಿಸದಿದ್ದಲ್ಲಿ ಹೋರಾಟದ ರೂಪುರೇಷೆ ಮಾಡಲಾಗುವುದು’ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ
ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯ ಸಚಿವ ಸ್ಥಾನ ತೆಗೆದಿರುವುದಕ್ಕೆ ಹಲವರು ತಮ್ಮದೇ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವರು ‘ಪರಿಶಿಷ್ಟ ಜನಾಂಗಕ್ಕೆ ಮಾಡಿದ ಅನ್ಯಾಯ’ ಎಂದು ಬರೆದಿದ್ದಾರೆ. ಮತ್ತೆ ಕೆಲವರು ‘ಮತ್ತೆ ಉದಯಿಸಲಿ ಬಿಎಸ್‌ಆರ್ ಪಕ್ಷ’ ಎಂದು ಆಗ್ರಹಿಸಿದ್ದಾರೆ. ‘ನಮ್ಮ ನಾಯಕನ ಶಕ್ತಿ ಏನು ಎಂಬುದನ್ನು ತೋರಿಸುವ ಕಾಲ ಬಂದಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.