ಚಿಕ್ಕಜಾಜೂರು: ಸಮೀಪದ ಹಿರೇಎಮ್ಮಿಗನೂರು ಗ್ರಾಮ ದೇವರು ಕಲ್ಲೇಶ್ವರ ಹಾಗೂ ಆಂಜನೇಯ ಸ್ವಾಮಿಯ ರಥೋತ್ಸವ ಮಂಗಳವಾರ ಸಂಜೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಕಲ್ಲೇಶ್ವರ ಹಾಗೂ ಆಂಜನೇಯ ಸ್ವಾಮಿಗಳಿಗೆ ವಿಶೇಷ ಪೂಜೆ, ಅರ್ಚನೆಗಳು ನಡೆದವು. ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಗಣೇಶ್, ಬಕ್ಕೇಶ್ ಹಾಗೂ ಅವರ ಕುಟುಂಬದವರು ಕಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಂಜೆ ಕಲ್ಲೇಶ್ವರ ಹಾಗೂ ಆಂಜನೇಯ ಸ್ವಾಮಿಗಳ ಉತ್ಸವ ಮೂರ್ತಿಗಳನ್ನು ಪ್ರತ್ಯೇಕ ಪಲ್ಲಕ್ಕಿಗಳಲ್ಲಿ ಕೂರಿಸಿ, ಕಲ್ಲೇಶ್ವರ ವೀರಗಾಸೆ ತಂಡದ ನೃತ್ಯ, ನಂದಿ ಕೋಲು, ಡೊಳ್ಳು ಕುಣಿತ, ಮದ್ದಳೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ಸಂಜೆಯಾಗುತ್ತಲೇ ಉತ್ಸವ ಮೂರ್ತಿಗಳನ್ನು ರಥದ ಬಳಿ ಕರೆ ತರಲಾಯಿತು. ಹೊಸ ಬಟ್ಟೆ, ಹೂವು ಮತ್ತು ಹೂವಿನ ಹಾರಗಳಿಂದ ಅಲಂಕಾರ ಮಾಡಿದ ಬೃಹತ್ ರಥದಲ್ಲಿ ಉತ್ಸವ ಮೂರ್ತಿಗಳನ್ನು ಕೂರಿಸಲಾಯಿತು. ದೊಡ್ಡೆಡೆ ಸೇವೆಯನ್ನು ನೆರವೇರಿಸಲಾಯಿತು.
ಅರ್ಚಕರು ಮಹಾ ಮಂಗಳಾರತಿ ಮಾಡುತ್ತಿದ್ದಂತೆ ಭಕ್ತರು ರಥದ ಚಕ್ರಗಳಿಗೆ ತೆಂಗಿನ ಕಾಯಿ ಹೊಡೆದು ಭಕ್ತಿ ಸಮರ್ಪಿಸಿದರು. ರಥೋತ್ಸವಕ್ಕೆ ಆಗಮಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ಪುತ್ರರಾದ ಎಸ್.ಎಸ್. ಮಲ್ಲಿಕಾರ್ಜುನ್, ಬಕ್ಕೇಶ್, ಗಣೇಶ್ ಅವರು ಸಾವಿರಾರು ಭಕ್ತರೊಂದಿಗೆ ರಥವನ್ನು ಎಳೆದರು.
ಜಿಲ್ಲೆಯ ಹಾಗೂ ದಾವಣಗೆರೆ ಜಿಲ್ಲೆಯ ವಿವಿಧ ಕಡೆಗಳಿಂದ ಬಂದ ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ರಾತ್ರಿ ಸ್ವಾಮಿಗೆ ಓಕುಳಿ ನಡೆಸಲಾಯಿತು. ಇದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು ಎಂದು ಕಲ್ಲೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.